Site icon Vistara News

KPSC Recruitment : ಅಸಿಸ್ಟೆಂಟ್‌ ಎಂಜಿನಿಯರ್‌ ಹುದ್ದೆಗಳಿಗೆ ನೇಮಕ; ಪರೀಕ್ಷೆ ವೇಳೆಯಲ್ಲಿ ಬದಲಾವಣೆ

KPSC Recruitment

KPSC Recruitment

ಬೆಂಗಳೂರು: ರಾಜ್ಯದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿನ (RDWSD Karnataka) ಸಹಾಯಕ ಅಭಿಯಂತರರ (Assistant Engineer) (ಗ್ರೇಡ್‌-1) ಹುದ್ದೆಗಳ ನೇಮಕ್ಕಕೆ ಸಂಬಂಧಿಸಿದಂತೆ ನಡೆಸಲಾಗುವ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯ ವೇಳೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿ, ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) (KPSC Recruitment) ಪ್ರಕಟಣೆ ಹೊರಡಿಸಿದೆ.

ಈ ಹಿಂದೆ ಪ್ರಕಟಿಸಿದ ಪರೀಕ್ಷಾ ವೇಳಾಪಟ್ಟಿಯುಲ್ಲಿ ಫೆಬ್ರವರಿ 25 ರಂದು ಬೆಳಗ್ಗೆ 10 ರಿಂದ 11.30 ಗಂಟೆಯವರೆಗೆ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ನಡೆಸಲಾಗುವುದು ಎಂದು ಪ್ರಕಟಿಸಲಾಗಿತ್ತು. ಆದರೆ ಈ ಹುದ್ದೆಯ ಪರೀಕ್ಷೆಯ ಜತೆಗೇ ಈಗಾಗಲೇ ಪ್ರಕಟಿಸಿರುವ ವಿವಿಧ ಗ್ರೂಪ್‌ ಎ, ಬಿ ಮತ್ತು ಸಿ ಹುದ್ದೆಗಳಿಗೂ ಒಂದೇ ಬಾರಿಗೆ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ನಡೆಸಬೇಕಾಗಿರುವುದರಿಂದ ಪರೀಕ್ಷೆ ನಡೆಯುವ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಕೆಪಿಎಸ್‌ಸಿಯು ತಿಳಿಸಿದೆ.

ಈಗ ಅದೇ ದಿನ ಬೆಳಗ್ಗೆಗೆ ಬದಲಾಗಿ ಮಧ್ಯಾಹ್ನ 3 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಪರೀಕ್ಷೆ ನಡೆಸಲಾಗುತ್ತದೆ. ಉಳಿದಂತೆ ಈ ಹುದ್ದೆಗಳ ನೇಮಕಕ್ಕೆ ನಿಗದಿಯಾಗಿರುವಂತೆ ಫೆಬ್ರವರಿ 26 ರಂದು ಉಳಿದ ಪರೀಕ್ಷೆಯನ್ನು ನಡೆಸಲಾಗುತ್ತದೆ. ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಕೆಪಿಎಸ್‌ಸಿಯು ಸ್ಪಷ್ಟಪಡಿಸಿದೆ.

ಒಟ್ಟು 288 ಅಸಿಸ್ಟೆಂಟ್‌ ಎಂಜಿನಿಯರ್‌ ಹುದ್ದೆಗಳಿಗೆ ನೇಮಕ ನಡೆಯುತ್ತಿದ್ದು, ಈ ನೇಮಕಕ್ಕೆ ಸಂಬಂಧಿಸಿದಂತೆ 2022ರ ಫೆಬ್ರವರಿಯಲ್ಲಿಯೇ ಅಧಿಸೂಚನೆ ಹೊರಡಿಸಲಾಗಿತ್ತು. ಉಳಿಕೆ ಮೂಲ ವೃಂದದ 129 ಮತ್ತು ಕಲ್ಯಾಣ ಕರ್ನಾಟಕದ 59 ಹುದ್ದೆಗಳು ಸೇರಿ ಒಟ್ಟು188 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ನಂತರ 2022ರ ಸೆಪ್ಟೆಂಬರ್‌ನಲ್ಲಿ ತಿದ್ದುಪಡಿ ಅಧಿಸೂಚನೆ ಹೊರಡಿಸಿ ಉಳಿಕೆ ಮೂಲ ವೃಂದದ ಹುದ್ದೆಗಳ ಸಂಖ್ಯೆಯನ್ನು 100 ಹೆಚ್ಚಿಸಲಾಗಿತ್ತು.

ನೇಮಕ ಹೇಗೆ?
ಇವು ಗ್ರೂಪ್‌ ʼಬಿʼಯ ಹುದ್ದೆಗಳಾಗಿದ್ದರೂ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿದ ಶೇಕಡಾವಾರು ಅಂಕಗಳ ಆಧಾರದಲ್ಲಿ ನೇಮಕಮಾಡಿಕೊಳ್ಳಲಾಗುತ್ತದೆ. ಸಂದರ್ಶನ ಇರುವುದಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಯು ಎರಡು ಪತ್ರಿಕೆಗಳನ್ನು ಒಳಗೊಂಡಿರುತ್ತದೆ. ಪ್ರತಿಯೊಂದು ಪತ್ರಿಕೆಯು ಗರಿಷ್ಠ 300 ಅಂಕಗಳಿಗೆ ನಡೆಯಲಿದ್ದು, ವಸ್ತುನಿಷ್ಠ ಬಹು ಆಯ್ಕೆ ಮಾದರಿಯಲ್ಲಿ ನಡೆಯಲಿದೆ. ಪತ್ರಿಕೆ-1 ಸಾಮಾನ್ಯ ಜ್ಞಾನಕ್ಕೆ ಸಂಬಂಧ ಪಟ್ಟಿದ್ದರೆ ಪತ್ರಿಕೆ-2 ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದ ಪರೀಕ್ಷೆಯಾಗಿರುತ್ತದೆ.

ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here ) ಮಾಡಿ.

ಪತ್ರಿಕೆ-1 ಪರೀಕ್ಷೆ ಬರೆಯಲು ಒಂದೂವರೆ ಗಂಟೆ ಹಾಗೂ ಪತ್ರಿಕೆ-2 ರ ಪರೀಕ್ಷೆ ಬರೆಯಲು ಎರಡು ಗಂಟೆ ಕಾಲಾವಕಾಶ ನೀಡಲಾಗುತ್ತದೆ. ಈ ಪರೀಕ್ಷೆಯ ಪಠ್ಯ ಕ್ರಮವನ್ನು ಆಯೋಗದ ವೆಬ್‌ನಲ್ಲಿ ಒದಗಿಸಲಾಗಿದೆ. ಪ್ರಶ್ನೆ ಪತ್ರಿಕೆಯು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಇರಲಿದೆ. ಈ ಪರೀಕ್ಷೆಯಲ್ಲಿ ಶೇ.35 ರಷ್ಟು ಅಂಕ ಪಡೆದವರು ಮಾತ್ರ ನೇಮಕಕ್ಕೆ ಅರ್ಹರಾಗಿರುತ್ತಾರೆ. ಈ ಪರೀಕ್ಷೆಯಲ್ಲಿ ಋಣಾತ್ಮಕ (negative) ಮೌಲ್ಯಮಾಪನವಿರುತ್ತದೆ. ಅಂದರೆ ಪ್ರತಿಯೊಂದು ತಪ್ಪಾದ ಉತ್ತರಕ್ಕೆ ಪ್ರಶ್ನೆಗಳಿಗೆ ಹಂಚಿಕೆ ಮಾಡಲಾದ ಅಂಕಗಳಲ್ಲಿ ನಾಲ್ಕನೇ ಒಂದು ಭಾಗದಷ್ಟು (1/4) ಅಂಕಗಳನ್ನು ಕಡಿತಗೊಳಿಸಲಾಗುತ್ತದೆ.

ಇದನ್ನೂ ಓದಿ : KPSC Recruitment 2022 | ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ; ಇನ್ನು ಒಮ್ಮೆ ಬರೆದರೆ ಸಾಕು!

Exit mobile version