Site icon Vistara News

KPSC Recruitment 2022 | ಅಸಿಸ್ಟೆಂಟ್‌ ಎಂಜಿನಿಯರ್‌ ಹುದ್ದೆಗಳಿಗೆ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ

KPSC Recruitment

KPSC Recruitment

ರಾಜ್ಯದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿನ (RDWSD Karnataka) ಸಹಾಯಕ ಅಭಿಯಂತರರ (Assistant Engineer) (ಗ್ರೇಡ್‌-1) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಈಗಲೂ ಅವಕಾಶವಿದೆ! ಹೌದು, ಗ್ರೂಪ್‌ “ಬಿ” ವೃಂದದ ಈ ಹುದ್ದೆಗಳ ಸಂಖ್ಯೆಯನ್ನು ಹೆಚ್ಚಿಸಿ, ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) (KPSC Recruitment 2022) ತಿದ್ದುಪಡಿ ಅಧಿಸೂಚನೆಯನ್ನು ಹೊರಡಿಸಿದ್ದು, ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ.

ಈಗ ಒಟ್ಟು 288 ಹುದ್ದೆಗಳಿಗೆ ನೇಮಕ ನಡೆಯುತ್ತಿದ್ದು, ಸೆಪ್ಟೆಂಬರ್‌ 30ರ ವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಶುಲ್ಕ ಪಾವತಿಸಲು ಅಕ್ಟೋಬರ್‌ 1 ಕೊನೆಯ ದಿನವಾಗಿರುತ್ತದೆ.

ಈ ನೇಮಕಕ್ಕೆ ಸಂಬಂಧಿಸಿದಂತೆ ಕಳೆದ ಫೆಬ್ರವರಿಯಲ್ಲಿಯೇ ಅಧಿಸೂಚನೆ ಹೊರಡಿಸಲಾಗಿತ್ತು. ಆಗ ಉಳಿಕೆ ಮೂಲ ವೃಂದದ 129 ಮತ್ತು ಕಲ್ಯಾಣ ಕರ್ನಾಟಕದ 59 ಹುದ್ದೆಗಳು ಸೇರಿ ಒಟ್ಟು188 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಫೆಬ್ರವರಿ 28 ರಿಂದ ಮಾರ್ಚ್‌ 30ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕೂಡ ನೀಡಲಾಗಿತ್ತು.

ಆದರೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ ಉಳಿಕೆ ಮೂಲ ವೃಂದದಲ್ಲಿ ಮತ್ತೆ 100 ಹುದ್ದೆಗಳನ್ನು ಭರ್ತಿಮಾಡಲು ಇಲಾಖೆ ಪ್ರಸ್ತಾವನೆ ಸಲ್ಲಿಸಿದ್ದರಿಂದ ಈಗಾಗಲೇ ಹೊರಡಿಸಿದ್ದ ಅಧಿಸೂಚನೆಗೆ ತಿದ್ದುಪಡಿ ತಂದು, ಹುದ್ದೆಗಳ ಸಂಖ್ಯೆಯನ್ನು ಹೆಚ್ಚಿಸಿ ಮತ್ತೀಗ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಅರ್ಜಿ ಸಲ್ಲಿಸಲು ಲಿಂಕ್‌: https://www.kpscrecruitment.in/RPS/Home.aspx

ಈ ಹಿಂದೆ ಹೊರಡಿಸಿದ್ದ ಅಧಿಸೂಚನೆಗೆ ಸಂಬಂಧಿಸಿದಂತೆ ಇದುವರೆಗೆ ಕೇವಲ ಅರ್ಜಿಯನ್ನು ಮಾತ್ರ ಆಹ್ವಾನಿಸಲಾಗಿತ್ತು. ಸ್ಪರ್ಧಾತ್ಮಕ ಪರೀಕ್ಷೆಯನ್ನು ಇನ್ನೂ ನಡೆಸಲಾಗಿರಲಿಲ್ಲ. ಹೀಗಾಗಿ ಆಯೋಗ ಈ ನೇಮಕ ಪ್ರಕ್ರಿಯೆಯಲ್ಲಿಯೇ ಹುದ್ದೆಗಳ ಸಂಖ್ಯೆಯನ್ನು ಹೆಚ್ಚಿಸಿ, ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ನೀಡುವ ತೀರ್ಮಾನ ತೆಗೆದುಕೊಂಡಿರುವುದಾಗಿ ತಿದ್ದುಪಡಿ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಹುದ್ದೆಗಳ ಹಂಚಿಕೆ ಇಂತಿದೆ

ವಿದ್ಯಾರ್ಹತೆ ಏನು?
ಸಿವಿಲ್‌/ಎನ್ವಿರಾಮೆಂಟಲ್ ಎಂಜಿನಿಯರಿಂಗ್‌ ನಲ್ಲಿ ಬಿಇ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಫೆಬ್ರವರಿಯಲ್ಲಿ ಹೊರಡಿಸಲಾಗಿದ್ದ ಅಧಿಸೂಚನೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರದಿಂದ ಗುರುತಿಸಲ್ಪಟ್ಟ ವಿಶ್ವವಿದ್ಯಾಲಯದಿಂದ ಪಡೆದ B.E.in Civil/Environmental ಪದವಿ ಹೊರತುಪಡಿಸಿ ಅನ್ಯ ರಾಜ್ಯ ಸರ್ಕಾರಗಳು ಗುರುತಿಸಿರುವ ವಿಶ್ವವಿದ್ಯಾಲಯಗಳ ಪದವಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಲಾಗಿತ್ತಾದರೂ ಮಾರ್ಚ್‌ನಲ್ಲಿ ತಿದ್ದುಪಡಿ ಅಧಿಸೂಚನೆ ಹೊರಡಿಸಿ ದೇಶದ ಯಾವುದೇ ಅಂಗೀಕೃತ ವಿವಿಯಿಂದ ಬಿಇ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು ಎಂದು ಸ್ಪಷ್ಟಪಡಿಸಲಾಗಿದೆ.

ವಯೋಮಿತಿ ಎಷ್ಟು?
ಸಾಮಾನ್ಯ ಅಭ್ಯರ್ಥಿಗಳಿಗೆ ೧೮ ರಿಂದ ೩೫ ವರ್ಷಗಳು. ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 38ವರ್ಷಗಳು. ಪರಿಷ್ಟ ಜಾತಿ/ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1ರ ಅಭ್ಯರ್ಥಿಗಳಿಗೆ 40 ವರ್ಷ ನಿಗದಿಪಡಿಸಲಾಗಿದೆ.

ಅರ್ಜಿ ಶುಲ್ಕ ಎಷ್ಟು ಪಾವತಿಸಬೇಕು?
ಸಾಮಾನ್ಯ ಅಭ್ಯರ್ಥಿಗಳು ೬೦೦ ರೂ. ಹಾಗೂ ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು ೩೦೦ ರೂ. ಹಾಗೂ ಮಾಜಿ ಸೈನಿಕರು ೫೦ ರೂ. ಅರ್ಜಿ ಶುಲ್ಕ ಪಾವತಿಸಬೇಕಿರುತ್ತದೆ. ಪರಿಷ್ಟ ಜಾತಿ/ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1ರ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ. ಅರ್ಜಿ ಶುಲ್ಕವನ್ನು ಆನ್‌ಲೈನ್‌ನಲ್ಲಿಯೇ ಪಾವತಿಸಲು ಅವಕಾಶ ನೀಡಲಾಗಿರುತ್ತದೆ.

ಪ್ರಕ್ರಿಯೆ ಶುಲ್ಕ (processing fees) ೩೫ ರೂ.ಗಳನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-೧, ಮಾಜಿ ಸೈನಿಕ ಹಾಗೂ ಅಂಗವಿಕಲ ಅಭ್ಯರ್ಥಿಗಳೂ ಸೇರಿದಂತೆ ಎಲ್ಲ ಅಭ್ಯರ್ಥಿಗಳು ಪಾವತಿಸಬೇಕಿರುತ್ತದೆ. ಈ ಶುಲ್ಕ ಪಾವತಿಸದಿದ್ದಲ್ಲಿ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ.

ಅಧಿಸೂಚನೆ ನೋಡಲು ಲಿಂಕ್‌: https://www.kpscrecruitment.in/PublicApp/STD/PSC-1-RTB-1-2021.pdf

ನೇಮಕ ಹೇಗೆ?
ಇವು ಗ್ರೂಪ್‌ ʼಬಿʼಯ ಹುದ್ದೆಗಳಾಗಿದ್ದರೂ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿದ ಶೇಕಡಾವಾರು ಅಂಕಗಳ ಆಧಾರದಲ್ಲಿ ನೇಮಕಮಾಡಿಕೊಳ್ಳಲಾಗುತ್ತದೆ. ಸಂದರ್ಶನ ಇರುವುದಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಯು ಎರಡು ಪತ್ರಿಕೆಗಳನ್ನು ಒಳಗೊಂಡಿರುತ್ತದೆ. ಪ್ರತಿಯೊಂದು ಪತ್ರಿಕೆಯು ಗರಿಷ್ಠ 300 ಅಂಕಗಳಿಗೆ ನಡೆಯಲಿದ್ದು, ವಸ್ತುನಿಷ್ಠ ಬಹು ಆಯ್ಕೆ ಮಾದರಿಯಲ್ಲಿ ನಡೆಯಲಿದೆ. ಪತ್ರಿಕೆ-1 ಸಾಮಾನ್ಯ ಜ್ಞಾನಕ್ಕೆ ಸಂಬಂಧ ಪಟ್ಟಿದ್ದರೆ ಪತ್ರಿಕೆ-2 ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದ ಪರೀಕ್ಷೆಯಾಗಿರುತ್ತದೆ.

ಪತ್ರಿಕೆ-1 ಪರೀಕ್ಷೆ ಬರೆಯಲು ಒಂದೂವರೆ ಗಂಟೆ ಹಾಗೂ ಪತ್ರಿಕೆ-2 ರ ಪರೀಕ್ಷೆ ಬರೆಯಲು ಎರಡು ಗಂಟೆ ಕಾಲಾವಕಾಶ ನೀಡಲಾಗುತ್ತದೆ. ಈ ಪರೀಕ್ಷೆಯ ಪಠ್ಯ ಕ್ರಮವನ್ನು ಆಯೋಗದ ವೆಬ್‌ನಲ್ಲಿ ಒದಗಿಸಲಾಗಿದೆ. ಪ್ರಶ್ನೆ ಪತ್ರಿಕೆಯು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಇರಲಿದೆ. ಈ ಪರೀಕ್ಷೆಯಲ್ಲಿ ಶೇ.35 ರಷ್ಟು ಅಂಕ ಪಡೆದವರು ಮಾತ್ರ ನೇಮಕಕ್ಕೆ ಅರ್ಹರಾಗಿರುತ್ತಾರೆ. ಈ ಪರೀಕ್ಷೆಯಲ್ಲಿ ಋಣಾತ್ಮಕ (negative) ಮೌಲ್ಯಮಾಪನವಿರುತ್ತದೆ. ಅಂದರೆ ಪ್ರತಿಯೊಂದು ತಪ್ಪಾದ ಉತ್ತರಕ್ಕೆ ಪ್ರಶ್ನೆಗಳಿಗೆ ಹಂಚಿಕೆ ಮಾಡಲಾದ ಅಂಕಗಳಲ್ಲಿ ನಾಲ್ಕನೇ ಒಂದು ಭಾಗದಷ್ಟು (1/4) ಅಂಕಗಳನ್ನು ಕಡಿತಗೊಳಿಸಲಾಗುತ್ತದೆ.

ಗಮನಿಸಿ: ಈ ನೇಮಕಾತಿಯಲ್ಲಿಯೂ ಸಂದರ್ಶನ ನಡೆಸಲಾಗುವುದಿಲ್ಲ. ಇದೇ ಹುದ್ದೆಯ ನೇಮಕಕ್ಕೆ ಸಂಬಂಧಿಸಿದಂತೆ ಕಳೆದ ಫೆಬ್ರವರಿಯಲ್ಲಿ ಪ್ರಕಟಿಸಲಾಗಿದ್ದ ಅಧಿಸೂಚನೆಯಲ್ಲಿ ಸಂದರ್ಶನ ನಡೆಸಲಾಗುವುದು ಎಂದು ಪ್ರಕಟಿಸಲಾಗಿತ್ತು. ಆದರೆ ಆಗಸ್ಟ್‌ 24 ರಂದು ತಿದ್ದುಪಡಿ ಅಧಿಸೂಚನೆ ಪ್ರಕಟಿಸಿರುವ ಕೆಪಿಎಸ್‌ಸಿಯು ಸಂದರ್ಶನ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ರಾಜ್ಯದ ವಿವಿಧ ಭಾಗಗಳಲ್ಲಿ ಈ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಕೇಂದ್ರಗಳ ಮಾಹಿತಿಯನ್ನು ಮುಂದೆ ನೀಡಲಾಗುತ್ತದೆ. ಅಗತ್ಯ ಇರುವ ಅಭ್ಯರ್ಥಿಗಳು ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯನ್ನೂ ಬರೆದು ಅರ್ಹತೆ ಪಡೆಯಬೇಕಿರುತ್ತದೆ.

ಹೆಚ್ಚಿನ ಮಾಹಿತಿಗೆ ವೆಬ್‌: https://kpsc.kar.nic.in/index.html

ಇದನ್ನೂ ಓದಿ| KPSC SDA Recruitment | ಕೊನೆಗೂ ಎಸ್‌ಡಿಎ ನೇಮಕದ ಫಲಿತಾಂಶ ಪ್ರಕಟಿಸಿದ ಕೆಪಿಎಸ್‌ಸಿ

Exit mobile version