ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿನ 1,591 ನಾಗರಿಕ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಹಾಗೂ 3,484 ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ (KSP Recruitment) ರಾಜ್ಯ ವಿಧಾನಸಭಾ ಚುನಾವಣೆ ಮುಗಿದ ನಂತರ ಅಂದರೆ ಮುಂದಿನ ಜುಲೈನಲ್ಲಿ ಲಿಖಿತ ಪರೀಕ್ಷೆ ನಡೆಯುವ ಸಾಧ್ಯತೆ ಇದೆ.
ಬಹುತೇಕವಾಗಿ ಜುಲೈನಲ್ಲಿ ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುವುದು ಎಂದು ಪೊಲೀಸ್ ಮಹಾ ನಿರ್ದೇಶಕರು ಟ್ವಿಟ್ಟರ್‌ನಲ್ಲಿ ತಿಳಿಸಿದ್ದು, ಜುಲೈ 2, 9, 16 ಮತ್ತು 23 ರಂದು ಪರೀಕ್ಷೆ ನಡೆಸಲಾಗುವುದು ಎಂದು ತಾತ್ಕಾಲಿಕ ದಿನಾಂಕ ನೀಡಿದ್ದಾರೆ. 2022ರ ಸೆಪ್ಟೆಂಬರ್ ಹಾಗೂ ಅಕ್ಟೋಬರ್‌ನಲ್ಲಿ ಈ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು.
ಸಾವಿರಾರು ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ನೇಮಕ ಪ್ರಕ್ರಿಯೆಗಾಗಿ ಕಾಯುತ್ತಿದ್ದಾರೆ. ಈ ಕುರಿತು ಟ್ವಿಟ್ಟರ್‌ನಲ್ಲಿ ಅಭ್ಯರ್ಥಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ಈ ಮಾಹಿತಿ ಹಂಚಿಕೊಂಡಿದ್ದಾರೆ. ಪೊಲೀಸ್ ಕಾನ್ಸ್‌ಟೇಬಲ್ ನೇಮಕ ಪ್ರಕ್ರಿಯೆಯಲ್ಲಿ ಮೊದಲಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಇದರಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು 1:5 ರ ಅನುಪಾತದಲ್ಲಿ ದೇಹದಾರ್ಢ್ಯತೆ ಮತ್ತು ಸಹಿಷ್ಣುತೆ ಪರೀಕ್ಷೆಗೆ ಆಹ್ವಾನಿಸಲಾಗುತ್ತದೆ. ಈ ಎರಡೂ ಪರೀಕ್ಷೆ ನಡೆದ ನಂತರ ವೈದ್ಯಕೀಯ ಪರೀಕ್ಷೆ ನಡೆಸಿ ನೇಮಕ ಮಾಡಿಕೊಳ್ಳಲಾಗುತ್ತದೆ.
ಆದರೆ ಅಧಿಸೂಚನೆ ಪ್ರಕಟವಾಗಿ ಆರು ತಿಂಗಳು ಕಳೆದರೂ ಮೊದಲಿಗೆ ನಡೆಯಬೇಕಾಗಿದ್ದ ಲಿಖಿತ ನಡೆಸಲಾಗಿರಲಿಲ್ಲ. ಈ ಬಗ್ಗೆ ಸ್ಪಷ್ಟ ಮಾಹಿತಿಯನ್ನೂ ಇಲಾಖೆ ನೀಡುತ್ತಿರಲಿಲ್ಲ. ಹೀಗಾಗಿ ಅಭ್ಯರ್ಥಿಗಳು ನಿರಾಸೆ ಅನುಭವಿಸುತ್ತಿದ್ದರು.
ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ನೇಮಕಾತಿಯಲ್ಲಿ ಭಾರಿ ಅಕ್ರಮ ನಡೆದಿದ್ದರಿಂದ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳೇ ಈ ಹಗರಣದಲ್ಲಿ ಭಾಗಿಯಾಗಿದ್ದರಿಂದ ಪೊಲೀಸ್ ಇಲಾಖೆಯ ನೇಮಕ ಪ್ರಕ್ರಿಯೆಯ ಮೇಲೆ ಕಾರ್ಮೋಡ ಕವಿದಿದೆ. ಹೀಗಾಗಿ ಪೊಲೀಸ್ ಇಲಾಖೆ ಸೇರಬೇಕೆಂದು ಕನಸು ಹೊತ್ತಿದ್ದ ರಾಜ್ಯದ ಲಕ್ಷಾಂತರ ಅಭ್ಯರ್ಥಿಗಳು ಈಗ ದಿಕ್ಕುಕಾಣದಂತಾಗಿದ್ದಾರೆ.
ಲಿಖಿತ ಪರೀಕ್ಷೆಯಲ್ಲಿಯೂ ಅಕ್ರಮ ನಡೆದಿದ್ದರಿಂದ 545 ಸಬ್‌ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಮರು ಪರೀಕ್ಷೆ ನಡೆಸಲಾಗುವುದು ಎಂದು ರಾಜ್ಯ ಸರ್ಕಾರ ಈಗಾಗಲೇ ಪ್ರಕಟಿಸಿದೆ. ಆದರೆ ಇದರ ದಿನಾಂಕವನ್ನೂ ಇದುವರೆಗೆ ಪ್ರಕಟಿಸಲಾಗಿಲ್ಲ. ಈಗಾಗಲೇ ಪರೀಕ್ಷೆ ಬರೆದು, ನೇಮಕ ಪ್ರಕ್ರಿಯೆಯಲ್ಲಿ ಅಂತಿಮ ಹಂತಕ್ಕೆ ಬಂದಿದ್ದ ಅಭ್ಯರ್ಥಿಗಳು ಕೂಡ ಈ ಪರೀಕ್ಷೆಗಾಗಿ ಕಾಯುತ್ತಲೇ ಇದ್ದಾರೆ.
ಈ ನಡುವೆ ಕರ್ನಾಟಕ ಲೋಕ ಸೇವಾ ಆಯೋಗವು ಈಗಾಗಲೇ ಈ ವರ್ಷ ನಡೆಸಲಿರುವ ವಿವಿಧ ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿಯನ್ನು ಕಟಿಸಿದೆ. ಇದರ ಪ್ರಕಾರ ಜುಲೈ 1 ಮತ್ತು 2 ರಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿನ ಸಹಾಯಕ ಕಾರ್ಯಪಾಲಕ ಅಭಿಯಂತರರ ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗುತ್ತದೆ. ಹೀಗಾಗಿ ಪೊಲೀಸ್ ಮಹಾನಿರ್ದೇಶಕರು ತಿಳಿಸಿದಂತೆ ಜುಲೈ 2 ರಂದು ಪರೀಕ್ಷೆ ನಡೆಸಲು ಸಾಧ್ಯವಾಗದು ಎಂದು ಅಭ್ಯರ್ಥಿಗಳು ತಿಳಿಸಿದ್ದಾರೆ.
ಒಟ್ಟಾರೆಯಾಗಿ ಪೊಲೀಸ್ ನೇಮಕಕ್ಕೆ ಜುಲೈನಲ್ಲಿ ಪರೀಕ್ಷೆ ನಡೆಸಲಾಗುತ್ತದೆ ಎಂದು ಇಲಾಖೆಯ ಮುಖ್ಯಸ್ಥರು ಪ್ರಕಟಿಸಿರುವುದು ಅಭ್ಯರ್ಥಿಗಳಲ್ಲಿ ಹೊಸ ಭರವಸೆ ಮೂಡಿಸಿದೆ.
ಇದನ್ನೂ ಓದಿ : BMRCL Recruitment 2023 : ನಮ್ಮ ಮೆಟ್ರೋದಲ್ಲಿ 236 ಹುದ್ದೆಗಳಿಗೆ ನೇಮಕ; ಬಿಇ, ಡಿಪ್ಲೊಮಾ, ಐಟಿಐ ಮಾಡಿದವರಿಗೆ ಅವಕಾಶ