ಬೆಂಗಳೂರು: ಕರ್ನಾಟಕ ಲೋಕ ಸೇವಾ ಆಯೋಗವು (ಕೆಪಿಎಸ್‌ಸಿ) ರಾಜ್ಯದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿನ (RDWSD Karnataka) ಸಹಾಯಕ ಅಭಿಯಂತರರು (Assistant Engineer) ನೇಮಕಕ್ಕೆ ಸಂಬಂಧಿಸಿದಂತೆ (KPSC Recruitment 2023) ಕೀ ಉತ್ತರ ಪ್ರಕಟಿಸಿದೆ.
ಫೆಬ್ರವರಿ 26 ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗಿತ್ತು. ಪ್ರತಿಯೊಂದು ಪ್ರಶ್ನೆಗೂ ಮೂರು ಅಂಕ ನಿಗದಿಯಾಗಿದ್ದು, ಅಭ್ಯರ್ಥಿಗಳು ತಪ್ಪು ಉತ್ತರ ಗುರುತಿಸಿದ್ದರೆ 1/4 (0.25) ಅಂಕ ಕಳೆಯಲಾಗುತ್ತದೆ ಎಂದು ಕೆಪಿಎಸ್‌ಸಿಯು ತಿಳಿಸಿದೆ.
ಈ ಕೀ ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದ್ದು, ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿಯೇ ಆಕ್ಷೇಪಣೆ ಸಲ್ಲಿಸಬೇಕಿರುತ್ತದೆ. ಆಕ್ಷೇಪಣೆಯ ಮಾದರಿಯನ್ನು ಆಯೋಗದ ವೆಬ್‌ಸೈಟ್‌ನಲ್ಲಿ ನೀಡಲಾಗಿದೆ.
ಆಸಕ್ತರು ಪ್ರಮಾಣೀಕೃತ ಪುಸ್ತಕ, ದಾಖಲೆಗಳೊಂದಿಗೆ ತಮ್ಮ ಆಕ್ಷೇಪಣೆಯನ್ನು ಮಾರ್ಚ್ ೬ರ ಒಳಗೆ ಆಯೋಗದ ಕಚೇರಿಗೆ ಸಲ್ಲಿಸಬೇಕೆಂದು ಸೂಚಿಸಲಾಗಿದೆ. ಒಂದು ಆಕ್ಷೇಪಣೆಗೆ 50 ರೂ. ಶುಲ್ಕವನ್ನು ಪಾವತಿಸಬೇಕಿರುತ್ತದೆ. ಡಿಡಿಯ ಮೂಲಕ ಶುಲ್ಕ ಪಾವತಿಸಲು ಅವಕಾಶ ನೀಡಲಾಗಿದೆ.
ಒಟ್ಟು 288 ಅಸಿಸ್ಟೆಂಟ್ ಎಂಜಿನಿಯರ್ ಹುದ್ದೆಗಳಿಗೆ ನೇಮಕ ನಡೆಯುತ್ತಿದ್ದು, ಈ ನೇಮಕಕ್ಕೆ ಸಂಬಂಧಿಸಿದಂತೆ 2022ರ ಫೆಬ್ರವರಿಯಲ್ಲಿಯೇ ಅಧಿಸೂಚನೆ ಹೊರಡಿಸಲಾಗಿತ್ತು. ಉಳಿಕೆ ಮೂಲ ವೃಂದದ 129 ಮತ್ತು ಕಲ್ಯಾಣ ಕರ್ನಾಟಕದ 59 ಹುದ್ದೆಗಳು ಸೇರಿ ಒಟ್ಟು188 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ನಂತರ 2022ರ ಸೆಪ್ಟೆಂಬರ್‌ನಲ್ಲಿ ತಿದ್ದುಪಡಿ ಅಧಿಸೂಚನೆ ಹೊರಡಿಸಿ ಉಳಿಕೆ ಮೂಲ ವೃಂದದ ಹುದ್ದೆಗಳ ಸಂಖ್ಯೆಯನ್ನು 100 ಹೆಚ್ಚಿಸಲಾಗಿತ್ತು.
ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್ : https://kpsc.kar.nic.in
ಇದನ್ನೂ ಓದಿ : KPSC Recruitment : ಅಸಿಸ್ಟೆಂಟ್ ಎಂಜಿನಿಯರ್ ಹುದ್ದೆಗಳಿಗೆ ನೇಮಕ; ಪರೀಕ್ಷೆ ವೇಳೆಯಲ್ಲಿ ಬದಲಾವಣೆ