ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯು ಸಶಸ್ತ್ರ ಮೀಸಲು ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (ಆರ್‌ಎಸ್‌ಐ, ಸಿಎಆರ್/ಡಿಎಆರ್) (ಪುರುಷ) ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ (KSP Recruitment 2022) ಜನವರಿ 8 ರಂದು ಲಿಖಿತ ಪರೀಕ್ಷೆ ನಡೆಸಲಿದೆ.
ಕಳೆದ ಏಪ್ರಿಲ್ ತಿಂಗಳಿನಲ್ಲಿ ನಡೆದ ಸಹಿಷ್ಣುತೆ ಮತ್ತು ದೇಹದಾರ್ಡ್ಯತೆ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಮಾತ್ರ ಈ ಪರೀಕ್ಷೆ ಬರೆಯಬಹುದಾಗಿದೆ. ಒಟ್ಟು 71 ಹುದ್ದೆಗಳಿಗೆ ಈ ನೇಮಕ ನಡೆಯುತ್ತಿದ್ದು, ಕಳೆದ ಡಿಸೆಂಬರ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು.
ಜನವರಿ 8ರ ಭಾನುವಾರ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಪತ್ರಿಕೆ-1ರ ಪರೀಕ್ಷೆ ನಡೆಯಲಿದೆ. ಮಧ್ಯಾಹ್ನ 2 ರಿಂದ 3.30ರ ವರೆಗೆ ಪತ್ರಿಕೆ-2ರ ಪರೀಕ್ಷೆ ನಡೆಸಲಾಗುತ್ತದೆ.
ಪೊಲೀಸ್ ಇಲಾಖೆಯ ನೇಮಕಾತಿ ವೆಬ್‌ಸೈಟ್‌ನಲ್ಲಿ ಅಧಿಕೃತವಾಗಿ ಪರೀಕ್ಷಾ ದಿನಾಂಕ ಪ್ರಕಟಿಸಲಾಗಿದೆ. ಪರೀಕ್ಷೆಯ ಪ್ರವೇಶ ಪತ್ರವನ್ನು ಇಲಾಖೆಯು ವೆಬ್‌ಸೈಟ್‌ನಲ್ಲಿ ಒದಗಿಸಲಿದ್ದು, ಇದನ್ನು ಡೌನ್‌ಲೋಡ್ ಮಾಡಿಕೊಂಡು ಪರೀಕ್ಷೆಗೆ ಹಾಜರಾಗಬೇಕಿರುತ್ತದೆ.
ಡಿಸೆಂಬರ್ 18 ರಂದು ಇಲಾಖೆಯು ವಿಶೇಷ ಮೀಸಲು ಸಬ್ ಇನ್ಸ್‌ಪೆಕ್ಟರ್ (ಕೆಎಸ್‌ಆರ್‌ಪಿ ಮತ್ತು ಐಆರ್‌ಬಿ) ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ ಯಶಸ್ವಿಯಾಗಿ ಲಿಖಿತ ಪರೀಕ್ಷೆ ನಡೆಸಿತ್ತು. ಪಿಎಸ್‌ಐ ನೇಮಕಾತಿ ಹಗರಣ ಬೆಳಕಿಗೆ ಬಂದ ನಂತರ ಪೊಲೀಸ್ ಇಲಾಖೆಯು ಕಟ್ಟುನಿಟ್ಟಿನಿಂದ ಲಿಖಿತ ಪರೀಕ್ಷೆ ನಡೆಸುತ್ತಿದ್ದು, ಇದಕ್ಕಾಗಿ ಅಗತ್ಯ ಕ್ರಮ ತೆಗೆದುಕೊಂಡಿದೆ.
ಒಂದರ ಹಿಂದೆ ಒಂದು ಪರೀಕ್ಷೆ
ಈ ಪರೀಕ್ಷೆ ನಡೆದ ನಂತರ ಕೆಎಸ್‌ಐಎಸ್‌ಎಫ್ ಸಬ್ ಇನ್ಸ್‌ಪೆಕ್ಟರ್ 63 ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ ಲಿಖಿತ ಪರೀಕ್ಷೆ ನಡೆಸಲಾಗುವುದು ಎಂದು ಪೊಲೀಸ್ ಮಹಾ ನಿರ್ದೇಶಕ (ಡಿಜಿಪಿ) ಪ್ರವೀಣ್ ಸೂದ್ ಟ್ವೀಟ್ ಮಾಡಿ ತಿಳಿಸಿದ್ದಾರೆ.
ಅಕ್ರಮದ ಕಾರಣದಿಂದಾಗಿ ರದ್ದುಗೊಂಡಿರುವ 545 ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಹುದ್ದೆಗಳ ನೇಮಕಕ್ಕೂ ನಂತರ ಮರು ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಈ ಸಂಬಂಧ ಹೈಕೋರ್ಟ್ ನೀಡುವ ತೀರ್ಪನ್ನು ಪಾಲಿಸಲಾಗುತ್ತದೆ ಎಂದು ಅವರು ಹೇಳಿದ್ದು, ಮುಂದೆ 402 ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳಿಗೂ ಪರೀಕ್ಷೆ ನಡೆಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ನೀವು ನೋಡುತ್ತಿರಬೇಕಾದ ವೆಬ್‌ಸೈಟ್ ವಿಳಾಸ ಇಂತಿದೆ: https://arc21.ksp-recruitment.in/
ಇದನ್ನೂ ಓದಿ | KPTCL Exam | ಜನವರಿ ಮೊದಲ ವಾರದಲ್ಲಿ AE, JE ನೇಮಕ ಪರೀಕ್ಷೆ ಫಲಿತಾಂಶ