ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ವಿವಿಧ ಹುದ್ದೆಗಳ ನೇಮಕಕ್ಕೆ (KPSC Recruitment 2023 ) ನಡೆಸುವ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯಲ್ಲಿ ಈಗ ಒಮ್ಮೆ ಅರ್ಹತೆ ಪಡೆದವರು ಮತ್ತೆ ಈ ಪರೀಕ್ಷೆ ಬರೆಯಬೇಕಾಗಿಲ್ಲ. ಅದರಂತೆ ಈಗಾಗಲೇ ಫೆಬ್ರವರಿ 25 ರಂದು ನಡೆದ ಪರೀಕ್ಷೆಯಲ್ಲಿ ಅರ್ಹತೆ ಪಡೆದವರು ಏಪ್ರಿಲ್ 12 ರಂದು ನಡೆಯಲಿರುವ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ಬರೆಯಬೇಕಾಗಿಲ್ಲ ಎಂದು ಆಯೋಗ ತಿಳಿಸಿದೆ.
ಮುದ್ರಣ, ಲೇಖನ ಸಾಮಾಗ್ರಿ ಮತ್ತು ಪ್ರಕಟಣೆಗಳ ಇಲಾಖೆಯಲ್ಲಿನ ಸಹಾಯಕ ನಿರ್ದೇಶಕರ -2 ಹುದ್ದೆ, ಭಾಷಾಂತರ ನಿರ್ದೇಶನಾಲಯದಲ್ಲಿನ ಭಾಷಾಂತರಕಾರರ 8 ಹುದ್ದೆ, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆನಯಲ್ಲಿನ ನಗರಯೋಜಕರ 23 ಹುದ್ದೆಗಳಿಗೆ ಏ. 12 ರಂದು ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ನಡೆಸಲಾಗುತ್ತಿದೆ.
ಫೆಬ್ರವರಿ 25 ರಂದು ನಡೆದ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ಬರೆದು ಅರ್ಹತೆ ಪಡೆದವರು ಈ ಪರೀಕ್ಷೆಯನ್ನು ಬರೆಯಬೇಕಾಗಿಲ್ಲ. ಫೆಬ್ರವರಿ 25 ರಂದು ನಡೆದ ಈ ಪರೀಕ್ಷೆಯ ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ. ಆದರೆ ಫಲಿತಾಂಶದ ಪಟ್ಟಿ ಸಿದ್ಧವಾಗಿದೆ. ಇದರ ಪ್ರಕಟಣೆಗೆ ಆಯೋಗ ಇನ್ನೂ ಒಪ್ಪಿಗೆ ನೀಡಿಲ್ಲ. ಈ ನಡುವೆಯೇ ಈ ಪರೀಕ್ಷೆ ಬಂದಿರುವುದರಿಂದ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಪ್ರವೇಶ ಪತ್ರವನ್ನು ಒದಗಿಸದಂತೆ ವೆಬ್‌ಸೈಟ್‌ನ ತಾಂತ್ರಿಕ ತಂಡಕ್ಕೆ ಸೂಚಿಸಲಾಗಿದೆ ಎಂದು ಕೆಪಿಎಸ್‌ಸಿಯ ಕಾರ್ಯದರ್ಶಿ ವಿಕಾಸ್ ಕಿಶೋರ್ ಸುರಳ್ಕರ್ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ.
ಒಂದು ವೇಳೆ ಅಭ್ಯರ್ಥಿಯು ಫೆ. 25ರಂದು ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ಬರೆದಿದ್ದು, ಅವರಿಗೆ ಏ. 12 ರಂದು ನಡೆಯಲಿರುವ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಗೆ ಹಾಜರಾಗಲು ಪ್ರವೇಶ ಪತ್ರವನ್ನು ಕೆಪಿಎಸ್‌ಸಿಯ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಲು ಸಾಧ್ಯವಾಗದೇ ಇದ್ದಲ್ಲಿ ಅವರು ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದಿದ್ದಾರೆ ಎಂದು ಅರ್ಥ. ಅವರು ಈ ಪರೀಕ್ಷೆ ಬರೆಯಬೇಕಾಗಿಲ್ಲ .
ದಿನಾಂಕ: 15-12-2022ರಂದು ಪ್ರಕಟಿಸಲಾಗಿರುವ ವೇಳಾ ಪಟ್ಟಿಯಲ್ಲಿನ ಅಧಿಸೂಚನೆಗಳಿಗೆ ಸಂಬಂಧಿಸಿದಂತೆ ದಿನಾಂಕ 21-01-2023 ಮತ್ತು 22-01-2023ರಂದು ಪರೀಕ್ಷೆ ನಿಗದಿಪಡಿಸಲಾಗಿರುವ ಹುದ್ದೆಗಳಿಗೆ ಕಳೆದ ಫೆಬ್ರವರಿ 25 ರಂದು ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ನಡೆಸಲಾಗಿತ್ತು.
ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here ) ಮಾಡಿ.
ಈಗ ಕೆಪಿಎಸ್‌ಸಿಯು ಅರ್ಜಿ ಸಲ್ಲಿಸುವಾಗಲೇ ದಿನಾಂಕ 29-11-22 ರ ನಂತರ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ಬರೆದಿದ್ದರೆ ಮಾಹಿತಿ ಒದಗಿಸಿ ಎಂದು ಕೋರುತ್ತಿದ್ದು, ಅವರಿಗೆ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯಿಂದ ವಿನಾಯಿತಿ ನೀಡಲು ನಿರ್ಧರಿಸಿದೆ.
ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್ ವಿಳಾಸ: https://kpsc.kar.nic.in/
ಇದನ್ನೂ ಓದಿ: KPSC Recruitment 2023 : ಸಹಕಾರ ಸಂಘಗಳ ನಿರೀಕ್ಷಕರ 100 ಹುದ್ದೆ; ಅರ್ಜಿ ಸಲ್ಲಿಸಲು ಲಿಂಕ್ ಒದಗಿಸಿದ ಕೆಪಿಎಸ್‌ಸಿ