ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) 2019ನೇ ಸಾಲಿನ ದ್ವಿತೀಯ ದರ್ಜೆ ಸಹಾಯಕರ (ಎಸ್‌ಡಿಎ) (KPSC SDA Recruitment) 1,323 ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿದೆ.
ಕಳೆದ ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 1 ರವರೆಗೆ ದಾಖಲೆ ಪರಿಶೀಲನೆ ನಡೆಸಲಾಗಿತ್ತು. ಒಟ್ಟು 3,858 ಅಭ್ಯರ್ಥಿಗಳು ದಾಖಲೆ ಪರಿಶೀಲನೆಗೆ ಅರ್ಹತೆ ಪಡೆದಿದ್ದರು. ನವೆಂಬರ್ 25 ರಂದು ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿತ್ತು. ಆಗ ಆಕ್ಷೇಪಣೆ ಸಲ್ಲಿಸಲು ಏಳು ದಿನ ಕಾಲಾವಕಾಶ ನೀಡಲಾಗಿತ್ತು. ಬಂದ ಆಕ್ಷೇಪಣೆಗಳನ್ನು ಪರಿಶೀಲಿಸಿ ಈಗ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಕೆಪಿಎಸ್‌ಸಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿರುವ ಈ ಅಂತಿಮ ಆಯ್ಕೆ ಪಟ್ಟಿಯಲ್ಲಿ ಅಭ್ಯರ್ಥಿಗಳ ಹೆಸರು, ವಿಳಾಸ, ರಿಜಿಸ್ಟರ್ ನಂಬರ್, ಮೀಸಲಾತಿ ಮತ್ತು ಒಟ್ಟು ಪಡೆದ ಅಂಕಗಳ ಮಾಹಿತಿಯನ್ನು ನೀಡಲಾಗಿದೆ. ಅಭ್ಯರ್ಥಿಗಳ ಒಪ್ಪಿಗೆಯಂತೆ ಇಲಾಖಾವಾರು ನೇಮಕ ನಡೆದಿದೆ.
ಆಯ್ಕೆ ಪಟ್ಟಿಯನ್ನು ನೋಡಲು ಇಲ್ಲಿ ಕ್ಲಿಕ್ (click here) ಮಾಡಿ
ಸರ್ಕಾರದ ವಿವಿಧ ಇಲಾಖೆ, ಸಂಸ್ಥೆಗಳಲ್ಲಿ ಖಾಲಿ ಇರುವ ದ್ವಿತೀಯ ದರ್ಜೆ ಸಹಾಯಕರ ಒಟ್ಟು 1323 ಹುದ್ದೆಗಳ ನೇಮಕಕ್ಕಾಗಿ ದಿನಾಂಕ 14-05-2020 ಅರ್ಜಿ ಆಹ್ವಾನಿಸಲಾಗಿತ್ತು. 2021 ರ ಸೆಪ್ಟೆಂಬರ್ 18 ಹಾಗೂ 19 ರಂದು ಪರೀಕ್ಷೆ ನಡೆಸಲಾಗಿತ್ತು. ಸುಮಾರು ಒಂದು ವರ್ಷಗಳ ನಂತರ ಫಲಿತಾಂಶವನ್ನು ಪ್ರಕಟಿಸಿತ್ತು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದಲ್ಲಿ ಈ ಹುದ್ದೆಗಳಿಗೆ ನೇಮಕ ನಡೆದಿದೆ. ಒಟ್ಟಾರೆಯಾಗಿ ಎರಡೂವರೆ ವರ್ಷಗಳಲ್ಲಿ ಈ ನೇಮಕ ಪ್ರಕ್ರಿಯೆಯು ಅಂತಿಮ ಹಂತಕ್ಕೆ ಬಂದಂತಾಗಿದೆ.
ಕಟ್ ಆಫ್ ಅಂಕಗಳ ಮಾಹಿತಿಯನ್ನೂ ಆಯೋಗದ ವೆಬ್‌ಸೈಟ್‌ನಲ್ಲಿ ಒದಗಿಸಲಾಗಿದೆ. ಇಲಾಖಾವಾರು ಕಟ್‌ಆಫ್ ಅಂಕಗಳ ಮಾಹಿತಿ ನೋಡಲು ಇಲ್ಲಿ ಕ್ಲಿಕ್ (click here) ಮಾಡಿ.
ಇದನ್ನೂ ಓದಿ| KPSC CBRT Exam | ಅಣಕು ಪರೀಕ್ಷೆ ಯಶಸ್ವಿ; ಸದ್ಯವೇ ಕೆಪಿಎಸ್‌ಸಿಯಿಂದ ಕಂಪ್ಯೂಟರ್ ಆಧಾರಿತ ನೇಮಕಾತಿ ಟೆಸ್ಟ್