Site icon Vistara News

KEA Recruitment 2023 : ಕೆಇಎನಿಂದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ; ಬೆಲ್‌ ಸಮಯದ ವಿವರ ಪ್ರಕಟ

KCET application form correction

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ವಿವಿಧ ನೇಮಕಗಳಿಗೆ (KEA Recruitment 2023) ಸಂಬಂಧಿಸಿದಂತೆ ಜನವರಿ 29 ರಿಂದ ಫೆಬ್ರವರಿ 12 ರ ವರೆಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸುತ್ತಿದ್ದು, ಇದರ ವೇಳಾಪಟ್ಟಿ ಮತ್ತು ಬೆಲ್‌ ಸಮಯಗಳನ್ನು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಒದಗಿಸಿದೆ.

ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಈ ಮಾಹಿತಿಯನ್ನು ನೋಡಿಕೊಂಡೇ ಪರೀಕ್ಷೆಗೆ ಹಾಜರಾಗಬೇಕೆಂದು ಸೂಚಿಸಲಾಗಿದೆ. ಅಭ್ಯರ್ಥಿಗಳು ಯಾವ ಸಮಯದಲ್ಲಿ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಬೇಕು, ಪರೀಕ್ಷೆ ಯಾವಾಗ ಅರಂಭವಾಗುತ್ತದೆ, ಪ್ರಶ್ನೆ ಪತ್ರಿಕೆ ಯಾವಾಗ ನೀಡುತ್ತಾರೆ ಎಂಬೆಲ್ಲ ಸಮಯದ ಮಾಹಿತಿಯನ್ನು ಬೆಲ್‌ ಸಮಯದಲ್ಲಿ ನೀಡಲಾಗಿದೆ.

ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯಲ್ಲಿ ಗಲಾಟೆ ಮಾಡಿದರೆ, ಪರೀಕ್ಷಾ ಸಮಯದಲ್ಲಿ ವಿಷಯಕ್ಕೆ ಸಂಬಂಧಿಸಿದ ಪುಸ್ತಕ, ಚೀಟಿ ಇತ್ಯಾದಿಗಳನ್ನು ಬಳಸಿದರೆ, ಬೇರೆ ಅಭ್ಯರ್ಥಿಗಳ ಜೊತೆ ಮಾತನಾಡುವುದು ಅಥವಾ ಸಂಜ್ಞೆ ಮಾಡುವುದು ಮಾಡಿದರೆ, ಬೇರೆ ಅಭ್ಯರ್ಥಿಗಳ ಉತ್ತರ ಪತ್ರಿಕೆಯಿಂದ ನಕಲು ಮಾಡಿದರೆ, ಉತ್ತರ ಪತ್ರಿಕೆ ಬೇರೆ ಕಡೆ ವರ್ಗಾಯಿಸಿದರೆ, ಉತ್ತರ ಪತ್ರಿಕೆಯನ್ನು ಹರಿದು ಹಾಕುವುದು ಅಥವಾ ಇನ್ನಾವುದೇ ಪರೀಕ್ಷಾ ಅವ್ಯವಹಾರ ಮಾಡಿದಲ್ಲಿ ಅಂತಹ ಅಭ್ಯರ್ಥಿಗಳ ವಿರುದ್ಧ ಶಿಸ್ತು ಕ್ರಮ ಹಾಗು ಅಪರಾಧ ಮೊಕದ್ದಮೆ ಯನ್ನು ಹೂಡಲಾಗುವುದು ಎಂದು ಪ್ರಾಧಿಕಾರ ಎಚ್ಚರಿಸಿದೆ.

ಈಗಾಗಲೇ ಕೆಇಎ ಪ್ರವೇಶ ಪತ್ರವನ್ನು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಒದಗಿಸಿದ್ದು, ಅಭ್ಯರ್ಥಿಗಳು ವೆಬ್‌ಸೈಟ್‌ನಲ್ಲಿ ನೀಡಲಾಗಿರುವ ಲಿಂಕ್‌ನಲ್ಲಿ ಅರ್ಜಿ ಸಂಖ್ಯೆ ಮತ್ತು ಅಭ್ಯರ್ಥಿಯ ಹೆಸರು (ಮೊದಲ ನಾಲ್ಕು ಅಕ್ಷರಗಳು) ನೊಂದಿಗೆ ಲಾಗಿನ್‌ ಆಗಿ, ಪ್ರವೇಶ ಪತ್ರವನ್ನು ಡೌನ್‌ಲೋಡ್‌ ಮತ್ತು ಪ್ರಿಂಟ್‌ ಮಾಡಿಕೊಂಡು ಪರೀಕ್ಷೆಗೆ ಹಾಜರಾಗಬೇಕೆಂದು ಸೂಚಿಸಲಾಗಿದೆ.

ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಪ್ರವೇಶ ಪತ್ರದೊಂದಿಗೆ ಸರ್ಕಾರ ನೀಡಿದ ಯಾವುದಾದರೂ ಗುರುತಿನ ಚೀಟಿಯನ್ನು ತಂದಿರಬೇಕು. ಪ್ರವೇಶ ಪತ್ರ ಮತ್ತು ಗುರುತಿನ ಚೀಟಿ ಇಲ್ಲದೇ ಬರುವ ಯಾವುದೇ ಅಭ್ಯರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದಿಲ್ಲ ಎಂದು ಕೆಇಎ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರವೇಶ ಪತ್ರ ಡೌನ್‌ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್‌ (Click Here) ಮಾಡಿ.

ಯಾವೆಲ್ಲಾ ಪರೀಕ್ಷೆ ನಡೆಯುತ್ತಿದೆ?
ರಾಜ್ಯ ಬೀಜ ನಿಗಮ ನಿಯಮಿತ (KSSCL)ದಲ್ಲಿನ ಸಹಾಯಕ ವ್ಯವಸ್ಥಾಪಕರ ಹಾಗೂ ಹಿರಿಯ/ ಕಿರಿಯ/ ಬೀಜ ಸಹಾಯಕರು ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ ಜನವರಿ 30, 31 ಫೆಬ್ರವರಿ 1, 2, 3, 4, 5 ಮತ್ತು 12 ರಂದು ಪರೀಕ್ಷೆ ನಡೆಸಲಿದೆ. ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಲ್ಲಿನ ಪಶು ವೈದ್ಯಕೀಯ ಪರಿವೀಕ್ಷಕರ ಹುದ್ದೆಗಳಿಗೆ ಜನವರಿ 29 ಮತ್ತು ಫೆಬ್ರವರಿ 12 ರಂದು ನಡೆಸಲಾಗುತ್ತದೆ.

ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತದಲ್ಲಿ ಖಾಲಿ ಇರುವ ಅಸಿಸ್ಟೆಂಟ್‌ ಎಂಜಿನಿಯರ್‌, ಜೂನಿಯರ್‌ ಎಂಜಿನಿಯರ್‌ ಎಸ್‌ಡಿಎ ಮತ್ತು ಎಫ್‌ಡಿಎ ಹುದ್ದೆಗಳಿಗೆ ಜನವರಿ 29 ಫೆಬ್ರವರಿ 5, 6, 7 ಹಾಗೂ 12 ರಂದು ಲಿಖಿತ ಪರೀಕ್ಷೆ ನಡೆಸಲಾಗುತ್ತದೆ.

ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಲ್ಲಿನ ದ್ವಿತೀಯ ದರ್ಜೆ ಸಹಾಯಕರ (SDA) ಹುದ್ದೆಗಳ ನೇಮಕಕ್ಕೆ ಜನವರಿ 30 ಹಾಗೂ ಫೆಬ್ರವರಿ 1 ಮತ್ತು 12 ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತದೆ. ಫೆಬ್ರವರಿ 12 ರಂದು ಬಹುತೇಕವಾಗಿ ಎಲ್ಲ ಹುದ್ದೆಗಳಿಗೂ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ನಡೆಸಲಾಗುತ್ತದೆ.

ಹೆಚ್ಚಿನ ಮಾಹಿತಿಗೆ ಕೆಇಎ ವೆಬ್‌ಸೈಟ್‌ ವಿಳಾಸ: https://cetonline.karnataka.gov.in/kea/

ಇದನ್ನೂ ಓದಿ : KEA Recruitment 2023 : ಕೆಇಎ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮಾಸ್ಕ್‌ ಧರಿಸುವಂತಿಲ್ಲ!

Exit mobile version