Site icon Vistara News

KPSC Recruitment : ವಿವಿಧ ಹುದ್ದೆಗಳಿಗೆ ನೇಮಕ; ಹೆಚ್ಚುವರಿ ಆಯ್ಕೆ ಪಟ್ಟಿ ಪ್ರಕಟ

KPSC Recruitment

ಕೆಪಿಎಸ್‌ಸಿ

ಬೆಂಗಳೂರು: ಕರ್ನಾಟಕ ಲೋಕ ಸೇವಾ ಆಯೋಗವು (ಕೆಪಿಎಸ್‌ಸಿ) ಜಲ ಸಂಪನ್ಮೂಲ ಇಲಾಖೆಯಲ್ಲಿನ ಸಹಾಯಕ ಎಂಜಿನಿಯರ್‌ (ಸಿವಿಲ್‌) ಮತ್ತು ಕಿರಿಯ ಎಂಜಿನಿಯರ್‌ (ಸಿವಿಲ್‌) ಹುದ್ದೆಗಳ (KPSC Recruitment ) ನೇಮಕಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಆಯ್ಕೆ ಪಟ್ಟಿ ಪ್ರಕಟಿಸಿದೆ.

ಸಹಾಯಕ ಎಂಜಿನಿಯರ್‌ (ಸಿವಿಲ್)-527 (429+98) ಮತ್ತು ಕಿರಿಯ ಅಭಿಯಂತರರು (ಸಿವಿಲ್)-246(159+87) ಹುದ್ದೆಗಳಿಗೆ ಈಗಾಗಲೇ ಅಂತಿಮ ಆಯ್ಕೆಪಟ್ಟಿಗಳನ್ನು ಪ್ರಕಟಿಸಲಾಗಿತ್ತು. ಪ್ರಸ್ತುತ ಈ ಹುದ್ದೆಗಳಿಗೆ ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಯ ಆದೇಶದಂತೆ ಈ ಹೆಚ್ಚುವರಿ ಪಟ್ಟಿ ಪ್ರಕಟಿಸಲಾಗಿದೆ.

ಸಹಾಯಕ ಎಂಜಿನಿಯರ್‌ (ಸಿವಿಲ್) ಹುದ್ದೆಗಳಿಗೆ ಸಂಬಂಧಿಸಿದಂತೆ ಉಳಿಕೆ ಮೂಲ ವೃಂದದ ಹುದ್ದೆಗಳಿಗೆ 224 ಅಭ್ಯರ್ಥಿಗಳು ಹಾಗೂ ಕಲ್ಯಾಣ ಕರ್ನಾಟಕದ ಹುದ್ದೆಗಳಿಗೆ 56 ಅಭ್ಯರ್ಥಿಗಳು ಈ ಹೆಚ್ಚುವರಿ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಕಿರಿಯ ಅಭಿಯಂತರರು (ಸಿವಿಲ್) ಹುದ್ದೆಗಳಿಗೆ ಸಂಬಂಧಿಸಿದಂತೆ ಉಳಿಕೆ ಮೂಲ ವೃಂದದ ಹುದ್ದೆಗಳಿಗೆ 92 ಹಾಗೂ ಕಲ್ಯಾಣ ಕರ್ನಾಟಕದ ಹುದ್ದೆಗಳಿಗೆ 52 ಅಭ್ಯರ್ಥಿಗಳು ಈ ಹೆಚ್ಚುವರಿ ಆಯ್ಕೆಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಎಸ್‌ಡಿಎ ಹೆಚ್ಚುವರಿ ಪಟ್ಟಿ

ಕೆಪಿಎಸ್‌ಸಿಯು ರಾಜ್ಯದ ವಿವಿಧ ಇಲಾಖೆಗಳಲ್ಲಿನ ಕಲ್ಯಾಣ ಕರ್ನಾಟಕ ವೃಂದದ 201 ಕಿರಿಯ ಸಹಾಯಕ/ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ ಜನವರಿ 9 ರಂದು ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿತ್ತು. ಈಗ ಹೆಚ್ಚುವರಿ ಆಯ್ಕೆ ಪಟ್ಟಿ ಪ್ರಕಟಿಸಿದೆ. ಒಟ್ಟು 75 ಅಭ್ಯರ್ಥಿಗಳು ಈ ಹೆಚ್ಚುವರಿ ಆಯ್ಕೆಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇವರ ದಾಖಲೆ ಪರಿಶೀಲನೆ ನಡೆಸಿ, ನೇಮಕ ಮಾಡಿಕೊಳ್ಳಲಾಗುತ್ತದೆ.

ಹುದ್ದೆ ಆಯ್ಕೆ ಮಾಡಿಕೊಳ್ಳಿ!

ಕೆಪಿಎಸ್‌ಸಿಯ ನೇಮಕ ಪ್ರಕ್ರಿಯೆಯಲ್ಲಿ ಭಾಗವಹಿಸಿ ಲೋಕೋಪಯೋಗಿ ಇಲಾಖೆಯಲ್ಲಿನ ಸಹಾಯಕ ಎಂಜಿನಿಯರ್‌ ಮತ್ತು ಕಿರಿಯ ಎಂಜಿನಿಯರ್‌ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿನ ಸಹಾಯಕ ಎಂಜಿನಿಯರ್‌ ಮತ್ತು ಕಿರಿಯ ಎಂಜಿನಿಯರ್‌ ಹುದ್ದೆಗಳ ನೇಮಕ್ಕಕೆ ಸಂಬಂಧಿಸಿದಂತೆ 1:3 ರ ಅನುಪಾತದಲ್ಲಿ ದಾಖಲೆ ಪರಿಶೀಲನೆಗೆ ಅರ್ಹತೆ ಪಡೆದಿರುವ ಅಭ್ಯರ್ಥಿಗಳ ವಿವರವನ್ನು ಕೆಪಿಎಸ್‌ಸಿಯು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದು, ಈ ಅಭ್ಯರ್ಥಿಗಳು ಯಾವುದಾದರೂ ಒಂದು ಹುದ್ದೆಯನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ಕೋರಿದೆ.

ಈ ಪಟ್ಟಿಯಲ್ಲಿರುವ ಅಭ್ಯರ್ಥಿಗಳು ಜುಲೈ24 ರೊಳಗೆ ಮೂಲ ಗುರುತಿನ ಚೀಟಿಯೊಂದಿಗೆ ಬೆಂಗಳೂರಿನ ಕೆಪಿಎಸ್‌ಸಿ ಕಚೇರಿಗೆ ಆಗಮಿಸಿ, ಲಿಖಿತವಾಗಿ ಸ್ವ-ಇಚ್ಛಾ ಹೇಳಿಕೆಯನ್ನು ಸಲ್ಲಿಸಬೇಕೆಂದು ಕೋರಲಾಗಿದೆ. ಒಂದು ವೇಳೆ ಅಭ್ಯರ್ಥಿಗಳು ಸ್ವ-ಇಚ್ಛಾ ಹೇಳಿಕೆಯನ್ನು ನೀಡದಿದ್ದಲ್ಲಿ, ಲೋಕೋಪಯೋಗಿ ಇಲಾಖೆಯಲ್ಲಿನ ಹುದ್ದೆಗಳಿಗೆ ಮಾತ್ರ ಇವರನ್ನು ಪರಿಗಣಿಸಲಾಗುವುದು ಎಂದು ಕೆಪಿಎಸ್‌ಸಿಯು ತಿಳಿಸಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here ) ಮಾಡಿ.

ಎಸಿಎಫ್‌ ಹುದ್ದೆಗೆ ದೈಹಿಕ ಸಹಿಷ್ಣುತೆ ಪರೀಕ್ಷೆ

ಕೆಪಿಎಸ್‌ಸಿಯು ಅರಣ್ಯ ಇಲಾಖೆಯಲ್ಲಿನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್‌) 16 ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ ಮುಖ್ಯ ಪರೀಕ್ಷೆಯಿಂದ ವ್ಯಕ್ತಿತ್ವ ಪರೀಕ್ಷೆಗೆ ಹಾಗೂ ಶಾರೀರಿಕ ದಾರ್ಢ್ಯತೆ ಪರೀಕ್ಷೆಗೆ ಅರ್ಹತೆ ಪಡೆದ ಅಭ್ಯರ್ಥಿಗಳ ಪಟ್ಟಿಯನ್ನು 1:5 ರ ಅನುಪಾತದಲ್ಲಿ ಈಗಾಗಲೇ ಪ್ರಕಟಿಸಿದೆ. ಈ ಅಭ್ಯರ್ಥಿಗಳಿಗೆ ಜುಲೈ 17 ರಂದು ದೈಹಿಕ ಸಹಿಷ್ಣುತೆ ಪರೀಕ್ಷೆ ನಡೆಸಲಾಗುತ್ತದೆ.

ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಈ ಪರೀಕ್ಷೆ ನಡೆಯಲಿದ್ದು, ಪಟ್ಟಿಯಲ್ಲಿರುವ ಎಲ್ಲ ಅಭ್ಯರ್ಥಿಗಳು ಜು.17ರಂದು ಬೆಳಗ್ಗೆ 5.30ಕ್ಕೆ ಅಗತ್ಯ ಎಲ್ಲ ದಾಖಲೆಗಳೊಂದಿಗೆ ಈ ಪರೀಕ್ಷೆಗೆ ಹಾಜರಾಗಬೇಕೆಂದು ಕೋರಿದೆ.

ಹೆಚ್ಚಿನ ಮಾಹಿತಿಗೆ ಕೆಪಿಎಸ್‌ಸಿ ವೆಬ್‌ಸೈಟ್‌: https://kpsc.kar.nic.in

Exit mobile version