ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (ಕೆಪಿಟಿಸಿಎಲ್) ಮತ್ತು ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿನ 1492 ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ (KPTCL Recruitment) ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಅರ್ಹ ಅಭ್ಯರ್ಥಿಗಳ ಸಂಭವನೀಯ ಮೆರಿಟ್ ಪಟ್ಟಿ ಪ್ರಕಟಿಸಿದ್ದು, ಈ ಪಟ್ಟಿಯಲ್ಲಿ ಕನ್ನಡಿಗರಿಗೆ ಅನ್ಯಯವಾಗಿದೆ ಎಂದು ಕೆಲ ಅಭ್ಯರ್ಥಿಗಳು ದೂರಿದ್ದಾರೆ.
ಸಹಾಯಕ ಎಂಜಿನಿಯರ್ ಹುದ್ದೆಗಳಲ್ಲಿ 43 ಹುದ್ದೆಗಳು ಸಾಮಾನ್ಯ ಅಭ್ಯರ್ಥಿಗೆ ಮೀಸಲಾಗಿದ್ದವು. ಇದರಲ್ಲಿ 24 ಹುದ್ದೆಗಳನ್ನು ಬೇರೆ ರಾಜ್ಯದವರಿಗೆ ನೀಡಲಾಗಿದೆ. ಇದರಿಂದ ರಾಜ್ಯದ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಅಭ್ಯರ್ಥಿಗಳು ಪಟ್ಟಿ ಮಾಡಿ ನಿಗಮದ ಗಮನ ಸೆಳೆದಿದ್ದಾರೆ.
ತಾತ್ಕಾಲಿಕ ಅರ್ಹತಾ ಪಟ್ಟಿ ನೋಡಲು ಇಲ್ಲಿ (Click Here) ಕ್ಲಿಕ್ ಮಾಡಿ.
ನೇಮಕದ ಸಂದರ್ಭದಲ್ಲಿ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ನಡೆಸಲಾಗಿದೆಯಾದರೂ ಕನ್ನಡವನ್ನು ಸರಿಯಾಗಿ ಮಾತನಾಡಲೂ ಬಾರದ ಹೊರ ರಾಜ್ಯದ ಅಭ್ಯರ್ಥಿಗಳಿಗೆ ಅರ್ಹತೆ ಗಳಿಸಲು ಬೇಕಾದಷ್ಟು ಅಂಕವನ್ನು ನೀಡಿ, ಅವರನ್ನು ನೇಮಕಕ್ಕೆ ಪರಿಗಣಿಸಲಾಗಿದೆ ಎಂದು ಅವರುಗಳು ಆರೋಪಿಸಿದ್ದಾರೆ.
ಕನ್ನಡ ಭಾಷಾ ಪರೀಕ್ಷೆ ಕಠಿಣವಾಗಿದ್ದರೂ ಮೌಲ್ಯಮಾಪಕರು ಈ ಅಭ್ಯರ್ಥಿಗಳಿಗೆ 50 ರಿಂದ- 60 ರ ಒಳಗೆ ಅಂಕ ನೀಡಿರುವುದು ಅನುಮಾನ ಮೂಡಲು ಕಾರಣವಾಗಿದೆ. ಹೀಗಾಗಿ ಕನ್ನಡ ಭಾಷಾ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಮತ್ತೊಮ್ಮೆ ಕಟ್ಟುನಿಟ್ಟಾಗಿ ಮೌಲ್ಯಮಾಪನ ಮಾಡಿಸಬೇಕು. ಆಗ ಕನ್ನಡಿಗರಿಗೆ ಆಗುತ್ತಿರುವ ಈ ಅನ್ಯಾಯ ತಪ್ಪಲಿದೆ ಎಂದು ಕೆಲ ಅಭ್ಯರ್ಥಿಗಳು ಇಂಧನ ಸಚಿವ ಸುನೀಲ್ ಕುಮಾರ್‌ಗೆ ಟ್ವಿಟ್ಟರ್‌ನಲ್ಲಿ ಕೋರಿದ್ದಾರೆ.
ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯಲ್ಲಿ ಅರ್ಹತೆ ಪಡೆಯಬೇಕೆಂದರೆ 50 ಅಂಕ ಪಡೆದಿರಬೇಕು. ಇದರಲ್ಲಿ ಸರಿಯಾಗಿ ಕನ್ನಡ ಬರೆಯಲು ಬಾರದ ಅಭ್ಯರ್ಥಿಗಳಿಗೆ 52, 53, 57 ಅಂಕ ನೀಡಲಾಗಿದೆ. ಇದು ಹೊರ ರಾಜ್ಯದವರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂಬುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ. 2016 ರಲ್ಲಿ ನಡೆದ ನೇಮಕದ ಸಂದರ್ಭದಲ್ಲಿಯೂ ಹೀಗೆಯೇ ಕನ್ನಡಿಗರಿಗೆ ಅನ್ಯಾಯ ಮಾಡಲಾಗಿತ್ತು ಎಂದು ಅಭ್ಯರ್ಥಿಗಳು ಹೇಳಿದ್ದಾರೆ.
ಅರ್ಹರೇ ಕಡಿಮೆ!
ಸಹಾಯಕ ಎಂಜಿನಿಯರ್ (ವಿದ್ಯುತ್) 505 ಹುದ್ದೆಗಳಿಗೆ ಪರೀಕ್ಷೆ ಬರೆದವರ ಪೈಕಿ ಕನಿಷ್ಠ 35 ಮತ್ತು ಅದಕ್ಕಿಂತ ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳು ಕೇವಲ 501 ಮಾತ್ರ. ಈ ಹುದ್ದೆಗೆ ಅರ್ಹತೆ ಪಡೆದ ಅಭ್ಯರ್ಥಿಗಳು ಪಡೆದ ಗರಿಷ್ಠ ಅಂಕವೆಂದರೆ ಶೇ. 63.75. ಸುಮಾರು 23,970 ಕ್ಕೂ ಅಹೆಚ್ಚು ಅರ್ಜಿ ಸಲ್ಲಿಕೆಯಾಗಿದ್ದು, ಪರೀಕ್ಷೆ ಬರೆದವರ ಸಂಖ್ಯೆಯೂ ಕಡಿಮೆ ಇತ್ತು. ಅಗತ್ಯವಾದಷ್ಟು ಸಂಖ್ಯೆಯ ಅಭ್ಯರ್ಥಿಗಳು ಅರ್ಹತೆಗೆ ನಿಗದಿಪಡಿಸಿದ್ದ ಕನಿಷ್ಠ ಅಂಕ ಪಡೆಯುವಲ್ಲಿ ಕೂಡ ವಿಫಲರಾಗಿದ್ದರು.
ನೆರೆಯ ಮಹಾರಾಷ್ಟ್ರದಲ್ಲಿ ವಿದ್ಯುತ್ ನಿಗಮಗಳಿಗೆ ನೇಮಕಾತಿ ಮಾಡಿಕೊಳ್ಳುವ ಸಂದರ್ಭದಲ್ಲಿ ಅಭ್ಯರ್ಥಿಗಳು “ಸ್ಥಳೀಯ ಪ್ರಮಾಣಪತ್ರ” ಸಲ್ಲಿಸುವುದು ಕಡ್ಡಾಯಗೊಳಿಸಲಾಗಿದೆ. ಹೀಗಾಗಿ ಬೇರೆ ರಾಜ್ಯದ ಅರ್ಜಿಗಳು ನೇರವಾಗಿ ತಿರಸ್ಕೃತಗೊಳ್ಳುತ್ತವೆ. ಆದರೆ ನಮ್ಮ ರಾಜ್ಯದಲ್ಲಿ ಈ ನಿಯಮ ಇಲ್ಲ. ಇದರಿಂದಾಗಿ ಬೇರೆ ರಾಜ್ಯದ ಅಭ್ಯರ್ಥಿಗಳು ಇಲ್ಲಿಗೆ ಆಗಮಿಸಿ ನೇಮಕ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯನ್ನು ನೆಪ ಮಾತ್ರಕ್ಕೆ ನಡೆಸುತ್ತಿರುವುದರಿಂದ ಅದರ ಲಾಭ ಪಡೆದುಕೊಳ್ಳುತ್ತಿದ್ದಾರೆ ಎಂದು ಈ ಅಭ್ಯರ್ಥಿಗಳು ವಿವರಿಸಿದ್ದಾರೆ.
ಕೂಡಲೇ ಇಂಧನ ಸಚಿವರ ಈ ನೇಮಕಾತಿಯಲ್ಲಿ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ, ಕನ್ನಡಿಗರಿಗೆ ಉದ್ಯೋಗ ದೊರೆಯುವಂತೆ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ : LIC ADO 2023 : ಎಲ್‌ಐಸಿಯಿಂದ ರಾಜ್ಯದಲ್ಲಿ 696 ಎಡಿಓ ಹುದ್ದೆಗಳಿಗೆ ಅರ್ಜಿ ಆಹ್ವಾನ; ಪರೀಕ್ಷಾ ದಿನಾಂಕ ಬದಲು