Site icon Vistara News

KTET Exam 2022 | ಶಿಕ್ಷಕರ ಅರ್ಹತಾ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನ

KTET Exam 2022

ಸಾರ್ವಜನಿಕ ಶಿಕ್ಷಣ ಇಲಾಖೆಯು ನಡೆಸುವ ‘ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ’ಗೆ (ಟಿಇಟಿ) (KTET Exam 2022) ಅರ್ಜಿ ಸಲ್ಲಿಸಲು ಇಂದು (ಸೆ.30) ಕೊನೆಯ ದಿನವಾಗಿದೆ. ಇನ್ನೂ ಅರ್ಜಿ ಸಲ್ಲಿಸದೇ ಇರುವ ಆಸಕ್ತ ಅಭ್ಯರ್ಥಿಗಳು ಈ ಕೂಡಲೇ (ಮಧ್ಯರಾತ್ರಿ ೧೨ ಗಂಟೆಯ ಒಳಗೆ) ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ನಲ್ಲಿಯೇ ಅರ್ಜಿ ಶುಲ್ಕ ಪಾವತಿಸಲು ಅವಕಾಶ ನೀಡಲಾಗಿದೆ.

ನವೆಂಬರ್‌ 6ರ ಭಾನುವಾರದಂದು ಈ ಅರ್ಹತಾ ಪರೀಕ್ಷೆ ನಡೆಯಲಿದೆ. ಅರ್ಜಿ ಸಲ್ಲಿಕೆಯ ಅವಧಿಯನ್ನು ವಿಸ್ತರಿಸಲಾಗುವುದಿಲ್ಲ ಎಂದು ಶಿಕ್ಷಣ ಇಲಾಖೆಯ ಆಧಿಕಾರಿಗಳು “ವಿಸ್ತಾರ ನ್ಯೂಸ್‌ʼʼಗೆ ತಿಳಿಸಿದ್ದಾರೆ. ಸರ್ಕಾರಿ ಶಾಲೆಗಳ ಶಿಕ್ಷಕ ಹುದ್ದೆಗಳಿಗೆ ನಡೆಯುವ ನೇಮಕ ಪ್ರಕ್ರಿಯೆಯಲ್ಲಿ ಭಾಗವಹಿಸಲು ಈ ಅರ್ಹತಾ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವುದು ಕಡ್ಡಾಯವಾಗಿದೆ.

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ: https://sts.karnataka.gov.in/TET/

ಯಾರು ಅರ್ಜಿ ಸಲ್ಲಿಸಬಹುದು?
1 ರಿಂದ 5ನೇ ತರಗತಿಗಳಿಗೆ ಶಿಕ್ಷಕರಾಗಲು ಸೀನಿಯರ್ ಸೆಕೆಂಡರಿ/ಪಿಯುಸಿ/ತತ್ಸಮಾನ ವಿದ್ಯಾರ್ಹತೆಯಲ್ಲಿ ಕನಿಷ್ಠ ಶೇ.50 (ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು ಶೇ.45) ಅಂಕಗಳನ್ನು ಪಡೆದಿರಬೇಕು ಮತ್ತು ಶಿಕ್ಷಣದಲ್ಲಿ (D.El.Ed) ಎರಡು ವರ್ಷಗಳ ಡಿಪ್ಲೊಮಾ ಪಡೆದಿರಬೇಕು ಅಥವಾ ವಿಶೇಷ ಶಿಕ್ಷಣದಲ್ಲಿ ಎರಡು ವರ್ಷದ ಡಿಪ್ಲೊಮಾ ಮಾಡಿರಬೇಕು. ಬಿಇಡಿ ಪದವಿ ಪಡೆದವರೂ ಅರ್ಜಿ ಸಲ್ಲಿಸಬಹುದು.
ಇವರೆಲ್ಲರೂ ಟಿಇಟಿ ಪರೀಕ್ಷೆಯಲ್ಲಿ ಪತ್ರಿಕೆ-1 ಅನ್ನು ಬರೆಯಲು ಅರ್ಹರಾಗಿರುತ್ತಾರೆ.

6 ರಿಂದ 8ನೇ ತರಗತಿಗೆ ಶಿಕ್ಷಕರಾಗಲು ಪದವಿಯಲ್ಲಿ ಕನಿಷ್ಠ ಶೇ. 50 (ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು ಶೇ.45) ಅಂಕಗಳನ್ನು ಪಡೆದಿರಬೇಕು ಮತ್ತು ಎರಡು ವರ್ಷಗಳ D.El.Ed ಕೋರ್ಸಿನ ತೇರ್ಗಡೆಯಾಗಿರಬೇಕು ಅಥವಾ ಬಿ.ಇಡಿಯಲ್ಲಿ ಅಥವಾ ನಾಲ್ಕು ವರ್ಷಗಳ B.El.Ed ಯಲ್ಲಿ ಅಥವಾ ಅಥವಾ ನಾಲ್ಕು ವರ್ಷಗಳ ಎಲಿಮೆಂಟರಿ ಶಿಕ್ಷಣದ ಪದವಿಯನ್ನು ಪಡೆದಿರಬೇಕು. ಬಿಎ/ಬಿಎಸ್ಸಿ ಪದವಿ ಮತ್ತು ಶಿಕ್ಷಣದಲ್ಲಿ ಎರಡು ವರ್ಷಗಳ ಡಿಪ್ಲೊಮಾ ಪಡೆದವರು ಕೂಡ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

1 ರಿಂದ 8ನೇ ತರಗತಿಗಳಿಗೆ ಶಿಕ್ಷಕರಾಗಲು ಸೀನಿಯರ್ ಸೆಕೆಂಡರಿ/ಪಿಯುಸಿ/ತತ್ಸಮಾನ ವಿದ್ಯಾರ್ಹತೆಯಲ್ಲಿ ಕನಿಷ್ಠ ಶೇ.50(ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು ಶೇ.45) ಅಂಕಗಳನ್ನು ಗಳಿಸಿರಬೇಕು ಮತ್ತು ನಾಲ್ಕು ವರ್ಷಗಳ ಎಲಿಮೆಂಟರಿ ಶಿಕ್ಷಣ ಪದವಿಯನ್ನು ಹೊಂದಿರಬೇಕು. ಈ ಅಭ್ಯರ್ಥಿಗಳು ಟಿಇಟಿ ಪರೀಕ್ಷೆಯಲ್ಲಿ ಎರಡೂ ಪತ್ರಿಕೆಗಳನ್ನು ಬರೆಯಲು ಅರ್ಹರಾಗಿರುತ್ತಾರೆ.

ಅರ್ಜಿ ಶುಲ್ಕ ಎಷ್ಟು?
ಆನ್‌ಲೈನ್‌ನಲ್ಲಿಯೇ (ಇಂಟರ್‌ನೆಟ್‌ ಬ್ಯಾಂಕಿಂಗ್‌ ಮತ್ತು ಯುಪಿಐ ಮೂಲಕ) ಅರ್ಜಿ ಶುಲ್ಕ ಪಾವತಿಸಲು ಅವಕಾಶ ನೀಡಲಾಗಿದೆ. ಶುಲ್ಕ ಪಾವತಿಸಲು ಕೂಡ ಸೆಪ್ಟೆಂಬರ್‌ 30 (ಮಧ್ಯರಾತ್ರಿ ೧೨ ಗಂಟೆಯವರೆಗೆ) ಕೊನೆಯ ದಿನವಾಗಿರುತ್ತದೆ.‌ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಚಲನ್‌ ಮೂಲಕವೂ ಅರ್ಜಿ ಶುಲ್ಕ ಪಾವತಿಸಲು ಅವಕಾಶ ನೀಡಲಾಗಿದೆ.

ಇದು ಶಿಕ್ಷಕರ ಅರ್ಹತಾ ಪರೀಕ್ಷೆಯೇ ಹೊರತು ನೇಮಕಾತಿ ಪರೀಕ್ಷೆಯಲ್ಲ. ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ತೆಗೆದುಕೊಂಡ ಮಾತ್ರಕ್ಕೆ ಅಭ್ಯರ್ಥಿಗಳು ಶಿಕ್ಷಕರ ನೇಮಕಾತಿಗಾಗಿ ಯಾವುದೇ ರೀತಿಯ ಹಕ್ಕನ್ನು ಚಲಾಯಿಸುವಂತಿಲ್ಲ. ಸಾರ್ವಜನಿಕ ಶಿಕ್ಷಣ ಇಲಾಖೆಯ ಕೇಂದ್ರೀಕೃತ ದಾಖಲಾತಿ ಘಟಕದ ವಿಶೇಷಾಕಾರಿಗಳು ಈ ಪರೀಕ್ಷೆ ನಡೆಸಲಿದ್ದಾರೆ. ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಅಭ್ಯರ್ಥಿಯು ಅರ್ಜಿಯಲ್ಲಿ ನಮೂದಿಸುವ ಮೀಸಲಾತಿ, ಜನ್ಮ ದಿನಾಂಕ, ವಿದ್ಯಾರ್ಹತೆ ಹಾಗೂ ವಯೋಮಿತಿ ಸಡಿಲಿಕೆ ಇತ್ಯಾದಿಗಳಿಗೆ ಸಲ್ಲಿಸಿರುವ ಸಂಬಂಧಿತ ವಿವರಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಈ ಮಾಹಿತಿ ಆಧಾರದ ಮೇಲೆ ಅಭ್ಯರ್ಥಿಗೆ ಅರ್ಹತಾ ಪರೀಕ್ಷೆ ಬರೆಯಲು ಪ್ರವೇಶ ಪತ್ರಗಳನ್ನು ನೀಡಲಾಗುತ್ತದೆ. ಆದ್ದರಿಂದ ನಿಗದಿಪಡಿಸಿರುವ ವಿದ್ಯಾರ್ಹತೆ, ನಿಗದಿಪಡಿಸಲಾದ ಶೈಕ್ಷಣಿಕ ಅರ್ಹತೆಯ ಅಂಕಗಳ ಮಾಹಿತಿ, ಮೀಸಲಾತಿ, ಜನ್ಮದಿನಾಂಕ ಇತ್ಯಾದಿಗಳಿಗೆ ಅನುಗುಣವಾಗಿ ಅರ್ಜಿಯಲ್ಲಿ ಸರಿಯಾದ ಮಾಹಿತಿ ನೀಡುವುದು ಅಭ್ಯರ್ಥಿಗಳ ಜವಾಬ್ದಾರಿಯಾಗಿರುತ್ತದೆ. ಪೂರ್ಣ ಮಾಹಿತಿ ನೀಡದ ಅಥವಾ ತಪ್ಪು ಮಾಹಿತಿ ನೀಡಿದ ಸಂದರ್ಭಗಳಲ್ಲಿ ಮುಂದಿನ ಆಗು ಹೋಗುಗಳಿಗೆ ಅಭ್ಯರ್ಥಿಗಳೇ ಜವಾಬ್ದಾರರಾಗಿರುತ್ತಾರೆ.

ಇತ್ತ ಗಮನಿಸಿ

ಇದನ್ನೂ ಓದಿ | KTET Exam 2022 | ಶಿಕ್ಷಕರ ಅರ್ಹತಾ ಪರೀಕ್ಷೆ ಕುರಿತು ಗೊಂದಲವೇ? ಈ ಪ್ರಶ್ನೋತ್ತರ ಓದಿ

Exit mobile version