ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ನಿಗಮದಲ್ಲಿ ಹಾಗೂ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಖಾಲಿ ಇರುವ ಸಹಾಯಕ ಎಂಜಿನಿಯರ್, ಕಿರಿಯ ಎಂಜಿನಿಯರ್ ಮತ್ತು ಕಿರಿಯ ಸಹಾಯಕ ಹುದ್ದೆಗಳ ನೇಮಕಕ್ಕೆ (KPTCL Recruitment 2022) ಸಂಬಂಧಿಸಿದಂತೆ ಜುಲೈ ೨೩ ರಿಂದ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿದೆ.
ಒಟ್ಟು ೧,೪೯೨ ಹುದ್ದೆಗಳಿಗೆ ನೇಮಕ ನಡೆಯುತ್ತಿದ್ದು, ಜೂನ್‌ನಲ್ಲಿ ಈ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಲಾಗಿತ್ತು. ಬಂದ ಆಕ್ಷೇಪಣೆಗಳನ್ನು ಪರಿಶೀಲಿಸಿ, ಈಗ ಅಂತಿಮ ವೇಳಾಪಟ್ಟಿ ಪ್ರಕಟಿಸಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕೆಪಿಟಿಸಿಎಲ್ ಪರವಾಗಿ ಈ ಪರೀಕ್ಷೆ ನಡೆಸುತ್ತಿದ್ದು, ಪರೀಕ್ಷೇಯ ಪ್ರವೇಶ ಪತ್ರವನ್ನು ಕೂಡ ಕೆಇಎ ತನ್ನ ವೆಬ್‌ಸೈಟ್‌ನಲ್ಲಿ ಒದಗಿಸಲಿದೆ.
ಎಂಜಿನಿಯರ್ ಹುದ್ದೆಗಳಿಗೆ ಬೆಂಗಳೂರಿನಲ್ಲಿ ಮಾತ್ರ ಪರೀಕ್ಷೆ ನಡೆಯಲಿದೆ. ಕಿರಿಯ ಸಹಾಯಕ ಹುದ್ದೆಗಳಿಗೆ ರಾಜ್ಯದ ವಿವಿಧೆಡೆ ಪರೀಕ್ಷಾ ಕೇಂದ್ರಗಳಿರಲಿವೆ.
ಕಿರಿಯ ಎಂಜಿನಿಯರ್ (ಸಿವಿಲ್ ಮತ್ತು ವಿದ್ಯುತ್) ಹುದ್ದೆಗಳಿಗೆ ಜು.೨೩ರಂದು ಮಧ್ಯಾಹ್ನ ೨.೩೦ರಿಂದ ೪.೩೦ರ ವರೆಗೆ ಪರೀಕ್ಷೆ ನಡೆಯಲಿದೆ. ಜು.೨೪ರಂದು ಸಹಾಯಕ ಎಂಜಿನಿಯರ್ (ಸಿವಿಲ್) ಹುದ್ದೆಗಳಿಗೆ ಬೆಳಗ್ಗೆ ೧೦.೩೦ರಿಂದ ಮಧ್ಯಾಹ್ನ ೧೨.೩೦ರವರೆಗೆ ಹಾಗೂ ಸಹಾಯಕ ಎಂಜಿನಿಯರ್ (ವಿದ್ಯುತ್) ಹುದ್ದೆಗಳಿಗೆ ಮಧ್ಯಾಹ್ನ ೨.೩೦ರಿಂದ ೪.೩೦ರವರೆಗೆ ಪರೀಕ್ಷೆ ನಡೆಯಲಿದೆ.
ಕಿರಿಯ ಸಹಾಯಕ ಹುದ್ದೆಗಳಿಗೆ ಆಗಸ್ಟ್ ೭ರ ಬೆಳಗ್ಗೆ ೧೦. ೩೦ ರಿಂದ ಮಧ್ಯಾಹ್ನ ೧೨. ೩೦ರವರೆಗೆ ಪರೀಕ್ಷೆ ನಡೆಯಲಿದೆ. ಈ ಎಲ್ಲ ಹುದ್ದೆಗಳಿಗೂ ಅಗತ್ಯವಿರುವ ಅಭ್ಯರ್ಥಿಗಳಿಗೆ ರಾಜ್ಯದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಕನ್ನಡ ಭಾಷಾ ಪರೀಕ್ಷೆ ನಡೆಸಲಾಗುತ್ತದೆ. ಮಧ್ಯಾಹ್ನ ೨ ರಿಂದ ಸಂಜೆ ೫ ಗಂಟೆಯವರೆಗೆ ಈ ಪರೀಕ್ಷೆ ನಡೆಸಲಾಗುತ್ತದೆ. ಅಭ್ಯರ್ಥಿಗಳು ತಮ್ಮ ಸ್ವಂತ ವೆಚ್ಚದಲ್ಲಿ ಈ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಬೇಕಿರುತ್ತದೆ.
ಪರೀಕ್ಷೆಯ ವೇಳಾಪಟ್ಟಿ ಇಲ್ಲಿದೆ;
ಹೇಗೆ ನಡೆಯಲಿದೆ ಪರೀಕ್ಷೆ?
ಈ ಸ್ಪರ್ಧಾತ್ಮಕ ಪರೀಕ್ಷೆಯು ೧೦೦ ಅಂಕಗಳ ವಸ್ತು ನಿಷ್ಠ ಬಹು ಆಯ್ಕೆಯ (objective multiple choice) ವಿಧಾನದಲ್ಲಿ ನಡೆಯಲಿದೆ. ೨ ಗಂಟೆಯ ಅವಧಿಯನ್ನು ಈ ಪರೀಕ್ಷೆಗೆ ನಿಗದಿಪಡಿಸಲಾಗಿರುತ್ತದೆ. ಓಎಂಆರ್ ಶೀಟ್‌ನಲ್ಲಿ ಅಭ್ಯರ್ಥಿಗಳು ಸರಿಯಾದ ಉತ್ತರವನ್ನು ಗುರುತಿಸಬೇಕಿರುತ್ತದೆ.
ಪ್ರತಿ ಪ್ರಶ್ನೆಯು ಒಂದು ಅಂಕವನ್ನು ನಿಗದಿಪಡಿಸಲಾಗಿರುತ್ತದೆ. ಪರೀಕ್ಷೆಯಲ್ಲಿ ಋಣಾತ್ಮಕ ಅಂಕಗಳಿದ್ದು (negative marks), ಪ್ರತಿ ತಪ್ಪು ಉತ್ತರಕ್ಕೆ ೦.೨೫ ಅಂಕ ಕಡಿತಗೊಳಿಸಲಾಗುತ್ತದೆ. ಪ್ರಶ್ನೆಗೆ ಉತ್ತರಿಸದಿದ್ದರೆ ಯಾವುದೇ ಅಂಕ ಕಳೆಯಲಾಗುವುದಿಲ್ಲ. ಕಿರಿಯ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ, ಕಂಪ್ಯೂಟರ್ ಸಾಕ್ಷರತೆ, ಸಾಮಾನ್ಯ ಜ್ಞಾನದ ಕುರಿತು ಪ್ರಶ್ನೆಗಳನ್ನು ಕೇಳಲಾಗಿರುತ್ತದೆ.
ಪ್ರಶ್ನೆ ಪತ್ರಿಕೆಯು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿರುತ್ತದೆ. ಈ ಆಪ್ಟಿಟ್ಯೂಡ್ ಪರೀಕ್ಷೆಯಲ್ಲಿ ಕನಿಷ್ಠ ಶೇ.೩೫ ಅಂಕಗಳನ್ನು ಗಳಿಸಿದ ಅಭ್ಯರ್ಥಿಗಳು ಮಾತ್ರ ನೇಮಕಾತಿಗೆ ಅರ್ಹರಾಗಿರುತ್ತಾರೆ.
ಸಹಾಯಕ ಎಂಜಿನಿಯರ್ ಮತ್ತು ಕಿರಿಯ ಎಂಜಿನಿಯರ್ ಪಠ್ಯಕ್ರಮ ಇಂತಿದೆ;
ಕಿರಿಯ ಸಹಾಯಕ ಹುದ್ದೆಗೆ ನಡೆಯುವ ಪರೀಕ್ಷೆಯಲ್ಲಿ ಕಂಪ್ಯೂಟರ್ ಸಾಕ್ಷರತೆಗೆ ಸಂಬಂಧಿಸಿದ ೨೦ ಪ್ರಶ್ನೆ, ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ೫೦ ಹಾಗೂ ಸಾಮಾನ್ಯ ಇಂಗ್ಲಿಷ್ ಮತ್ತು ಕನ್ನಡಕ್ಕೆ ಸಂಬಂಧಿಸಿದ ೩೦ ಅಂಕಗಳ ಪ್ರಶ್ನೆಗಳಿರಲಿವೆ.
ಕಡ್ಡಾಯ ಕನ್ನಡ ಪರೀಕ್ಷೆ ಹೇಗೆ?
ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯು ೧೫೦ ಅಂಕಗಳಿಗೆ ನಡೆಯಲಿದ್ದು, ಕನಿಷ್ಠ ೫೦ ಅಂಕಗಳನ್ನುಗಳಿಸಿದ ಅಭ್ಯರ್ಥಿಗಳು ಮಾತ್ರ ಆಯ್ಕೆಗೆ ಅರ್ಹರಾಗುತ್ತಾರೆ. ಕನ್ನಡ ಭಾಷಾ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಹುದ್ದೆಗಳ ಆಯ್ಕೆಗೆ ಪರಿಗಣಿಸಲಾಗುವುದಿಲ್ಲ. ಇದು ಕೇವಲ ಅರ್ಹತಾ ಪರೀಕ್ಷೆಯಾಗಿರುತ್ತದೆ. ಪರೀಕ್ಷೆಯು ಎಸ್‌ಎಸ್‌ಎಲ್‌ಸಿ ಕನ್ನ ಮೊದಲನೇ ಭಾಷೆಯ ಮಟ್ಟದ್ದಾಗಿರುತ್ತದೆ.
ಪರೀಕ್ಷೇಯ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಲು ವೆಬ್ ವಿಳಾಸ: https://cetonline.karnataka.gov.in/kea/
ಇದನ್ನೂ ಓದಿ| ಜುಲೈನಲ್ಲಿ ಕೆಪಿಟಿಸಿಎಲ್‌ನ 1,550 ಹೊಸ ಹುದ್ದೆಗಳಿಗೆ ನೇಮಕ: ಸಚಿವ ವಿ.ಸುನೀಲ್ ಕುಮಾರ್ ಘೋಷಣೆ