ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆಆರ್‌ಐಡಿಎಲ್), ರಾಜ್ಯ ಬೀಜ ನಿಗಮ ನಿಯಮಿತ (KSSCL), ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವಿವಿಧ ಹುದ್ದೆಗಳ (KEA Recruitment 2023) ನೇಮಕಕ್ಕೆ ಸಂಬಂಧಿಸಿದಂತೆ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಿದೆ.
ಈ ನೇಮಕ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಅಭ್ಯರ್ಥಿಗಳು ಕೆಇಎ ವೆಬ್‌ಸೈಟ್‌ನಲ್ಲಿ ಅಂತಿಮ ಆಯ್ಕೆಪಟ್ಟಿಯನ್ನು ನೋಡಬಹುದಾಗಿದೆ. ಪಟ್ಟಿಯಲ್ಲಿ ಅಭ್ಯರ್ಥಿಗಳ ಹೆಸರು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅವರು ಪಡೆದಿರುವ ಅಂಕಗಳ ಮಾಹಿತಿಯನ್ನು ಒದಗಿಸಲಾಗಿದೆ. ಈ ಹಿಂದೆಯೇ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಿ, ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿರುವ ಹಿನ್ನೆಲೆಯಲ್ಲಿ ಈಗ ಪ್ರಕಟವಾಗಿರುವ ಅಂತಿಮ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿರುವುದಿಲ್ಲ.
ರಾಜ್ಯ ಬೀಜ ನಿಗಮ ನಿಯಮಿತ (KSSCL)ದಲ್ಲಿನ ಸಹಾಯಕ ವ್ಯವಸ್ಥಾಪಕರ ಹಾಗೂ ಹಿರಿಯ/ ಕಿರಿಯ/ ಬೀಜ ಸಹಾಯಕರು ಹುದ್ದೆಗಳಿಗೆ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಲ್ಲಿನ ಪಶು ವೈದ್ಯಕೀಯ ಪರಿವೀಕ್ಷಕರ ಹುದ್ದೆಗಳಿಗೆ ಹಾಗೂ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತದಲ್ಲಿ ಖಾಲಿ ಇದ್ದ ಅಸಿಸ್ಟೆಂಟ್ ಎಂಜಿನಿಯರ್, ಜೂನಿಯರ್ ಎಂಜಿನಿಯರ್ ಎಸ್‌ಡಿಎ ಮತ್ತು ಎಫ್‌ಡಿಎ ಹುದ್ದೆಗಳಿಗೆ ಈ ನೇಮಕ ಪ್ರಕ್ರಿಯೆ ನಡೆಸಲಾಗಿತ್ತು.
ಪರೀಕ್ಷೆಯ ವೇಳಾಪಟ್ಟಿ ಪ್ರಕಟ
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಮೂರು ನೇಮಕಾತಿ ಅಧಿಸೂಚನೆಗಳಿಗೆ ಸಂಬಂಧಿಸಿದಂತೆ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನೂ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರ (ಯುಜಿ) ನೇಮಕಕ್ಕೆ ಜುಲೈ 30 ರಂದು ಪರೀಕ್ಷೆ ನಡೆಯಲಿದೆ. ಅಂದು ಬೆಳಗ್ಗೆ 10-30 ರಿಂದ 12-30ರ ವರೆಗೆ ಪತ್ರಿಕೆ-1 ರ ಪರೀಕ್ಷೆ ನಡೆಸಲಾಗುತ್ತದೆ. ಮಧ್ಯಾಹ್ನ 2 ರಿಂದ 5 ಗಂಟೆಯವರೆಗೆ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ನಡೆಸಲಾಗುತ್ತದೆ.
ಬೆಂಗಳೂರು ಮೆಟ್ರೊ ರೈಲ್ ಕಾರ್ಪೋರೇಷನ್ ಲಿಮಿಟೆಡ್‌ನ (BMRCL) ವಿವಿಧ ಹುದ್ದೆಗಳಿಗೆ ನಡೆಸಲಾಗುವ ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದ್ದು, ಜುಲೈ 22, 23 ಮತ್ತು 30 ರಂದು ಪರೀಕ್ಷೆ ನಡೆಸಲಾಗುತ್ತದೆ. ಸ್ಟೇಷನ್ ಕಂಟ್ರೋಲರ್ / ಟ್ರೈನ್ ಆಪರೇಟರ್ ಹುದ್ದೆಗಳಿಗೆ ಜುಲೈ 22 ರಂದು ಮಧ್ಯಾಹ್ನ 2.30 ರಿಂದ to 4.30ರವರೆಗೆ ಪರೀಕ್ಷೆ ನಡೆಯಲಿದೆ. ಮೇಂಟೇನರ್ಸ್ ಸಿಸ್ಟಮ್ಸ್ ಮತ್ತು ಮೇಂಟೇನರ್ಸ್ ಸಿವಿಲ್ ಹುದ್ದೆಗಳಿಗೆ ಜುಲೈ 23 ರಂದು ಬೆಳಗ್ಗೆ 10-30 ರಿಂದ 12.30 ರವರೆಗೆ ಪರೀಕ್ಷೆ ನಡೆಸಲಾಗುತ್ತದೆ.
ಮೇಂಟೇನರ್ಸ್ ಸಿಸ್ಟಮ್ಸ್ ಮತ್ತು ಮೇಂಟೇನರ್ಸ್ ಸಿವಿಲ್ ಹುದ್ದೆಗಳ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ಜುಲೈ 30 ರಂದು ಬೆಳಗ್ಗೆ 10-30 ರಿಂದ 12.30 ರವರೆಗೆ ಪರೀಕ್ಷೆ ನಡೆಸಲಾಗುತ್ತದೆ. ಸ್ಟೇಷನ್ ಕಂಟ್ರೋಲರ್ / ಟ್ರೈನ್ ಆಪರೇಟರ್ ಹುದ್ದೆಯ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ಮಧ್ಯಾಹ್ನ 2.30 ರಿಂದ 4.30ರವರೆಗೆ ಪರೀಕ್ಷೆ ನಡೆಯಲಿದೆ.
ಸಿವಿಲ್ ನ್ಯಾಯಾದೀಶರ ಹುದ್ದೆಗಳ ನೇಮಕಕ್ಕೆ ನಡೆಸಲಾಗುವ ಪೂರ್ವಭಾವಿ ಪರೀಕ್ಷೆಯನ್ನು (ಪ್ರಿಲಿಮ್ಸ್) ಜುಲೈ 23 ರಂದು ಮಧ್ಯಾಹ್ನ 2.30 ರಿಂದ 4.30ರ ವರೆಗೆ ನಡೆಸಲಾಗುತ್ತದೆ ಎಂದು ಪ್ರಕಟಿಸಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿನ ಪ್ಯಾರಾ ಮೆಡಿಕಲ್ ಹುದ್ದೆಗಳ ನೇಮಕಕ್ಕೆ ನಡೆಸಲಾಗುವ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯನ್ನು ಜುಲೈ 30 ರಂದು ಮಧ್ಯಾಹ್ನ 2.30 ರಿಂದ 4.30ರವರೆಗೆ ಪರೀಕ್ಷೆ ನಡೆಸಲಾಗುತ್ತದೆ.
ಹೆಚ್ಚಿನ ಮಾಹಿತಿಗೆ ಕೆಇಎ ವೆಬ್‌ಸೈಟ್ ವಿಳಾಸ: https://cetonline.karnataka.gov.in/kea/
ಇದನ್ನೂ ಓದಿ: PDO Recruitment 2023 : ಪಿಡಿಒ ನೇಮಕಕ್ಕೆ ಮುಂದಾದ ಸರ್ಕಾರ; ಅರ್ಜಿ ಸಲ್ಲಿಸಲು ಈಗಲೇ ರೆಡಿಯಾಗಿ!