Site icon Vistara News

Kar TET 2022 | ಶಿಕ್ಷಕರ ಅರ್ಹತಾ ಪರೀಕ್ಷೆಗೆ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

KTET Exam 2022

ಸಾರ್ವಜನಿಕ ಶಿಕ್ಷಣ ಇಲಾಖೆಯು ಈಗಾಗಲೇ ಪ್ರಕಟಿಸಿದಂತೆ ‘ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ’ಯನ್ನು (ಟಿಇಟಿ) (Kar TET 2022 ) ನವೆಂಬರ್‌ 6ರ ಭಾನುವಾರದಂದೇ ನಡೆಸಲಿದ್ದು, ಪರೀಕ್ಷೆಗೆ ಅರ್ಜಿಯನ್ನು ಆಹ್ವಾನಿಸಿದೆ. ಎಂದಿನಂತೆ ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಸೆಪ್ಟೆಂಬರ್‌ 30 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ.

ಅರ್ಹತೆಗಳೇನು?
1 ರಿಂದ 5ನೇ ತರಗತಿಗಳಿಗೆ ಶಿಕ್ಷಕರಾಗಲು ಸೀನಿಯರ್ ಸೆಕೆಂಡರಿ/ಪಿಯುಸಿ/ತತ್ಸಮಾನ ವಿದ್ಯಾರ್ಹತೆಯಲ್ಲಿ ಕನಿಷ್ಠ ಶೇ.50 (ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು ಶೇ.45) ಅಂಕಗಳನ್ನು ಪಡೆದಿರಬೇಕು ಮತ್ತು ಶಿಕ್ಷಣದಲ್ಲಿ (D.El.Ed) ಎರಡು ವರ್ಷಗಳ ಡಿಪ್ಲೊಮಾ ಪಡೆದಿರಬೇಕು ಅಥವಾ ವಿಶೇಷ ಶಿಕ್ಷಣದಲ್ಲಿ ಎರಡು ವರ್ಷದ ಡಿಪ್ಲೊಮಾ ಮಾಡಿರಬೇಕು. ಬಿಇಡಿ ಪದವಿ ಪಡೆದವರೂ ಅರ್ಜಿ ಸಲ್ಲಿಸಬಹುದು.
ಇವರೆಲ್ಲರೂ ಟಿಇಟಿ ಪರೀಕ್ಷೆಯಲ್ಲಿ ಪತ್ರಿಕೆ-1 ಅನ್ನು ಬರೆಯಲು ಅರ್ಹರಾಗಿರುತ್ತಾರೆ.

6 ರಿಂದ 8ನೇ ತರಗತಿಗೆ ಶಿಕ್ಷಕರಾಗಲು ಪದವಿಯಲ್ಲಿ ಕನಿಷ್ಠ ಶೇ. 50 (ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು ಶೇ.45) ಅಂಕಗಳನ್ನು ಪಡೆದಿರಬೇಕು ಮತ್ತು ಎರಡು ವರ್ಷಗಳ D.El.Ed ಕೋರ್ಸಿನ ತೇರ್ಗಡೆಯಾಗಿರಬೇಕು ಅಥವಾ ಬಿ.ಇಡಿಯಲ್ಲಿ ಅಥವಾ ನಾಲ್ಕು ವರ್ಷಗಳ B.El.Ed ಯಲ್ಲಿ ಅಥವಾ ಅಥವಾ ನಾಲ್ಕು ವರ್ಷಗಳ ಎಲಿಮೆಂಟರಿ ಶಿಕ್ಷಣದ ಪದವಿಯನ್ನು ಪಡೆದಿರಬೇಕು. ಬಿಎ/ಬಿಎಸ್ಸಿ ಪದವಿ ಮತ್ತು ಶಿಕ್ಷಣದಲ್ಲಿ ಎರಡು ವರ್ಷಗಳ ಡಿಪ್ಲೊಮಾ ಪಡೆದವರು ಕೂಡ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

1 ರಿಂದ 8ನೇ ತರಗತಿಗಳಿಗೆ ಶಿಕ್ಷಕರಾಗಲು ಸೀನಿಯರ್ ಸೆಕೆಂಡರಿ/ಪಿಯುಸಿ/ತತ್ಸಮಾನ ವಿದ್ಯಾರ್ಹತೆಯಲ್ಲಿ ಕನಿಷ್ಠ ಶೇ.50(ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು ಶೇ.45) ಅಂಕಗಳನ್ನು ಗಳಿಸಿರಬೇಕು ಮತ್ತು ನಾಲ್ಕು ವರ್ಷಗಳ ಎಲಿಮೆಂಟರಿ ಶಿಕ್ಷಣ ಪದವಿಯನ್ನು ಹೊಂದಿರಬೇಕು. ಈ ಅಭ್ಯರ್ಥಿಗಳು ಟಿಇಟಿ ಪರೀಕ್ಷೆಯಲ್ಲಿ ಎರಡೂ ಪತ್ರಿಕೆಗಳನ್ನು ಬರೆಯಲು ಅರ್ಹರಾಗಿರುತ್ತಾರೆ.

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ: https://sts.karnataka.gov.in/TET/

ಗಮನಿಸಿ: ಅಂತಿಮ ವರ್ಷದಲ್ಲಿ /ಸೆಮಿಸ್ಟರ್‌ನಲ್ಲಿ ಓದುತ್ತಿರುವ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಬಹುದಾಗಿದೆ. ಈ ಪರೀಕ್ಷೆ ಬರೆಯಲು ವಯೋಮಿತಿ ಇರುವುದಿಲ್ಲ. ಎನ್‌ಸಿಟಿಇಯಿಂದ ಮಾನ್ಯತೆ ಪಡೆದಂತಹ ಡಿಪ್ಲೊಮಾ/ ಪದವಿ ಕೋರ್ಸುಗಳನ್ನು ಮಾತ್ರ ವಿದ್ಯಾರ್ಹತೆಯಲ್ಲಿ ಪರಿಗಣಿಸಲಾಗಿದೆ.

ಎರಡು ವರ್ಷ ಡಿಎಲ್‌ಇಡಿ ಕೋರ್ಸಿನ ಅಂತಿಮ ವರ್ಷದ ಪರೀಕ್ಷೆಗೆ ಹಾಜರಾಗಿ ಫಲಿತಾಂಶ ನಿರೀಕ್ಷೆಯಲ್ಲಿರುವ ಹಾಗೂ ಎರಡು ವರ್ಷದ ಬಿ.ಇಡಿ ಕೋರ್ಸಿನ ಅಂತಿಮ ವರ್ಷದ ಪರೀಕ್ಷೆಗೆ ಹಾಜರಾಗಿ ಫಲಿತಾಂಶ ನಿರೀಕ್ಷಿಸುತ್ತಿರುವ ಅಭ್ಯರ್ಥಿಗಳಿಗೆ ಶಿಕ್ಷಕರ ಅರ್ಹತಾ ಪರೀಕ್ಷೆ ಬರೆಯಲು ತಾತ್ಕಾಲಿಕವಾಗಿ ಅನುಮತಿ ನೀಡಲಾಗಿದ್ದು, ಅಂತಿಮ ವರ್ಷದ ಪರೀಕ್ಷೆಯಲ್ಲಿ ಉತ್ತೀರ್ಣರಾದಲ್ಲಿ ಮಾತ್ರ ಕರ್ನಾಟಕ ಶಿಕ್ಷಕರ ಅರ್ಹತಾ ಪ್ರಮಾಣ ಪತ್ರ ಮಾನ್ಯ ಮಾಡಲಾಗುತ್ತದೆ.

ಅರ್ಜಿ ಶುಲ್ಕ ಎಷ್ಟು?
ಆನ್‌ಲೈನ್‌ನಲ್ಲಿಯೇ (ಇಂಟರ್‌ನೆಟ್‌ ಬ್ಯಾಂಕಿಂಗ್‌ ಮತ್ತು ಯುಪಿಐ ಮೂಲಕ) ಅರ್ಜಿ ಶುಲ್ಕ ಪಾವತಿಸಲು ಅವಕಾಶ ನೀಡಲಾಗಿದೆ. ಶುಲ್ಕ ಪಾವತಿಸಲು ಕೂಡ ಸೆಪ್ಟೆಂಬರ್‌ 30 (ಮಧ್ಯರಾತ್ರಿ ೧೨ ಗಂಟೆಯವರೆಗೆ) ಕೊನೆಯ ದಿನವಾಗಿರುತ್ತದೆ.‌ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಚಲನ್‌ ಮೂಲಕವೂ ಅರ್ಜಿ ಶುಲ್ಕ ಪಾವತಿಸಲು ಅವಕಾಶ ನೀಡಲಾಗಿದೆ.

ವಿಶ್ವವಿದ್ಯಾಲಯ ಧನಸಹಾಯ ಆಯೋಗ ನಡೆಸುವ ‘ನೆಟ್’, ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆ (ಕೆ-ಸೆಟ್) ಮಾದರಿಯಲ್ಲಿಯೇ ಟಿಇಟಿ ಕೂಡ ನಡೆಯುತ್ತಿದೆ. ಭಾಷಾ ವಿಷಯಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ವಿಷಯಗಳ ಪ್ರಶ್ನೆಗಳನ್ನು ಕನ್ನಡ, ಇಂಗ್ಲಿಷ್, ಉರ್ದು, ತಮಿಳು, ತೆಲುಗು, ಹಿಂದಿ ಮತ್ತು ಮರಾಠಿ ಭಾಷೆಯಲ್ಲಿ ನೀಡಲಾಗಿರುತ್ತದೆ.

ಅಭ್ಯರ್ಥಿಗಳು ಎಷ್ಟು ಬಾರಿ ಬೇಕಾದರೂ ಈ ಅರ್ಹತಾ ಪರೀಕ್ಷೆ ಬರೆಯಬಹುದಾಗಿದೆ. ಹೆಚ್ಚಿನ ಅಂಕ ಪಡೆಯಲು ಬಯಸುವವರು ಮರು ಪರೀಕ್ಷೆಯನ್ನು ಸಹ ತೆಗೆದುಕೊಳ್ಳಬಹುದು. ಈ ಪರೀಕ್ಷೆಯ ಅಂಕಗಳನ್ನು ಶಿಕ್ಷಕರ ನೇಮಕಾತಿಗೆ ಮಾನದಂಡವನ್ನಾಗಿ ಪರಿಗಣಿಸಲಾಗುತ್ತದೆ.

ಇತ್ತ ಗಮನಿಸಿ

ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌ ವಿಳಾಸ: https://schooleducation.kar.nic.in/

ಇದನ್ನೂ ಓದಿ | Teacher Recruitment 2022 | ಸರ್ಕಾರಿ ಶಿಕ್ಷಕರ ನೇಮಕಾತಿ ಮತ್ತೆ ಯಾವಾಗ ನಡೆಯಬಹುದು?

Exit mobile version