Site icon Vistara News

KPTCL Recruitment 2022 | ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ; ಡ್ರೆಸ್‌ಕೋಡ್‌ ನಿಗದಿಪಡಿಸಿದ ಕೆಇಎ

KPTCL Recruitment 2022

ಬೆಂಗಳೂರು: ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್‌) ನಿಗಮದಲ್ಲಿ ಹಾಗೂ ವಿವಿಧ ವಿದ್ಯುತ್‌ ಸರಬರಾಜು ಕಂಪನಿಗಳಲ್ಲಿ ಖಾಲಿ ಇರುವ ಸಹಾಯಕ ಎಂಜಿನಿಯರ್‌, ಕಿರಿಯ ಎಂಜಿನಿಯರ್‌ ಮತ್ತು ಕಿರಿಯ ಸಹಾಯಕ ಹುದ್ದೆಗಳ ನೇಮಕಕ್ಕೆ (KPTCL Recruitment 2022) ಸಂಬಂಧಿಸಿದಂತೆ ಜುಲೈ ೨೩ ರಿಂದ ನಡೆಯಲಿರುವ ಸ್ಪರ್ಧಾತ್ಮಕ ಪರೀಕ್ಷೆಗೆ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಲಾಗಿದೆ.

ಒಟ್ಟು ೧,೪೯೨ ಹುದ್ದೆಗಳಿಗೆ ನೇಮಕ ನಡೆಯುತ್ತಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕೆಪಿಟಿಸಿಎಲ್‌ ಪರವಾಗಿ ಈ ಪರೀಕ್ಷೆ ನಡೆಸುತ್ತಿದೆ. ಪರೀಕ್ಷೇಯ ಪ್ರವೇಶ ಪತ್ರವನ್ನು ಕೆಇಎ ತನ್ನ ವೆಬ್‌ಸೈಟ್‌ನಲ್ಲಿ ಒದಗಿಸಿದೆ. ಪರೀಕ್ಷೆ ಬರೆಯಬೇಕಿರುವ ಅಭ್ಯರ್ಥಿಗಳು ವೆಬ್‌ಸೈಟ್‌ನಲ್ಲಿ ನೀಡಲಾಗಿರುವ ಲಿಂಕ್‌ನಲ್ಲಿ ಅರ್ಜಿ ಸಂಖ್ಯೆ ಮತ್ತು ಜನ್ಮದಿನಾಂಕವನ್ನು ನಮೂದಿಸಿ ತಮ್ಮ ಪ್ರವೇಶ ಪತ್ರ ಪಡೆದುಕೊಳ್ಳಬಹುದಾಗಿದೆ.

ಪ್ರವೇಶ ಪತ್ರ ಪಡೆಯಲು ಇಲ್ಲಿ ಕ್ಲಿಕ್‌ ಮಾಡಿ.

ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಪ್ರಿಂಟ್‌ ಮಾಡಿಕೊಂಡು ಪರೀಕ್ಷೆಗೆ ಹಾಜರಾಗಬೇಕು. ಜತೆಗೆ ಸರ್ಕಾರ ನೀಡಿದ ಯಾವುದಾದರೂ ಗುರುತಿನ ಚೀಟಿಯನ್ನು ತಂದಿರಬೇಕು. ಪ್ರವೇಶ ಪತ್ರ ಮತ್ತು ಗುರುತಿನ ಚೀಟಿ ಇಲ್ಲದೇ ಬರುವ ಯಾವುದೇ ಅಭ್ಯರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದಿಲ್ಲ ಎಂದು ಕೆಇಎ ಪ್ರಕಟಣೆಯಲ್ಲಿ ತಿಳಿಸಿದೆ.

ಮಹಿಳೆಯರು ಆಭರಣ, ಹಿಜಾಬ್‌ ಧರಿಸುವಂತಿಲ್ಲ!
ಈ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ಡ್ರೆಸ್‌ಕೋಡ್‌ ಅನ್ನೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಪ್ರತ್ಯೇಕವಾಗಿ ಡ್ರೆಸ್‌ಕೋಡ್‌ಗೆ ಸಂಬಂಧಿಸಿದಂತೆ ಸೂಚನೆಗಳನ್ನು ನೀಡಲಾಗಿದ್ದು, ಈ ಮಾಹಿತಿ ಕೆಇಎ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

ಮಹಿಳಾ ಅಭ್ಯರ್ಥಿಗಳು ವಿಸ್ತಾರವಾದ ಕಸೂತಿ, ಹೂಗಳು, ಬ್ರೂಚ್‌ಗಳು ಅಥವಾ ಬಟನ್‌ಗಳನ್ನು ಹೊಂದಿರುವ ಡ್ರೆಸ್‌ಗಳನ್ನು ಧರಿಸಬಾರದು ಎಂದು ಸೂಚಿಸಲಾಗಿದೆ. ಪೂರ್ಣತೋಳಿನ ಬಟ್ಟೆಗಳನ್ನು ಧರಿಸುವುದನ್ನೂ ನಿಷೇಧಿಸಲಾಗಿದೆ.

ಎತ್ತರದ ಹಿಮ್ಮಡಿಯ ಬೂಟುಗಳು ಮತ್ತು ಅಡಿಭಾಗ ಹೊಂದಿರುವ ಬೂಟುಗಳನ್ನು ಹಾಕಬಾರದು. ಸ್ಯಾಂಡಲ್, ಚಪ್ಪಲಿಗಳನ್ನೇ ಹಾಕಿಕೊಂಡು ಪರೀಕ್ಷೆಗೆ ಹಾಜರಾಗಬಹುದು ಎಂದು ತಿಳಿಸಲಾಗಿದೆ.
ಕಿವಿಯೋಲೆಗಳು, ಉಂಗುರಗಳು, ಪೆಂಡೆಂಟ್‌ಗಳು, ನೆಕ್ಲೇಸ್‌ಗಳು, ಬಳೆಗಳು ಇಂತಹ ಯಾವುದೇ ರೀತಿಯ ಲೋಹದ ಆಭರಣಗಳನ್ನು ಧರಿಸುವುದನ್ನು ಕೂಡ ನಿಷೇಧಿಸಲಾಗಿದ್ದು, ಹಿಜಾಬ್‌, ಬುರ್ಖಾ ಧರಿಸಿ ಬರುವ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ಕೆಇಎ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಪುರುಷ ಅಭ್ಯರ್ಥಿಗಳು ಕೂಡ ಅರ್ಧ ತೋಳಿನ ಶರ್ಟ್‌ಗಳನ್ನೇ ಧರಿಸಿ ಪರೀಕ್ಷೆಗೆ ಹಾಜರಾಗಬೇಕೆಂದು ಸೂಚಿಸಲಾಗಿದೆ. ಅಭ್ಯರ್ಥಿಗಳು ಧರಿಸುವ ಬಟ್ಟೆಗಳು ಹಗುರವಾಗಿರಬೇಕು. ಅಂದರೆ ಜಿಪ್ ಇರುವ ಪಾಕೆಟ್‌ಗಳು, ದೊಡ್ಡ ಬಟನ್‌ಗಳು, ವಿಸ್ತಾರವಾದ ಕಸೂತಿ ಇರುವ ಬಟ್ಟೆಗಳನ್ನು ಧರಿಸುವಂತಿಲ್ಲ. ಕುರ್ತಾ ಪೈಜಾಮವನ್ನು ಹಾಕಿಕೊಂಡು ಬರುವಂತಿಲ್ಲ. ಯಾವುದೇ ಲೋಹದ ಆಭರಣಗಳನ್ನು ಧರಿಸಿಕೊಂಡು ಬರುವಂತಿಲ್ಲ. ಶೂಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಪರೀಕ್ಷಾ ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ಕೆಇಎ ಬಿಡುಗಡೆ ಮಾಡಿದ ಡ್ರೆಸ್‌ಕೋಡ್‌ಗೆ ಸಂಬಂಧಿಸಿದ ಪ್ರಕಟಣೆ

ಪರೀಕ್ಷಾ ಕೇಂದ್ರದ ಒಳಗೆ ನೀರಿನ ಬಾಟಲಿ ತೆಗೆದುಕೊಂಡು ಹೋಗಬಹುದಾದರೂ ಬಾಟಲಿ ಪಾರದರ್ಶಕವಾಗಿರಬೇಕು. ಅದಕ್ಕೆ ಯಾವುದೇ ಲೇಬಲ್‌ ಇರಬಾರದು ಎಂದು ಸೂಚಿಸಲಾಗಿದೆ.
ಇತ್ತೀಚೆಗೆ ರಾಜ್ಯದಲ್ಲಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಕಷ್ಟು ಅಕ್ರಮ ನಡೆದ ಪ್ರಕರಣಗಳು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಪರೀಕ್ಷಾ ಪ್ರಾಧಿಕಾರವು ಈ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿದೆ.

ಇದನ್ನೂ ಓದಿ| KPTCL Recruitment 2022 | ಜು.23 ರಿಂದ ಎಕ್ಸಾಮ್‌; ಹೇಗಿರುತ್ತದೆ ಪರೀಕ್ಷೆ ಗೊತ್ತಾ?

Exit mobile version