Site icon Vistara News

KPSC Recruitment 2022 | ಸರ್ಕಾರ ಇಲಾಖೆಗಳಲ್ಲಿ 700 ಹುದ್ದೆ; ಸದ್ಯವೇ ಕೆಪಿಎಸ್‌ಸಿ ಅಧಿಸೂಚನೆ

KPSC Recruitment 2022

ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಸುಮಾರು 700 ಹುದ್ದೆಗಳ ನೇಮಕಕ್ಕೆ ಕರ್ನಾಟಕ ಲೋಕ ಸೇವಾ ಆಯೋಗವು (ಕೆಪಿಎಸ್‌ಸಿ) ಸದ್ಯವೇ ಅಧಿಸೂಚನೆ (KPSC Recruitment 2022) ಹೊರಡಿಸಲಿದೆ.

ಈ ವಿಷಯವನ್ನು ಕೆಪಿಎಸ್‌ಸಿಯ ಕಾರ್ಯದರ್ಶಿ ವಿಕಾಸ್‌ ಕಿಶೋರ್‌ ಸುರಳ್ಕರ್‌ ಇತ್ತೀಚೆಗೆ ಅಭ್ಯರ್ಥಿಗಳೊಂದಿಗೆ ಯೂಟ್ಯೂಬ್‌ನಲ್ಲಿ ನಡೆಸಿದ ಸಂವಾದದ ಸಂದರ್ಭದಲ್ಲಿ ಪ್ರಕಟಿಸಿದ್ದಾರೆ.

ಅಭ್ಯರ್ಥಿಗಳು ಟ್ವೀಟ್ಟರ್‌ನಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ ಅವರು, “ಈಗಾಗಲೇ 11 ಇಲಾಖೆಗಳಿಂದ ಸುಮಾರು 700 ಹುದ್ದೆಗಳ ನೇಮಕಕ್ಕೆ ಪ್ರಸ್ತಾವನೆ ಬಂದಿದೆ. ಬಹುತೇಕ ಪ್ರಸ್ತಾವನೆಗಳಿಗೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಲು ಸರ್ಕಾರದ ಆದೇಶಕ್ಕಾಗಿ ಕಾಯಲಾಗುತ್ತಿದೆ. ಆದೇಶ ಪ್ರಕಟವಾಗುತ್ತಿದ್ದಂತೆಯೇ ಅಧಿಸೂಚನೆ ಹೊರಡಿಸಲಾಗುವುದು ಎಂದು ತಿಳಿಸಿದ್ದಾರೆʼʼ.

ಯಾವ ಇಲಾಖೆಯಲ್ಲಿ ನಡೆಯಲಿದೆ ನೇಮಕ

ಮುಖ್ಯವಾಗಿ ಶ್ರೀಘ್ರಲಿಪಿಗಾರರು 222, ದತ್ತಾಂಶ ನಮೂದು ಸಹಾಯಕರು 88, ವಾಣಿಜ್ಯ ತೆರಿಗೆಗಳ ಇಲಾಖೆಯ ತೆರಿಗೆಗಳ ಪರೀವೀಕ್ಷಕ 243 ಹುದ್ದೆಗಳಿಗೆ ಸದ್ಯವೇ ಅಧಿಸೂಚನೆ ಹೊರಬೀಳಲಿದೆ. ಗೆಜೆಟೆಟ್‌ ಪ್ರೊಬೇಷನರ್ಸ್‌ (ಕೆಎಎಸ್‌) 43 ಹುದ್ದೆಗಳಿಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆಯಾದರೂ, ಇನ್ನೂ ಎಲ್ಲ ಅನೇಕ ಇಲಾಖೆಗಳಿಂದ ಹುದ್ದೆಗಳ ಸಂಖ್ಯೆ ಅಂತಿಮಗೊಳ್ಳಬೇಕಿದೆ. ಅಲ್ಲದೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗದದ ಮೀಸಲಾತಿಯನ್ನು ಶೇ.17ಮತ್ತು ಶೇ.7 ಕ್ಕೆ ಏರಿಸಿ ಸರ್ಕಾರ ಆದೇಶ ಹೊರಡಿಸಿರುವುದರಿಂದ ಹುದ್ದೆಗಳ ಮೀಸಲಾತಿಯೂ ಬದಲಾಗಬೇಕಾಗಿದೆ. ಹೀಗಾಗಿ ಸದ್ಯವೇ ಕೆಎಎಸ್‌ ನೇಮಕಕ್ಕೆ ಅಧಿಸೂಚನೆ ಹೊರಡಿಸಲು ಸಾಧ್ಯವಾಗುತ್ತಿಲ್ಲ ಎಂದು ವಿಕಾಸ್‌ ಕಿಶೋರ್‌ ಸುರಳ್ಕರ್‌ ಹೇಳಿದ್ದಾರೆ.

ವೇಳಾಪಟ್ಟಿ ಪ್ರಕಟ ಕಷ್ಟ
ಕೇಂದ್ರಲೋಕ ಸೇವಾ ಆಯೋಗ (ಯುಪಿಎಸ್‌ಸಿ) ಮತ್ತು ಸಿಬ್ಬಂದಿ ನೇಮಕಾತಿ ಆಯೋಗ (ಎಸ್‌ಎಸ್‌ಸಿ)ಯಂತೆ ಮೊದಲೇ ನೇಮಕಾತಿ ಪರೀಕ್ಷೆಗಳ ವಾರ್ಷಿಕ ವೇಳಾಪಟ್ಟಿ ಪ್ರಕಟಿಸಬೇಕೆಂಬ ಅಭ್ಯರ್ಥಿಗಳ ಬೇಡಿಕೆಗೆ ಪ್ರತಿಕ್ರಿಯಿಸಿದ ಕೆಪಿಎಸ್‌ಸಿ ಕಾರ್ಯದರ್ಶಿ ವಿಕಾಸ್‌ ಕಿಶೋರ್‌ ಸುರಳ್ಕರ್‌, ಸರ್ಕಾರದ ಇಲಾಖೆಗಳು ನೇಮಕಾತಿಗೆ ಸರಿಯಾಗಿ ಪ್ರಸ್ತಾವನೆ ಸಲ್ಲಿಸದೇ ಇರುವುದರಿಂದ ಕೆಪಿಎಸ್‌ಸಿಗೆ ಈ ರೀತಿಯ ವೇಳಾಪಟ್ಟಿ ಸಿದ್ಧಪಡಿಸುವುದು ಕಷ್ಟವಾಗುತ್ತಿದೆ ಎಂದು ತಿಳಿಸಿದರು.

ಸರ್ಕಾರದ ಎಲ್ಲ ಎಂಜಿನಿಯರಿಂಗ್‌ ಹುದ್ದೆಗಳಿಗೆ ಯುಪಿಎಸ್‌ಸಿಯು ನಡೆಸುವ ಎಂಜಿನಿಯರಿಂಗ್‌ ಸರ್ವೀಸ್‌ ಮಾದರಿಯಲ್ಲಿ ಏಕ ಪರೀಕ್ಷೆ ನಡೆಸಬೇಕೆಂಬ ಗಮನ ಸೆಳೆಯುವ ಪ್ರಶ್ನೆಗೆ ಉತ್ತರಿಸಿದ ವಿಕಾಸ್‌ ಕಿಶೋರ್‌ ಸುರಳ್ಕರ್‌, ಈ ಕುರಿತ ಪ್ರಸ್ತಾವನೆಯನ್ನು ಈಗಾಗಲೇ ಕೆಪಿಎಸ್‌ಸಿಯು ಸರ್ಕಾರಕ್ಕೆ ಸಲ್ಲಿಸಿದೆ. ಸರ್ಕಾರ ಅನುಮತಿ ನೀಡಿದರೆ ಒಂದೇ ಪರೀಕ್ಷೆ ನಡೆಸಿ, ಎಲ್ಲ ಇಲಾಖೆಗಳಿಗೆ ಅಗತ್ಯ ಎಂಜಿನಿಯರ್‌ಗಳನ್ನು ನೇಮಕ ಮಾಡಲು ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ಈಗಾಗಲೇ ಪ್ರಕಟವಾಗಿರುವ 14 ಅಧಿಸೂಚನೆಗಳಿಗೆ ಸಂಬಂಧಿಸಿದಂತೆ ಪರೀಕ್ಷೆ ನಡೆಸಬೇಕಾಗಿದ್ದು, ಕೆಲವು ಪರೀಕ್ಷೆಗಳನ್ನು ಮುಂದಿನ ಮಾರ್ಚ್‌ನೊಳಗೆ ನಡೆಸಲಾಗುವುದು. ಇನ್ನು ಕೆಲವು ಪರೀಕ್ಷೆಗಳನ್ನು ಮಾರ್ಚ್‌ ನಂತರ ನಡೆಸಲಾಗುವುದು. ಈ ಕುರಿತ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿಸಿದ ವಿಕಾಸ್‌ ಕಿಶೋರ್‌ ಸುರಳ್ಕರ್‌, ಸದ್ಯ ಆಫ್‌ಲೈನ್‌ನ ಪರೀಕ್ಷೆಗಳನ್ನು ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ. ಮುಂದೆ ಆನ್‌ಲೈನ್‌ನಲ್ಲಿ ನಡೆಸುವ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದರು.

ಅಕ್ರಮಕ್ಕಿಲ್ಲ ಅವಕಾಶ
ಆಯೋಗದ ಪರೀಕ್ಷೆಗಳಲ್ಲಿ ಅಕ್ರಮ ನಡೆಸಿದವರ ವಿರುದ್ಧ ಈಗಾಗಲೇ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಮುಂದೆ ನಡೆಯಲಿರುವ ಪರೀಕ್ಷೆಗಳಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಯಾವುದೇ ರೀತಿಯ ಅಕ್ರಮ ನಡೆಸದಂತೆ ಎಚ್ಚರ ವಹಿಸಲಾಗುವುದು. ಈ ಬಗ್ಗೆ ಅಭ್ಯರ್ಥಿಗಳಿಗೆ ಅನುಮಾನ ಬೇಡ ಎಂದು ವಿಕಾಸ್‌ ಕಿಶೋರ್‌ ಸುರಳ್ಕರ್‌ ಹೇಳಿದ್ದಾರೆ.

ಸದ್ಯ ತಾಂತ್ರಿಕೇತರ ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ ಆರು ಅಧಿಸೂಚನೆಗಳ ಆಯ್ಕೆಯಾದ ಅಭ್ಯರ್ಥಿಗಳ ಅರ್ಹತಾ ಪಟ್ಟಿಯನ್ನು ಪ್ರಕಟಿಸಲಾಗಿದೆ. ಏಳು ಅಧಿಸೂಚನೆಗಳ (ಗ್ರೂಪ್‌-ಸಿ) ಅರ್ಹತಾ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಕೆಪಿಎಸ್‌ಸಿಯ ಆಯುಕ್ತರು ಅನುಮತಿ ನೀಡುತ್ತಿದ್ದಂತೆಯೇ ಅವುಗಳನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.

ನೇಮಕಾತಿ ಕುರಿತ ಹೆಚ್ಚಿನ ಮಾಹಿತಿಗಾಗಿ ಕೆಪಿಎಸ್‌ಸಿ ವೆಬ್‌: https://kpsc.kar.nic.in

ಇದನ್ನೂ ಓದಿ | KPSC Recruitment 2022 | ಸಾಂಖ್ಯಿಕ ನಿರೀಕ್ಷಕರ 105 ಹುದ್ದೆಗಳಿಗೆ ಇಂದಿನಿಂದ ಅರ್ಜಿ ಸಲ್ಲಿಸಲು ಅವಕಾಶ

Exit mobile version