Site icon Vistara News

KPSC KAS results 2022 | ಗೆಜೆಟೆಡ್ ಪ್ರೊಬೇಷನರಿ ಹುದ್ದೆ; ಅಂತಿಮ ಆಯ್ಕೆ ಪಟ್ಟಿ ಪ್ರಕಟ

kpsc recruitment 2023 result of compulsory kannada examination held february 25 published

KPSC Recruitment 2023

ಬೆಂಗಳೂರು: ಕರ್ನಾಟಕ ಲೋಕ ಸೇವಾ ಆಯೋಗವು (ಕೆಪಿಎಸ್‌ಸಿ) 2017-18ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ (ಗ್ರೂಪ್-‘ಎ’ಮತ್ತು ಗ್ರೂಪ್- ‘ಬಿ’ವೃಂದದ) 106 ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ ಅಂತಿಮ ಆಯ್ಕೆ ಪಟ್ಟಿ (KPSC KAS results 2022) ಪ್ರಕಟಿಸಿದ್ದು, ಬೆಳಗಾವಿಯ ರಶ್ಮೀ ಎಸ್‌. ಜಕಾತಿ 889 ಅಂಕ ಪಡೆದ ಮೊದಲ ರ‍್ಯಾಂಕ್‌ ಪಡೆದಿದ್ದಾರೆ. ಎಂಜಿನಿಯರಿಂಗ್‌ ಪದವೀಧರರಾದ ರಶ್ಮೀ ಗ್ರೂಪ್‌ “ಬಿʼʼಯ ತಹಶೀಲ್ದಾರ್‌ ಹುದ್ದೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಬಾಗಲಕೋಟೆಯ ಚಿಕ್ಕಪ್ಪ ನಾಯಕ್‌ 839 ಅಂಕ ಪಡೆದು ಎರಡನೇ ಸ್ಥಾನದಲ್ಲಿದ್ದರೆ, 835 ಅಂಕ ಪಡೆದ ಬೆಂಗಳೂರಿನ ಕಾವ್ಯ ಯು ಎಸ್‌ ಮೂರನೇ ಸ್ಥಾನ ಪಡೆದಿದ್ದಾರೆ. ಒಟ್ಟು 16 ಅಭ್ಯರ್ಥಿಗಳು ಈ ಬಾರಿ 800ಕ್ಕೂ ಹೆಚ್ಚು ಅಂಕ ಪಡೆದಿದ್ದಾರೆ.

ಕೆಪಿಎಸ್‌ಸಿಯು ಸೆಪ್ಟೆಂಬರ್‌ 5 ರಂದು ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಪ್ರಕಟಿಸಿತ್ತು. ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಬಂದ ಆಕ್ಷೇಪಣೆಗಳನ್ನು ಪರಿಶೀಲಿಸಿ ಈಗ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ. ಇದಕ್ಕೆ ಮತ್ತೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿಲ್ಲ ಎಂದು ಕೆಪಿಎಸ್‌ಸಿಯು ಸ್ಪಷ್ಟಪಡಿಸಿದೆ.

ಆಯ್ಕೆಪಟ್ಟಿಯ ಜತೆಗೆ ಕಟ್‌ ಆಫ್‌ ಅಂಕಗಳನ್ನೂ ಪ್ರಕಟಿಸಲಾಗಿದೆ. ಅಂತಿಮ ಆಯ್ಕೆ ಪಟ್ಟಿಯ ಪ್ರಕಟಣೆಯೊಂದಿಗೆ ಕೆಎಎಸ್‌ ಅಧಿಕಾರಿಗಳ ನೇಮಕ ಪ್ರಕ್ರಿಯೆ ಅಂತಿಮ ಘಟ್ಟ ತಲುಪಿದಂತಾಗಿದ್ದು, ಇನ್ನು ಆಯ್ಕೆಯಾದ ಅಭ್ಯರ್ಥಿಗಳನ್ನು ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆಯು ಅಧಿಕೃತವಾಗಿ ನೇಮಕ ಮಾಡಿಕೊಳ್ಳಲಿದೆ.

ಈ ೧೦೬ ಹುದ್ದೆಗಳಿಗೆ ಒಟ್ಟು ೧,೬೫, ೨೫೮ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ೨೦೨೦ರ ಆಗಸ್ಟ್‌ ೨೪ರಂದು ಪೂರ್ವಭಾವಿ ಪರೀಕ್ಷೆ ನಡೆಸಲಾಗಿತ್ತು. ಅರ್ಜಿ ಸಲ್ಲಿಸಿದವರಲ್ಲಿ ಸುಮಾರು ಶೇ. ೫೦ ರಷ್ಟು ಮಂದಿ ಮಾತ್ರ ಅಂದರೆ ೮೩,೭೧೬ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು.

ಮುಖ್ಯ ಪರೀಕ್ಷೆಗೆ ೧:೨೦ರ ಅನುಪಾತದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು. ಒಟ್ಟು ೨೦,೧೨೦ ಅಭ್ಯರ್ಥಿಗಳು ಮುಖ್ಯ ಪರೀಕ್ಷೆ ಬರೆಯಲು ಅರ್ಹತೆ ಪಡೆದಿದ್ದರು. ಮುಖ್ಯ ಪರೀಕ್ಷೆಯನ್ನು ೨೦೨೧ರ ಫೆಬ್ರವರಿ ೧೩ರಿಂದ ೧೬ರ ವರೆಗೆ ನಡೆಸಲಾಗಿತ್ತು. ಸುಮಾರು ೧೮ಸಾವಿರ ಅಭ್ಯರ್ಥಿಗಳು ಮುಖ್ಯ ಪರೀಕ್ಷೆ ಬರೆದಿದ್ದರು. ಪರೀಕ್ಷೆ ನಡೆದು ಸುಮಾರು ಒಂದುವರೆ ವರ್ಷಗಳಾಗಿದ್ದರೂ ಫಲಿತಾಂಶ ಪ್ರಕಟವಾಗಿರಲಿಲ್ಲ. ಈ ಬಗ್ಗೆ ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದರು.

ಕಳೆದ ಜುಲೈನಲ್ಲಿ ಮುಖ್ಯ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದ್ದ ಕೆಪಿಎಸ್‌ಸಿ, ೧:೩ರ ಅನುಪಾತದಲ್ಲಿ ಒಟ್ಟು ೩೧೮ ಅಭ್ಯರ್ಥಿಗಳು ಸಂದರ್ಶನಕ್ಕೆ ಆಯ್ಕೆಯಾಗಿದ್ದಾರೆ ಎಂದು ಪ್ರಕಟಿಸಿತ್ತು. ಆಗಸ್ಟ್‌ ೧೬ ರಿಂದ ೨೬ರ ವರೆಗೆ ಈ ಅಭ್ಯರ್ಥಿಗಳಿಗೆ ಸಂದರ್ಶನ (ವ್ಯಕ್ತಿತ್ವ ಪರೀಕ್ಷೆ) ನಡೆಸಲಾಗಿತ್ತು.

ಅಂತಿಮ ಆಯ್ಕೆ ಪಟ್ಟಿ ನೋಡಲು ವೆಬ್‌ಸೈಟ್‌ ವಿಳಾಸ: https://kpsc.kar.nic.in

ಇದನ್ನೂ ಓದಿ | KPSC Recruitment 2022 | ಗ್ರೂಪ್‌ ಬಿ ವೃಂದದ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಕೆಪಿಎಸ್‌ಸಿ

Exit mobile version