ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) 2019ನೇ ಸಾಲಿನ ದ್ವಿತೀಯ ದರ್ಜೆ ಸಹಾಯಕರ (ಎಸ್‌ಡಿಎ) (KPSC SDA Recruitment) 1,323 ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆಯನ್ನು ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 1 ರವರೆಗೆ ನಡೆಸಲಿದೆ.
ಒಟ್ಟು 3,858 ಅಭ್ಯರ್ಥಿಗಳು ದಾಖಲೆ ಪರಿಶೀಲನೆಗೆ ಅರ್ಹತೆ ಪಡೆದಿದ್ದು, ಅರ್ಹತೆ ಪಡೆದವರ ಪಟ್ಟಿಯನ್ನು ಆಗಸ್ಟ್ 26ರಂದು ಪ್ರಕಟಿಸಲಾಗಿತ್ತು. ಆಯೋಗದ ಬೆಂಗಳೂರಿನಲ್ಲಿರುವ ಕೇಂದ್ರ ಕಚೇರಿ ಹಾಗೂ ಪ್ರಾಂತೀಯ ಕಚೇರಿಗಳಾದ ಮೈಸೂರು, ಕಲಬುರಗಿ, ಬೆಳಗಾವಿ ಮತ್ತು ಶಿವಮೊಗ್ಗದ ಕಚೇರಿಗಳಲ್ಲಿ ಮೂಲ ದಾಖಲೆಗಳನ್ನು ಪರಿಶೀಲನೆ ನಡೆಸಲಾಗುತ್ತದೆ.
ಕೆಪಿಎಸ್‌ಸಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿರುವ ವೇಳಾಪಟ್ಟಿಯಲ್ಲಿ ಅಭ್ಯರ್ಥಿಗಳ ಹೆಸರು, ರಿಜಿಸ್ಟರ್ ನಂಬರ್, ಯಾವ ಅಭ್ಯರ್ಥಿಗಳು, ಎಲ್ಲಿ, ಯಾವ ದಿನಾಂಕದಂದು ಎಷ್ಟು ಹೊತ್ತಿಗೆ ದಾಖಲೆ ಪರಿಶೀಲನೆಗೆ ಹಾಜರಾಗಬೇಕೆಂಬ ಮಾಹಿತಿಯನ್ನು ನೀಡಲಾಗಿದೆ. ಈ ಸಂಬಂಧ ಅಭ್ಯರ್ಥಿಗಳಿಗೆ ಸೂಚನಾ ಪತ್ರವನ್ನು ಕೂಡ ಕಳುಹಿಸಿಕೊಡಲಾಗಿದೆ.
ದಾಖಲೆ ಪರಿಶೀಲನೆಯು ಬೆಳಗ್ಗೆ 9.30 ರಿಂದ ಹಾಗೂ ಮಧ್ಯಾಹ್ನ 2 ಗಂಟೆಯಿಂದ ಆರಂಭವಾಗಲಿದೆ. ಬೆಂಗಳೂರಿನ ಕಚೇರಿಯಲ್ಲಿ ಸೆ.19 ರಿಂದ ಅ.1ರ ವರೆಗೆ ಒಟ್ಟು 817 ಅಭ್ಯರ್ಥಿಗಳ ದಾಖಲೆ ಪರಿಶೀಲನೆ ನಡೆಸಲಾಗುತ್ತದೆ. ಬೆಳಗಾವಿಯಲ್ಲಿ ಸೆ.19ರಿಂದ ಸೆ.30 ಒಟ್ಟು 1,388 ಅಭ್ಯರ್ಥಿಗಳ, ಮೈಸೂರಿನಲ್ಲಿ ಸೆ.19 ರಿಂದ ಸೆ.27ರ ವರೆಗೆ ಒಟ್ಟು 470 ಅಭ್ಯರ್ಥಿಗಳ, ಶಿವಮೊಗ್ಗದಲ್ಲಿ ಸೆ.19 ಸೆ.26ರವರೆಗೆ ಒಟ್ಟು 403 ಅಭ್ಯರ್ಥಿಗಳ ಹಾಗೂ ಕಲಬುರಗಿಯಲ್ಲಿ ಸೆ.19 ರಿಂದ ಸೆ.28 ರವರೆಗೆ 780 ಅಭ್ಯರ್ಥಿಗಳ ದಾಖಲೆ ಪರಿಶೀಲನೆ ನಡೆಸಲಾಗುತ್ತದೆ ಎಂದು ಕೆಪಿಎಸ್‌ಸಿಯು ತಿಳಿಸಿದೆ.
ದಾಖಲೆ ಪರಿಶೀಲನೆಯ ವೇಳಾ ಪಟ್ಟಿ ಇಲ್ಲಿದೆ: https://kpsc.kar.nic.in/elglist%20SDA2019%20time%20table.pdf
ಸರ್ಕಾರದ ವಿವಿಧ ಇಲಾಖೆ, ಸಂಸ್ಥೆಗಳಲ್ಲಿ ಖಾಲಿ ಇರುವ ದ್ವಿತೀಯ ದರ್ಜೆ ಸಹಾಯಕರ ಒಟ್ಟು 1323 ಹುದ್ದೆಗಳ ನೇಮಕಕ್ಕಾಗಿ ದಿನಾಂಕ 14-05-2020 ಅರ್ಜಿ ಆಹ್ವಾನಿಸಲಾಗಿತ್ತು. 2021 ರ ಸೆಪ್ಟೆಂಬರ್ 18 ಹಾಗೂ 19 ರಂದು ಪರೀಕ್ಷೆ ನಡೆಸಲಾಗಿತ್ತು. ಸುಮಾರು ಒಂದು ವರ್ಷಗಳ ನಂತರ ಫಲಿತಾಂಶವನ್ನು ಪ್ರಕಟಿಸಿತ್ತು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕಗಳ ಮೂಲಕ ಈ ಹುದ್ದೆಗಳಿಗೆ ನೇಮಕ ನಡೆಯುತ್ತಿದೆ. ಸಂದರ್ಶನ ಇರುವುದಿಲ್ಲ, ಕೇವಲ ದಾಖಲೆ ಪರಿಶೀಲನೆ ನಡೆಸಿ, ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ದಾಖಲೆ ಪರಿಶೀಲನೆಗೆ ಹಾಜರಾಗುವ ಅಭ್ಯರ್ಥಿಗಳು ತಾವು ಅರ್ಜಿಯಲ್ಲಿ ಕೋರಿರುವ ಮೀಸಲಾತಿಯ ಪ್ರಮಾಣ ಪತ್ರಗಳನ್ನು ನಿಗದಿತ ನಮೂನೆಯಲ್ಲಿ ಸಲ್ಲಿಸದಿದ್ದಲ್ಲಿ ಅಂತಹ ಅಭ್ಯರ್ಥಿಗಳ ಮೀಸಲಾತಿಗಳನ್ನು ತಿರಸ್ಕರಿಸಲಾಗುತ್ತದೆ. ವಿದ್ಯಾರ್ಹತೆ, ಹುಟ್ಟಿದ ದಿನಾಂಕ ಮತ್ತಿತರ ಮೂಲ ದಾಖಲೆಗಳನ್ನು ದಾಖಲೆ ಪರಿಶೀಲನೆಯ ಸಂದರ್ಭದಲ್ಲಿ ಹಾಜರುಪಡಿಸಬೇಕಾಗಿರುತ್ತದೆ.
ಈ ನೇಮಕಾತಿಯ ಕುರಿತ ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್: https://kpsc.kar.nic.in/index.html
ಇದನ್ನೂ ಓದಿ|ಕೆಪಿಎಸ್‌ಸಿ ಡಿ ಗ್ರೂಪ್ ನೌಕರಿಗೆ ಸಂದರ್ಶನ ಇಲ್ಲ: ರಾಜ್ಯ ಸರ್ಕಾರದ ಮಹತ್ವದ ತೀರ್ಮಾನ