ಬೆಂಗಳೂರು: ಜಲಸಂಪನ್ಮೂಲ ಇಲಾಖೆಯಲ್ಲಿನ ಗ್ರೂಪ್ -ಸಿ ವೃಂದದ ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳ ನೇಮಕಾತಿಯ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಮುಂದೂಡಲಾಗಿದೆ. ಒಟ್ಟು 155 ಪರಿಶಿಷ್ಟ ಜಾತಿಯ ಬ್ಯಾಕ್‌ಲಾಗ್ ಹುದ್ದೆಗಳ ನೇಮಕಕ್ಕೆ ಅಧಿಸೂಚನೆ (SDA Recruitment 2022) ಹೊರಡಿಸಲಾಗಿತ್ತು. ಜುಲೈ 11 ರಿಂದ (ಇಂದಿನಿಂದ) ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಸಲಾಗುವುದು ಎಂದು ಪ್ರಕಟಿಸಲಾಗಿತ್ತು.
ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ತಾಂತ್ರಿಕ ಕಾರಣಾಂತರಗಳಿಂದ ಅನಿರ್ಧಿಷ್ಟ ಅವಧಿಯವರೆಗೆ ಮುಂದೂಡಲಾಗಿದೆ. ಆನ್‌ಲೈನ್ ಅರ್ಜಿ ಸಲ್ಲಿಕೆಯ ಪ್ರಾರಂಭಿಕ ಹಾಗೂ ಕೊನೆಯ ದಿನಾಂಕಗಳನ್ನು ಮುಂದೆ ಪ್ರಕಟಿಸಲಾಗುವುದು ಎಂದು ನೇಮಕಾತಿ ಆಯ್ಕೆ ಸಮಿತಿಯ ಅಧ್ಯಕ್ಷರೂ ಆಗಿರುವ ಜಲ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯ ಮುಖ್ಯ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಂದು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ ಎಂಬ ಮಾಹಿತಿಯನ್ನು ಇಲಾಖೆಯ ವೆಬ್‌ಸೈಟ್‌ನಲ್ಲಿಯೇ ಒದಗಿಸಲಾಗುತ್ತದೆ. ಅಭ್ಯರ್ಥಿಗಳು ವೆಬ್‌ಸೈಟ್ ಅನ್ನು ನೋಡುತ್ತಿರಬೇಕೆಂದು ಪ್ರಕಟಣೆಯಲ್ಲಿ ಸೂಚಿಸಲಾಗಿದೆ. ವೆಬ್ ವಿಳಾಸ ಇಂತಿದೆ; https://waterresources.karnataka.gov.in/new-page/Recruitment/en
ಈ ಹುದ್ದೆಗೆ ವಿದ್ಯಾರ್ಹತೆ ಏನು?
ದ್ವಿತೀಯ ಪಿಯುಸಿಯಲ್ಲಿ ಅಥವಾ ಸಿಬಿಎಸ್‌ಸಿ/ ಐಎಸ್‌ಸಿ ನಡೆಸುವ ಕ್ಲಾಸ್ 10+2 ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಇದಲ್ಲದೆ, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ ವತಿಯಿಂದ ನಡೆಸುವ ಉನ್ನತ ಪ್ರೌಢ ಶಿಕ್ಷಣ ಕೋರ್ಸ್ ಮಾಡಿರುವವರೂ ಅರ್ಜಿ ಸಲ್ಲಿಸಬಹುದು.
ಮೂರು ವರ್ಷದ ಡಿಪ್ಲೊಮಾ ಅಥವಾ ಎರಡು ವರ್ಷಗಳ ಐಟಿಐ ಕೋರ್ಸ್ ಅಥವಾ ಎರಡು ವರ್ಷಗಳ ವೃತ್ತಿ ಶಿಕ್ಷಣ ಡಿಪ್ಲೊಮಾ (ಜೆಒಸಿ/ಜೆಓಡಿಸಿ) ಅಭ್ಯರ್ಥಿಗಳು ಎನ್‌ಐಒಎಸ್‌ನ ವತಿಯಿಂದ ನಡೆಸುವ ಒಂದು ಭಾಷಾ ಕೋರ್ಸ್ ಮತ್ತು ಒಂದು ಶೈಕ್ಷಣಿಕ ವಿಷಯದಲ್ಲಿ (ದೂರ ಕಲಿಕೆ ಮಾದರಿಯಲ್ಲಿ) ಅಥವಾ ಪದವಿ ಪೂರ್ವ ಮಂಡಳಿಯು ನಡೆಸುವ ಪರೀಕ್ಷೆಯಲ್ಲಿ ಒಂದು ಭಾಷೆ ಮತ್ತು ಒಂದು ವಿಷಯದಲ್ಲಿ ಉತ್ತೀರ್ಣರಾಗಿದ್ದಲ್ಲಿ ಮಾತ್ರ ಪಿಯುಸಿಗೆ ತತ್ಸಮಾನವೆಂದು ಪರಿಗಣಿಸಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ.
ನೇಮಕ ಹೇಗೆ?
ಇದು ಬ್ಯಾಕ್‌ಲಾಗ್ ಹುದ್ದೆಗಳ ವಿಶೇಷ ನೇಮಕಾತಿಯಾಗಿದ್ದು, ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲಾಗುವುದಿಲ್ಲ. ಶೈಕ್ಷಣಿಕ ಅರ್ಹತಾ ಪರೀಕ್ಷೆಯಲ್ಲಿ ಗಳಿಸಿದ ಒಟ್ಟು ಶೇಕಡಾವಾರು ಅಂಕಗಳು ಹಾಗೂ ವಯೋಮಿತಿ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನೂ ಪಾವತಿಸಬೇಕಾಗಿಲ್ಲ.
ನೇಮಕಾತಿಯ ಹೆಚ್ಚಿನ ಮಾಹಿತಿಗೆ ಅಧಿಸೂಚನೆ ಇಲ್ಲಿದೆ;
ವೇತನ ಎಷ್ಟಿರುತ್ತದೆ?
ದ್ವಿತೀಯ ದರ್ಜೆ ಸಹಾಯಕರ ಬ್ಯಾಕ್‌ಲಾಗ್ ಹುದ್ದೆಗಳು ಗ್ರೂಪ್ ಸಿ ಹುದ್ದೆಗಳೆಂದು ಪರಿಗಣಿಸಲ್ಪಟ್ಟಿವೆ. ವೇತನ ಶ್ರೇಣಿ ಇಂತಿದೆ; 21,400-500-24,400-550-24,600-600-27,000-650-29,600-750-32,600-850-36,000-950-39,800-1,100-42,000 ರೂ. ಇದಲ್ಲದೆ ನಿಯಮಾನುಸಾರ ಕಾಲಕಾಲಕ್ಕೆ ಅನ್ವಯವಾಗುವ ಇತರ ಭತ್ಯೆಗಳನ್ನೂ ನೀಡಲಾಗುತ್ತದೆ.
ಇದನ್ನೂ ಓದಿ |Teacher Recruitment 2022 | ಅರ್ಹ ಅಭ್ಯರ್ಥಿಗಳ ಕೊರತೆ ಎದುರಾದರೆ ಮತ್ತೊಮ್ಮೆ ಸಿಇಟಿ