ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯು ಒಟ್ಟು 3,484 ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕ ಪ್ರಕ್ರಿಯೆಯನ್ನು (KSP Recruitment 2022) ಆರಂಭಿಸಿದ್ದು, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಗಮನಿಸಲೇಬೇಕಾದ ಕೆಲ ವಿಷಯಗಳು ಇಲ್ಲಿವೆ;
೧. ಅರ್ಜಿಯನ್ನು ಭರ್ತಿ ಮಾಡುವ ಮುನ್ನ ಅಧಿಸೂಚನೆಯನ್ನು ಜಾಗರೂಕತೆಯಿಂದ ಓದಿ. ವಿದ್ಯಾರ್ಹತೆ, ವಯೋಮಿತಿ, ದೈಹಿಕ ಅರ್ಹತೆಗಳು ನಿಮಗಿದೆಯೇ ಎಂದು ಪರಿಶೀಲಿಸಿಕೊಳ್ಳಿ. ಅರ್ಜಿ ಸಲ್ಲಿಸಲು ನೀಡಲಾಗಿರುವ ವೆಬ್‌ಸೈಟ್‌ನಲ್ಲಿ ಅಧಿಸೂಚನೆಯನ್ನು ನೀಡಲಾಗಿದೆ. ವೆಬ್‌ವಿಳಾಸ: https://apc3064.ksp-recruitment.in/#
೨. ಅರ್ಜಿ ನಮೂನೆಯನ್ನು ಭರ್ತಿ ಮಾಡುವ ಮೊದಲೇ ಯಾವೆಲ್ಲಾ ದಾಖಲೆಗಳು ಬೇಕು ಎಂಬುದನ್ನು ನೋಡಿಕೊಂಡು ಅವುಗಳನ್ನು ಹೊಂದಿಸಿಟ್ಟುಕೊಳ್ಳಿ. ಅಧಿಸೂಚನೆಯನ್ನು ಓದಿದರೆ ನಿಮಗೆ ಯಾವೆಲ್ಲಾ ದಾಖಲೆ ಬೇಕಾಗುತ್ತದೆ ಎಂಬುದು ತಿಳಿಯುತ್ತದೆ.
೩. ಅರ್ಜಿಯಲ್ಲಿ ಜನ್ಮ ದಿನಾಂಕವನ್ನು ಸರಿಯಾಗಿ ದಾಖಲಿಸಿ. ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯ ಅಂಕಪಟ್ಟಿಯಲ್ಲಿರುವಂತೆ ಜನ್ಮ ದಿನಾಂಕವನ್ನು ಭರ್ತಿ ಮಾಡಿ.
೪. ಜಾತಿ ಪ್ರಮಾಣಪತ್ರ ಅಂದರೆ ನೀವು ಪ.ಜಾ/ಪ್ರ.ಪಂ/ಪ್ರವರ್ಗ-೦೧/೨ಎ/೨ಬಿ/೩ಎ/೩ಬಿ ಮೀಸಲಾತಿ ಮತ್ತು ಸಮತಲ ಮೀಸಲಾತಿಯಾದ ಗ್ರಾಮೀಣ, ಕನ್ನಡ ಮಾಧ್ಯಮ, ಯೋಜನಾ ನಿರಾಶ್ರಿತ ಮತ್ತು ಮಾಜಿ ಸೈನಿಕ ಮೀಸಲಾತಿಯನ್ನು ಕೋರುತ್ತಿದ್ದಲ್ಲಿ ಅದಕ್ಕೆ ಸಂಬಂಧಿಸಿದಂತೆ ಪ್ರಮಾಣ ಪತ್ರಗಳಿರಲಿ. ಈ ಪ್ರಮಾಣ ಪತ್ರಗಳು ಕ್ರಮದಲ್ಲಿವೆಯೇ, ಚಾಲ್ತಿಯಲ್ಲಿವೆಯೇ, ನಿಗದಿಪಡಿಸಲಾದ ಕೊನೆಯ ದಿನಾಂಕದೊಳಗಿದೆಯೇ ಮತ್ತು ಈ ಪ್ರಮಾಣ ಪತ್ರಗಳು ಸಕ್ಷಮ ಪ್ರಾಧಿಕಾರಿಗಳಿಂದ ಸಹಿ ಮಾಡಲಾಗಿದೆಯೇ ಹಾಗೂ ಅಧಿಸೂಚನೆಯಲ್ಲಿರುವಂತೆ ಇದೆಯೇ ಎಂದು ಖಾತರಿಪಡಿಸಿಕೊಳ್ಳಿ.
೫. ಮಾಜಿ ಸೈನಿಕ ಅಭ್ಯರ್ಥಿಯಾಗಿದ್ದಲ್ಲಿ ಅರ್ಹ ವಿದ್ಯಾರ್ಹತೆಯ ಪ್ರಮಾಣ ಪತ್ರವಲ್ಲದೆ, ಸೈನ್ಯ ವಿಯೋಜನೆ ಪ್ರಮಾಣ ಪತ್ರ /ನಿರಾಪೇಕ್ಷಣ ಪ್ರಮಾಣ ಪತ್ರವನ್ನು ನೀವು ಹೊಂದಿರಬೇಕು. ಮಾಜಿ ಸೈನಿಕ ಅಭ್ಯರ್ಥಿಗಳು ಭೂಸೇನೆ/ನೌಕಾಸೇನೆ/ವಾಯುಸೇನೆಯಲ್ಲಿ ಸೈನ್ಯಕ್ಕೆ ಸೇರಿದ ಮತ್ತು ಸೈನ್ಯದಿಂದ ವಿಯೋಜನೆಯನ್ನು ಹೊಂದಿದ ದಿನಾಂಕವನ್ನು ಬರೆದಿಟ್ಟುಕೊಂಡಲ್ಲಿ ಅರ್ಜಿ ನಮೂನೆಯಲ್ಲಿನ ಕಾಲಂಗಳನ್ನು ತಪ್ಪಿಲ್ಲದೆ ಭರ್ತಿ ಮಾಡಲು ಅನುಕೂಲವಾಗುತ್ತದೆ.
೬. ಸೇವೆಯಲ್ಲಿ ಶಾಶ್ವತವಾಗಿ ಅಂಗವಿಕಲತೆ ಅಥವಾ ಮೃತ ಹೊಂದಿದ ಸೈನಿಕರ ಕುಟುಂಬದವರು ಸಕ್ಷಮ ಪ್ರಾಧಿಕಾರದಿಂದ ಪಡೆದ ಅವಲಂಬಿತ ಪ್ರಮಾಣಪತ್ರ ಮತ್ತು ಸೈನಿಕ್ ಬೋರ್ಡ್‌ನಿಂದ ಪಡೆದ ಪತ್ರವು ಸಿಂಧುವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಂಡು ಮೀಸಲಾತಿಯನ್ನು ಕೋರಬಹುದು. ಮಾಜಿಸೈನಿಕ ಮೀಸಲಾತಿ ಕೋರುವ ಮಾಜಿ ಸೈನಿಕರ ಮಕ್ಕಳು ತಮ್ಮ ತಂದೆ ಕರ್ತವ್ಯದಲ್ಲಿ ಶಾಶ್ವತವಾಗಿ ದೈಹಿಕ ವಿಕಲತೆ ಅಥವಾ ಮರಣ ಹೊಂದಿದ್ದರೆ ಮಾತ್ರ ಮೀಸಲಾತಿಯನ್ನು ಕೋರಬಹುದು.
೮. ನಿಮ್ಮ ಸಹಿ, ಭಾವಚಿತ್ರ ಮತ್ತು ಗುರುತಿನ ಚೀಟಿಯನ್ನು Jpeg, jpg, gif, png ಮಾದರಿಯಲ್ಲಿ ಸಿದ್ಧಪಡಿಸಿಟ್ಟುಕೊಳ್ಳಿ. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಗುರುತಿನ ಚೀಟಿ, ಭಾವಚಿತ್ರ ಮತ್ತು ಸಹಿ ಪ್ರತಿಯೊಂದರ ಗಾತ್ರವು ೨೫೦ ಕೆಬಿ ಮೀರಿರಬಾರದು. ನಿಮ್ಮ ದಾಖಲೆಗಳು ಸರಿಯಾದ ಫಾರ್ಮೆಟ್‌ನಲ್ಲಿ ಇಲ್ಲದಿದ್ದರೆ ನಿಮಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲ. ಇದು ನಿಮ್ಮ ಗಮನದಲ್ಲಿರಲಿ.
೯. ಅರ್ಜಿಯನ್ನು ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ನೋಡಬಹುದಾಗಿದೆ, ಆದರೆ ಅರ್ಜಿಯನ್ನು ಇಂಗ್ಲೀಷ್ ಭಾಷೆಯಲ್ಲಿ ಮಾತ್ರ ಭರ್ತಿ ಮಾಡಲು ಸಾಧ್ಯ. ನೀವು ಅರ್ಜಿಯನ್ನು ಯಶಸ್ವಿಯಾಗಿ ಸಲ್ಲಿಸಿದ ನಂತರ ನಿಮಗೆ ಇ-ಮೇಲ್ ಮತ್ತು ಎಸ್‌ಎಂಎಸ್ ಮೂಲಕ ಮಾಹಿತಿ ನೀಡಲಾಗುತ್ತದೆ.
೧೦. ಸಲ್ಲಿಸಿದ ಅರ್ಜಿಯನ್ನು “ನನ್ನ ಅರ್ಜಿ” ಲಿಂಕ್‌ನ್ನು ಉಪಯೋಗಿಸಿಕೊಂಡು ಪ್ರಿಂಟ್ ತೆಗೆದುಕೊಳ್ಳಬಹುದು. ಮುಂದೆ ನೇಮಕ ಪ್ರಕ್ರಿಯೆಯಲ್ಲಿ ಇದು ಬೇಕಾಗುವುದರಿಂದ ನಿಮಗೆ ಬೇಕಾದಷ್ಟು ಸಂಖ್ಯೆಯಲ್ಲಿ ಅರ್ಜಿಗಳನ್ನು ಪ್ರಿಂಟ್ ತೆಗೆದುಕೊಳ್ಳಿ.
೧೧. ಅರ್ಜಿಯನ್ನು ಕೊನೆಯ ದಿನದೊಳಗಾಗಿ ಭರ್ತಿ ಮಾಡಿ ಸಲ್ಲಿಸಿ, ನಿಗದಿತ ಶುಲ್ಕ ಪಾವತಿಗಾಗಿ ಚಲನ್ ಅನ್ನು ಮುದ್ರಿಸಿಕೊಂದು ಕೆನರಾ ಬ್ಯಾಂಕ್ ಅಥವಾ ಅಂಚೆ ಕಚೇರಿಯ ಶಾಖೆಗಳಲ್ಲಿ ಮಾತ್ರ ಪಾವತಿಸಿ. ನಿಗದಿತ ಶುಲ್ಕವನ್ನು ಬ್ಯಾಂಕ್ ನಲ್ಲಿ ಪಾವತಿಸಿದ ಎರಡು ದಿನಗಳ ನಂತರ ಅರ್ಜಿಯನ್ನು ಮುದ್ರಿಸಕೊಳ್ಳಲು ಅವಕಾಶ ನೀಡಲಾಗುತ್ತದೆ.
೧೨. ಗ್ರಾಮೀಣ ಮೀಸಲಾತಿಯನ್ನು ಕೋರುವ ಅಭ್ಯರ್ಥಿಯು ೧ ರಿಂದ ೧೦ನೇ ತರಗತಿಯವರೆಗೆ ಗ್ರಾಮೀಣ
ಪ್ರದೇಶದಲ್ಲಿ ವಿದ್ಯಾಭ್ಯಾಸ ಮಾಡಿರಬೇಕು. ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿಗಳಿಗೆ ಮೀಸಲಿರಿಸಿ ಹುದ್ದೆಗಳ ಮೀಸಲಾತಿಯನ್ನು ಕೋರುವ ಅಭ್ಯರ್ಥಿಗಳು 1 ನೇ ತರಗತಿಯಿಂದ 10 ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುವ ಬಗ್ಗೆ ಸಂಬಂಧಪಟ್ಟ ಶಾಲೆಯ ಮುಖ್ಯೋಪಾಧ್ಯಾಯರ ಸಹಿ ಪಡೆದು ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮೇಲು ರುಜು ಮಾಡಿಸಿ ಮತ್ತು ಮೊಹರಿನೊಂದಿಗೆ ಪ್ರಮಾಣ ಪತ್ರವನ್ನು ಪಡೆದಿಟ್ಟುಕೊಂಡಿರಬೇಕು.
೧೩. ಅಭ್ಯರ್ಥಿಗಳು ಒಂದು ಹುದ್ದೆಗೆ ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಬಾರದೆಂದು ಸೂಚಿಸಲಾಗಿದೆ. ಹೀಗಾಗಿ ಅಭ್ಯರ್ಥಿಯು ಅತೀ ಜಾಗರೂಕತೆಯಿಂದ ಮತ್ತು ಬಹಳ ಎಚ್ಚರಿಕೆಯಿಂದ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಬೇಕು. ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಿ, ಮುಂದೆ ಗೊಂದಲವಾದಲ್ಲಿ ನೇಮಕಾತಿ ಸಮಿತಿಯು ಸೂಕ್ತ ಕ್ರಮ ತೆಗೆದುಕೊಳ್ಳಲಿದೆ.
೧೪. ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಯಾವುದೇ ಕ್ರಿಮಿನಲ್ ಮೊಕದ್ದಮೆಯಲ್ಲಿ ಶಿಕ್ಷೆಗೆ ಗುರಿಯಾಗಿರಬಾರದು. ಕ್ರಿಮಿನಲ್ ಮೊಕದ್ದಮೆಯಲ್ಲಿ ಭಾಗಿಯಾಗಿ ಬಿಡುಗಡೆಯಾಗಿದ್ದರೆ ಅಥವಾ ಪ್ರಕರಣ ಖುಲಾಸೆಯಾಗಿದ್ದರೆ ಈ ಸಂಬಂಧ ನೇಮಕಾತಿ ಪ್ರಾಧಿಕಾರವು ತೆಗೆದುಕೊಳ್ಳುವ ತೀರ್ಮಾನವೇ ಅಂತಿಮವಾಗಿರುತ್ತದೆ.
೧೫. ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡುವಾಗ ಯಾವುದೇ ಸುಳ್ಳು/ತಪ್ಪು ಮಾಹಿತಿಗಳನ್ನು ನೀಡಬಾರದು. ಹಾಗೇ ನೀಡಿದ್ದಲ್ಲಿ ಮುಂದೆ ನೇಮಕಾತಿ ಸಮಿತಿಗೆ ಅದು ಗೊತ್ತಾದಲ್ಲಿ ಅಂತಹ ಅಭ್ಯರ್ಥಿಗಳ ಅಭ್ಯರ್ಥಿತನವನ್ನು ರದ್ದು ಪಡಿಸಲಾಗುತ್ತದೆ.
ಅರ್ಜಿ ಸಲ್ಲಿಸಲು ಲಿಂಕ್ ಇಲ್ಲಿದೆ | https://apc3064.ksp-recruitment.in/
ಇದನ್ನೂ ಓದಿ | KSP Recruitment 2022 | 3,484 ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಇಂದಿನಿಂದ ಅರ್ಜಿ ಸಲ್ಲಿಕೆ ಶುರು