ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ದಿ ನಿಯಮಿತದಲ್ಲಿನ ಸಹಾಯಕ ಅಭಿಯಂತರರು ಗ್ರೇಡ್-1 ಸಿವಿಲ್, ಕಿರಿಯ ಅಭಿಯಂತರರು (ಸಿವಿಲ್), ಪ್ರಥಮ ದರ್ಜೆ ಸಹಾಯಕರು ಮತ್ತು ದ್ವಿತೀಯ ದರ್ಜೆ ಸಹಾಯಕರು ಹುದ್ದೆಗಳ ಮತ್ತು ಕರ್ನಾಟಕ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಲ್ಲಿನ ಕಿರಿಯ ಪಶುವೈದ್ಯಕೀಯ ಪರೀಕ್ಷಕರ (ಪಶುವೈದ್ಯ ಸಹಾಯಕರು) ಹುದ್ದೆಗಳ ನೇಮಕಾತಿಗೆ (KEA Recruitment 2023) ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿದೆ.
ಆಸಕ್ತರು ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಪರಿಶೀಲಿಸಲಬಹುದಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಇತ್ತೀಚೆಗೆ ಈ ನೇಮಕಕ್ಕೆ ಸಂಬಂಧಿಸಿದಂತೆ ಮೂಲ ದಾಖಲೆಗಳ ಪರಿಶೀಲನೆ ನಡೆಸಿತ್ತು. ಅದರಂತೆ ಒಟ್ಟು 205 ಅಭ್ಯರ್ಥಿಗಳಲ್ಲಿ 183 ಅಭ್ಯರ್ಥಿಗಳು ದಾಖಲಾತಿ ಪರಿಶೀಲನೆಗೆ ಹಾಜರಾಗಿದ್ದರು. ಗೈರುಹಾಜರಾದ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶವನ್ನೂ ನೀಡಲಾಗಿತ್ತು. ಈಗ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತ ಮತ್ತು ಕರ್ನಾಟಕ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ಒದಗಿಸಲಾದ ಹುದ್ದೆಗಳ ವರ್ಗಿಕರಣದಂತೆ, ಮೆರಿಟ್ ಹಾಗೂ ಮೀಸಲಾತಿ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ, ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಕೆಇಎ ಪ್ರಕಟಣೆಯಲ್ಲಿ ಹೇಳಿದೆ.
ಆಸಕ್ತರು ಇದಕ್ಕೆ ಸಂಬಂಧಿಸಿದಂತೆ ಜೂನ್ 07 ರ ಸಂಜೆ 5.30 ರೊಳಗೆ ಆಕ್ಷೇಪಣೆ ಸಲ್ಲಿಸಬಹುದಾಗಿದೆ. ಆಕ್ಷೇಪಣೆ ಸಲ್ಲಿಸಲು ಪೂರಕ ದಾಖಲೆಗಳನ್ನು ಒದಗಿಸಬೇಕು. ಅಂಚೆ ಮೂಲಕ ಅಥವಾ ಖುದ್ದಾಗಿ ಪ್ರಾಧಿಕಾರಕ್ಕೆ ಸಲ್ಲಿಸಬಹುದಾಗಿರುತ್ತದೆ ಎಂದು ಕೆಇಎ ಹೇಳಿದೆ.
ಸಹಾಯಕ ವ್ಯವಸ್ಥಾಪಕರ ಹುದ್ದೆಗೆ ಸಂದರ್ಶನ ಇಲ್ಲ
ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತದಲ್ಲಿನ ಸಹಾಯಕ ವ್ಯವಸ್ಥಾಪಕರ (ಕಾರ್ಯಚರಣೆ) ನೇಮಕಕ್ಕೆ ಸಂದರ್ಶನ ನಡೆಸಲಾಗುವುದಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತಿಳಿಸಿದೆ. ಅಧಿಸೂಚನೆಯಲ್ಲಿ ಗ್ರೂಪ್ ʼಬಿʼಯ ಈ ಹುದ್ದೆಗೆ ಸಂದರ್ಶನ ನಡೆಸಲಾಗುವುದು ಎಂದು ಪ್ರಕಟಿಸಲಾಗಿತ್ತು.
ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here ) ಮಾಡಿ.
ಕರ್ನಾಟಕ ನಾಗರೀಕ ಸೇವಾ (ನೇರ ನೇಮಕಾತಿ) (ಸಾಮಾನ್ಯ) (1ನೇ ತಿದ್ದುಪಡಿ) ನಿಯಮಗಳು, 2022 ರ ಪ್ರಕಾರ ಗ್ರೂಪ್-ಬಿ ಹುದ್ದೆಗಳಿಗೆ ಸಂದರ್ಶನ ಇರುವುದಿಲ್ಲವೆಂದು ಆದೇಶಿಸಿರುವುದರಿಂದ, ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತದಲ್ಲಿನ ಸಹಾಯಕ ವ್ಯವಸ್ಥಾಪಕರು (ಕಾರ್ಯಚರಣೆ) ಹುದ್ದೆಗೆ ಅಧಿಸೂಚಿಸಲಾಗಿದ್ದ ಸಂದರ್ಶನವನ್ನು ಹಿಂಪಡೆದು ಈಗಾಗಲೇ ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುವುದು ಎಂದು ಕೆಇಎಯು ಪ್ರಕಟಣೆಯಲ್ಲಿ ತಿಳಿಸಿದೆ.
ಹೆಚ್ಚಿನ ಮಾಹಿತಿಗೆ ಕೆಇಎ ವೆಬ್‌ಸೈಟ್ ವಿಳಾಸ: https://cetonline.karnataka.gov.in/kea/
ಇದನ್ನೂ ಓದಿ : IB Recruitment 2023 : ನೀವು ಇಂಟೆಲಿಜೆನ್ಸ್ ಆಫೀಸರ್ ಆಗಬೇಕೇ? ಈ ನೇಮಕದ ಸುದ್ದಿ ಓದಿ!