ಬೆಂಗಳೂರು: ಕರ್ನಾಟಕ ಲೋಕ ಸೇವಾ ಆಯೋಗವು (ಕೆಪಿಎಸ್‌ಸಿ) ವಿವಿಧ ಇಲಾಖೆಯಲ್ಲಿನ ಗ್ರೂಪ್ “ಸಿʼʼ ಹುದ್ದೆಗಳ (KPSC Recruitment 2022) ನೇಮಕಕ್ಕೆ ಸಂಬಂಧಿಸಿದಂತೆ ಮೂಲ ದಾಖಲೆಗಳ ಪರಿಶೀಲನೆಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿ ಮತ್ತು ದಾಖಲೆ ಪರಿಶೀಲನೆಯ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಡಿಸೆಂಬರ್ 19 ರಿಂದ 27 ರವರೆಗೆ ಮೂಲ ದಾಖಲೆಗಳ ಪರಿಶೀಲನೆಯು ನಡೆಯಲಿದ್ದು, ಎಂದು ಯಾವ ಅಭ್ಯರ್ಥಿಯ ದಾಖಲೆ ಪರಿಶೀಲನೆ ನಡೆಸಲಾಗುತ್ತದೆ ಎಂಬ ಮಾಹಿತಿಯನ್ನು ಆಯೋಗದ ವೆಬ್‌ಸೈಟ್‌ನಲ್ಲಿ ಒದಗಿಸಲಾಗಿದೆ. ಒಟ್ಟು 1,052 ಅಭ್ಯರ್ಥಿಗಳು (Degree & Below Degree level) ಅರ್ಹತಾ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಈ ವಿಷಯವನ್ನು ಕೆಪಿಎಸ್‌ಸಿಯ ಕಾರ್ಯದರ್ಶಿ ವಿಕಾಸ್ ಕಿಶೋರ್ ಸುರಳ್ಕರ್ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ.
ಬೆಳಗ್ಗೆ 10 ಗಂಟೆಗೆ ಮತ್ತು ಮಧ್ಯಾಹ್ನ 2 ಗಂಟೆಗೆ ದಾಖಲೆ ಪರಿಶೀಲನೆಯು ಆರಂಭವಾಗಲಿದೆ. ನಿಗದಿತ ದಿನದಂದು ಅಭ್ಯರ್ಥಿಗಳು ಅಗತ್ಯ ಎಲ್ಲ ಮೂಲ ದಾಖಲೆಗಳೊಂದಿಗೆ ದಾಖಲೆ ಪರಿಶೀಲನೆಗೆ ಹಾಜರಾಗಬೇಕೆಂದು ವಿಕಾಸ್ ಕಿಶೋರ್ ಸುರಳ್ಕರ್ ಕೋರಿದ್ದಾರೆ. ನಿತ್ಯ ಸುಮಾರು 150 ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ.
ದಾಖಲೆ ಪರಿಶೀಲನೆಯು ಎಲ್ಲಿ ನಡೆಯಲಿದೆ ಎಂಬುದನ್ನು ಕೆಪಿಎಸ್‌ಸಿಯು ಸ್ಪಷ್ಟಪಡಿಸಿಲ್ಲ. ಬಹುತೇಕವಾಗಿ ಬೆಂಗಳೂರಿನ ಕೆಪಿಎಸ್‌ಸಿ ಕಚೇರಿಯಲ್ಲಿಯೇ ದಾಖಲೆ ಪರಿಶೀಲನೆ ನಡೆಸುವ ಸಾಧ್ಯತೆಗಳಿವೆ. ಅಭ್ಯರ್ಥಿಗಳು ವಿದ್ಯಾರ್ಹತೆ, ಮೀಸಲಾತಿ, ವಯೋಮಿತಿಗೆ ಸಂಬಂಧಿಸಿದ ಮೂಲ ದಾಖಲೆಗಳನ್ನು ಪರಿಶೀಲನೆಗೆ ಹಾಜರುಪಡಿಸಬೇಕಿರುತ್ತದೆ.
ಶಿಕ್ಷಕರ ಹುದ್ದೆಗಳಿಗೂ ದಾಖಲೆ ಪರಿಶೀಲನೆ
ಮೌಲಾನ ಆಜಾದ್ ಮಾದರಿ ಶಾಲೆಗಳಲ್ಲಿನ ಶಿಕ್ಷಕರ ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆಯೂ ದಾಖಲೆ ಪರಿಶೀಲನೆಗೆ ಕೆಪಿಎಸ್‌ಸಿಯು ದಿನಾಂಕ ನಿಗದಿಪಡಿಸಿದೆ. ಡಿಸೆಂಬರ್ 9ರಂದು ಈ ದಾಖಲೆ ಪರಿಶೀಲನೆ ನಡೆಯಲಿದ್ದು, ಒಟ್ಟು 8 ಅಭ್ಯರ್ಥಿಗಳು ದಾಖಲೆ ಪರಿಶೀಲನೆಗೆ ಅರ್ಹತೆ ಪಡೆದವರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಡಿ.9 ರಂದು ಬೆಳಗ್ಗೆ 10 ಗಂಟೆಯಿಂದ ಇವರುಗಳ ದಾಖಲೆ ಪರಿಶೀಲನೆ ನಡೆಸಲಾಗುತ್ತದೆ ಎಂದು ಕೆಪಿಎಸ್‌ಸಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ | KPSC Recruitment 2022 | ಕೆಪಿಎಸ್‌ಸಿಯಿಂದ ವಿವಿಧ 23 ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ