Site icon Vistara News

ಶಿಕ್ಷಕರ ನೇಮಕಾತಿ ಪರೀಕ್ಷೆ: ಪ್ರವೇಶ ಪತ್ರ ಡೌನ್‌ಲೋಡ್‌ ಮಾಡಿಕೊಳ್ಳಿ

ಬೆಂಗಳೂರು: 15 ಸಾವಿರ ಶಿಕ್ಷಕರ ನೇಮಕಕ್ಕೆ ಸಂಬಂಧಿಸಿದಂತೆ ಮೇ 21 ಮತ್ತು 22 ರಂದು ಲಿಖಿತ ಪರೀಕ್ಷೆ ನಡೆಯಲಿದ್ದು, ಪ್ರವೇಶ ಪತ್ರವನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯು ವೆಬ್‌ನಲ್ಲಿ ಒದಗಿಸಿದೆ.
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಯೂಸರ್‌ ನೇಮ್‌ ಮತ್ತು ಪಾಸ್‌ವರ್ಡ್‌ನೊಂದಿಗೆ ಲಾಗಿನ್‌ ಆಗಿ ಪ್ರವೇಶ ಪತ್ರವನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಕಟ್ಟು ನಿಟ್ಟಿನ ಕ್ರಮ
ಇತ್ತೀಚೆಗೆ ಪಿಎಸ್‌ಐ ಸೇರಿದಂತೆ ವಿವಿಧ ಸರ್ಕಾರಿ ಹುದ್ದೆಗಳ ನೇಮಕಕ್ಕೆ ನಡೆದ ಲಿಖಿತ ಪರೀಕ್ಷೆಗಳಲ್ಲಿ ಅಕ್ರಮ ನಡೆದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಈ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸಲು ಇಲಾಖೆ ಕ್ರಮ ತೆಗೆದುಕೊಂಡಿದೆ. ಅಭ್ಯರ್ಥಿಗಳು ಪರೀಕ್ಷೆಯ ಆರಂಭದ ಸಮಯಕ್ಕಿಂತ ಒಂದು ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ಹಾಜರಿರಬೇಕೆಂದು ಸೂಚಿಸಲಾಗಿದೆ. ಎಲ್ಲ ಅಭ್ಯರ್ಥಿಗಳನ್ನು ಪರೀಕ್ಷಾ ಕೇಂದ್ರದಲ್ಲಿ ಎರಡು ಬಾರಿ ತಪಾಸಣೆಗೊಳಪಡಿಸಲಾಗುತ್ತದೆ.
ಮೊದಲಿಗೆ ಪೊಲೀಸ್‌ ಸಿಬ್ಬಂದಿ ತಪಾಸಣೆ ನಡೆಸಿದರೆ, ಎರಡನೇ ಬಾರಿಗೆ ಪರೀಕ್ಷಾ ಕೊಠಡಿಗೆ ಪ್ರವೇಶಿಸುವ ಮುನ್ನ ಕೊಠಡಿ ಮೇಲ್ವಿಚಾರಕರು ತಪಾಸಣೆ ನಡೆಸಲಿದ್ದಾರೆ.
ಈ ತಪಾಸಣೆಗಳನ್ನು ನಡೆಸಬೇಕಾಗಿರುವ ಕಾರಣದಿಂದ ಪರೀಕ್ಷೆ ಪ್ರಾರಂಭವಾಗುವುದಕ್ಕಿಂತ ಅರ್ಧಗಂಟೆ ಮೊದಲು ಪರೀಕ್ಷಾ ಕೇಂದ್ರಗಳ ಪ್ರವೇಶ ಬಾಗಿಲನ್ನು ಮುಚ್ಚಲಾಗುತ್ತದೆ ಎಂದು ಇಲಾಖೆಯು ತಿಳಿಸಿದೆ.
ಕೈಗಡಿಯಾರ, ಮೊಬೈಲ್‌, ಕ್ಯಾಲ್‌ಕ್ಯುಲೇಟರ್‌, ಪೇಜರ್‌, ಬ್ಲೂಟೂತ್‌ ಹಾಗೂ ಇತರೆ ಎಲೆಕ್ಟ್ರಾನಿಕ್ಸ್‌ ವಸ್ತುಗಳನ್ನು ಮತ್ತು ಲಾಗ್‌ಟೇಬಲ್‌, ಬಿಳಿ ಫ್ಲೂಯಿಡ್‌, ಬೆಂಕಿ ಪೊಟ್ಟಣ ಅಥವಾ ಸಿಗರೇಟ್‌ ಲೈಟರ್‌ ಮುಂತಾದ ವುಸ್ತುಗಳನ್ನು ಪರೀಕ್ಷಾ ಕೊಠಡಿಯೊಳಗೆ ತರುವುದನ್ನು ನಿಷೇಧಿಸಲಾಗಿದೆ.

ಕೊರೊನಾ ನಿಯಮ ಪಾಲಿಸಿ
ಕೊರೊನಾ ಸೋಂಕು ಹರಡುವಿಕೆಯ ಅಪಾಯ ಇಲ್ಲದೇ ಇದ್ದರೂ ಮುನ್ನೆಚ್ಚರಿಕೆ ಕ್ರಮಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯು ತೆಗೆದುಕೊಂಡಿದೆ.
ಪರೀಕ್ಷೆಗೆ ಹಾಜರಾಗುವ ಪ್ರತಿ ಅಭ್ಯರ್ಥಿಯು ಕಡ್ಡಾಯವಾಗಿ ಮುಖಗವಸು (ಫೇಸ್ ಮಾಸ್ಕ್) ಧರಿಸಿರಬೇಕು. ಪ್ರತಿಯೊಬ್ಬರೂ ಕೈಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳಬೇಕು. ತಮ್ಮದೇ ಆದ ನೀರಿನ ಬಾಟಲಿ ಬಳಸಬೇಕು ಹಾಗೂ ಪರೀಕ್ಷಾ ಕೇಂದ್ರ ಹಾಗೂ ಕೊಠಡಿಯಲ್ಲಿ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಕಾಯ್ದುಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಅಡ್ಮಿಷನ್ ಟಿಕೆಟ್ ಡೌನ್‌ಲೋಡ್‌ ಹೇಗೆ?

  1. ಅಭ್ಯರ್ಥಿಗಳು www.schooleducation.kar.nic.in ವೆಬ್‍ಸೈಟ್‍ನಲ್ಲಿ ಪ್ರಕಟಿಸಿರುವ Click here to download the admission ticket ಲಿಂಕ್‍ನ್ನು ಕ್ಲಿಕ್ ಮಾಡಿ.
  2. ನಂತರ ವೆಬ್ ಪೇಜಿನಲ್ಲಿ ಕಾಣುವ Download Hall Ticket ಬಟನ್ ಕ್ಲಿಕ್ ಮಾಡಿ
  3. ತದನಂತರದ ವೆಬ್ ಪೇಜಿನಲ್ಲಿ ಅಭ್ಯರ್ಥಿಯು ತನ್ನ ಅರ್ಜಿ ನಮೂನೆಯಲ್ಲಿರುವ Application No ಮತ್ತು
    ಜನ್ಮ ದಿನಾಂಕವನ್ನು ನಮೂದಿಸಿ, Submit ಬಟನ್ ಕ್ಲಿಕ್ ಮಾಡಿ, ಅಡ್ಮಿಷನ್ ಟಿಕೆಟ್ ಡೌನ್‍ಲೌಡ್ ಮಾಡಿಕೊಳ್ಳಬಹುದು.
Exit mobile version