ಬೆಂಗಳೂರು: ಅರಣ್ಯ ಇಲಾಖೆಯು ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಮೀಸಲಿಟ್ಟ ವಲಯ ಅರಣ್ಯಾಧಿಕಾರಿಯ ಒಟ್ಟು 10 ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಿದ್ದು (KFD Recruitment 2022), ಬಿ.ಎಸ್ಸಿ (ಅರಣ್ಯ ಶಾಸ್ತ್ರ), ಬಿ.ಎಸ್ಸಿ (ವಿಜ್ಞಾನ) ಹಾಗೂ ನಿಗದಿತ ಎಂಜಿನಿಯರಿಂಗ್ ಪದವೀಧರರು ಅರ್ಜಿ ಸಲ್ಲಿಸಬಹುದಾಗಿದೆ.
ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಅರ್ಜಿ ಸಲ್ಲಿಸಲು ನವೆಂಬರ್ 19 (ಸಂಜೆ 5.30 ಗಂಟೆಯವರೆಗೆ) ಕೊನೆಯ ದಿನವಾಗಿರುತ್ತದೆ. ಅರ್ಜಿ ಶುಲ್ಕವನ್ನು ಪಾವತಿಸಲು ನವೆಂಬರ್ 23ರ ವರೆಗೆ ಅವಕಾಶವಿರುತ್ತದೆ.
ಒಟ್ಟು ಹತ್ತು ಹುದ್ದೆಗಳಲ್ಲಿ ಬಿಎಸ್ಸಿ (ಅರಣ್ಯಶಾಸ್ತ್ರ) ಪದವೀಧರರಿಗೆ ಐದು ಹುದ್ದೆ ಹಾಗೂ ಬಿಎಸ್ಸಿ (ವಿಜ್ಞಾನ) ಅಥವಾ ಎಂಜಿನಿಯರಿಂಗ್ ಪದವೀಧರರಿಗೆ ಐದು ಹುದ್ದೆಗಳನ್ನು ಮೀಸಲಿಡಲಾಗಿದೆ.
ವಿದ್ಯಾರ್ಹತೆ ಏನೇನು?
ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ ಅರಣ್ಯ ಶಾಸ್ತ್ರದಲ್ಲಿ ಪದವಿ ಪಡೆದಿರಬೇಕು ಅಥವಾ ಕೃಷಿ, ಅರಣ್ಯಶಾಸ್ತ್ರ, ತೋಟಗಾರಿಕೆ, ಪಶುವೈದ್ಯಕೀಯ ಮತ್ತು ಪಶುಸಂಗೋಪನಾ ವಿಜ್ಞಾನ, ಮೀನುಗಾರಿಕೆ, ವನ್ಯಜೀವಿ, ಪರಿಸರ ವಿಜ್ಞಾನ, ರಸಾಯನಶಾಸ್ತ್ರ, ಭೂ ವಿಜ್ಞಾನ, ಗಣಿತಶಾಸ್ತ್ರ, ಭೌತಶಾಸ್ತ್ರ, ಸಸ್ಯ ಶಾಸ್ತ್ರ, ಪ್ರಾಣಿ ಶಾಸ್ತ್ರ, ಸಂಖ್ಯಾಶಾಸ್ತ್ರ, ಕಂಪ್ಯೂಟರ್ ಅಪ್ಲಿಕೇಷನ್‌ನಲ್ಲಿ ಬಿಎಸ್ಸಿ ಪದವಿ ಪಡೆದಿರಬೇಕು. ಅಥವಾ ಕೃಷಿ, ಕೆಮಿಕಲ್, ಸಿವಿಲ್, ಇಲೆಕ್ಟ್ರಿಕಲ್, ಇಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್, ಕಂಪ್ಯೂಟರ್ ಸೈನ್ಸ್‌ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿರಬೇಕು.
ಶೈಕ್ಷಣಿಕ ವಿದ್ಯಾರ್ಹತೆಯಲ್ಲಿ ನಿಗದಿಪಡಿಸಿದ ಗರಿಷ್ಠ ಅಂಕಗಳಿಗೆ ಕನಿಷ್ಠ ಶೇ.50 ಅಂಕಗಳನ್ನು ಪಡೆದು ತೇರ್ಗಡೆಯಾಗಿರಬೇಕಾದದು ಕಡ್ಡಾಯ.
ಅರ್ಜಿ ಸಲ್ಲಿಸಲು ಲಿಂಕ್| https://www.recruitapp.in/rfo_2022/
ವಯೋಮಿತಿ ಎಷ್ಟು?
ಅಭ್ಯರ್ಥಿಗಳು ಕನಿಷ್ಠ 18 ವರ್ಷ. ಸಾಮಾನ್ಯ ಅಭ್ಯರ್ಥಿಗಳಿಗೆ 28 ವರ್ಷ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1ರ ಅಭ್ಯರ್ಥಿಗಳಿಗೆ 33 ಹಾಗೂ ಪ್ರವರ್ಗ 2ಎ, 2ಬಿ, 3ಎ, 3ಬಿ, ಹಿಂದುಳಿದ ಪ್ರವರ್ಗಗಳ ಅಭ್ಯರ್ಥಿಗಳಿಗೆ 31 ವರ್ಷ ಗರಿಷ್ಠ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.
ದೈಹಿಕ ಅರ್ಹತೆಯೂ ಇರಬೇಕು!
ಅಭ್ಯರ್ಥಿಗಳಿಗೆ ಶಾರೀರಿಕ ಮಾನದಂಡಗಳನ್ನು ನಿಗದಿಪಡಿಸಲಾಗಿರುತ್ತದೆ. ಪುರುಷ ಅಭ್ಯರ್ಥಿಗಳು ಕನಿಷ್ಠ 163 ಸೆಂ.ಮೀ. ಎತ್ತರವಿರಬೇಕು, ಸಾಮಾನ್ಯ ಸ್ಥಿತಿಯಲ್ಲಿ ಕನಿಷ್ಠ 79 ಸೆಂ.ಮೀ. ಎದೆ ಸುತ್ತಳಗೆ ಹೊಂದಿರಬೇಕು. ಎದೆಯ ಕನಿಷ್ಠ ಹಿಗ್ಗುವಿಕೆ 5 ಸೆಂ.ಮೀ. ಇರಬೇಕು.
ಮಹಿಳಾ ಅಭ್ಯರ್ಥಿಗಳು ಕನಿಷ್ಠ 150 ಸೆಂ.ಮೀ ಎತ್ತರವಿರಬೇಕು ಹಾಗೂ ಕನಿಷ್ಠ 40 ಕೆಜಿ ತೂಕವಿರಬೇಕು.
ನೇಮಕ ಹೇಗೆ?
ಮೊದಲಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷೆಯಲ್ಲಿ ಎರಡು ಪ್ರಶ್ನೆ ಪತ್ರಿಕೆಗಳಿರಲಿದ್ದು, ಪತ್ರಿಕೆ-1ರಲ್ಲಿ ಸಾಮಾನ್ಯ ಜ್ಞಾನ ಮತ್ತು ಆಪ್ಟಿಟ್ಯೂಡ್‌ಗೆ ಸಂಬಂಧಿಸಿದ ಪ್ರಶ್ನೆಗಳಿರಲಿವೆ. ಪ್ರಶ್ನೆಪತ್ರಿಕೆ-2 ಐಚ್ಛಿಕ ವಿಷಯಕ್ಕೆ ಸಂಬಂಧಿಸಿದ್ದಾಗಿದ್ದು, ಒಟ್ಟು 23 ಐಚ್ಛಿಕ ವಿಷಯಗಳಲ್ಲಿ ಅಭ್ಯರ್ಥಿಗಳು ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದಾಗಿರುತ್ತದೆ. ಲಿಖಿತ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು 1:10 ರ ಅನುಪಾತದಲ್ಲಿ ದೈಹಿಕ ತಾಳ್ವಿಕೆ ಪರೀಕ್ಷೆ, ದೈಹಿಕ ಕಾರ್ಯಸಮರ್ಥತೆ ಹಾಗೂ ವೈದ್ಯಕೀಯ ಪರೀಕ್ಷೆಗಳಿಗೆ ಆಹ್ವಾನಿಸಲಾಗುತ್ತದೆ.
ದೈಹಿಕ ತಾಳ್ವಿಕೆ ಪರೀಕ್ಷೆ, ದೈಹಿಕ ಕಾರ್ಯಸಮರ್ಥತೆ ಹಾಗೂ ವೈದ್ಯಕೀಯ ಪರೀಕ್ಷೆಗಳಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಡೆದ ಅಂಕಗಳ ಮೆರಿಟ್ ಆಧಾರದ ಮೇಲೆ ಮತ್ತು ಪ್ರಚಲಿತ ಚಾಲ್ತಿಯಲ್ಲಿರುವ ವೃಂದ ಮತ್ತು ನೇಮಕಾತಿ ನಿಯಮ ಹಾಗೂ ಮೀಸಲಾತಿ ನಿಯಮಗಳನುಸಾರ ಆಯ್ಕೆ ಮಾಡಲಾಗುತ್ತದೆ.
ವೇತನ ಎಷ್ಟಿರುತ್ತದೆ?
ಈ ಹುದ್ದೆಯ ವೇತನ ಶ್ರೇಣಿಯು ಇಂತಿದೆ: ರೂ. 40,900-1,100-46,400-1,250-53,900-1,450-62,600-1,650-72,500-1,900-78,200
ಹೆಚ್ಚಿನ ಮಾಹಿತಿಗೆ ವೆಬ್ | https://aranya.gov.in
ಇದನ್ನೂ ಓದಿ| KMF recruitment 2022 | ಕೆಎಂಎಫ್‌ನಲ್ಲಿ ಭರ್ಜರಿ ನೇಮಕ; 488 ಹುದ್ದೆಗಳಿಗೆ ಅರ್ಜಿ ಆಹ್ವಾನ