ಬೆಂಗಳೂರು: ಇನ್ನು ಮುಂದೆ ವರ್ಷಕ್ಕೆ ಎರಡು ಬಾರಿ ಟಿಇಟಿ ಪರೀಕ್ಷೆ (ಶಿಕ್ಷಕರ ಅರ್ಹತಾ ಪರೀಕ್ಷೆ) (KTET Exam 2022) ನಡೆಸಲಾಗುತ್ತದೆ. ಈ ವರ್ಷ ಮಾತ್ರ ಒಮ್ಮೆ ಮಾತ್ರ ನಡೆಯಲಿದ್ದು, ನವೆಂಬರ್ 6 ರಂದು ಈ ಪರೀಕ್ಷೆ ನಡೆಯಲಿದೆ.
ಈ ವಿಷಯವನ್ನು ಶಿಕ್ಷಣ ಸಚಿವ ಬಿ ಸಿ ನಾಗೇಶ್ ತಿಳಿಸಿದ್ದಾರೆ. ತಾವು ಶಿಕ್ಷಣ ಸಚಿವರಾಗಿ ಅಧಿಕಾರ ವಹಿಸಿಕೊಂಡು ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇಲಾಖೆಯ ಪ್ರಗತಿಯ ಮಾಹಿತಿ ಹಂಚಿಕೊಂಡ ಅವರು, “ವರ್ಷಕ್ಕೆ ಎರಡು ಟಿಇಟಿ ಪರೀಕ್ಷೆ ನಡೆಸಬೇಕು ಎನ್ನುವ ಗುರಿ ಇದೆ. ಆದರೆ, ಈ ವರ್ಷ 15 ಸಾವಿರ ಶಿಕ್ಷಕರ ನೇಮಕ ಪರೀಕ್ಷೆ ಪ್ರಕ್ರಿಯೆ ನಡೆಯುತ್ತಿರುವ ಕಾರಣ ಒಂದೇ ಟಿಇಟಿ ನಡೆಯಲಿದೆ. ಇದೇ ನವೆಂಬರ್ 6ರಂದು ಟಿಇಟಿ ಪರೀಕ್ಷೆ ನಡೆಸಲಾಗುತ್ತದೆʼʼ ಎಂದು ವಿವರಿಸಿದ್ದಾರೆ.
ಈ ತಿಂಗಳಲ್ಲೇ ಫಲಿತಾಂಶ
ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸಲು 15 ಸಾವಿರ ಶಿಕ್ಷಕರನ್ನು ನೇಮಕ ಪ್ರಕ್ರಿಯೆ ನಡೆಸಲಾಗುತ್ತಿದೆ. ನೇಮಕ ಪರೀಕ್ಷೆಯ ಫಲಿತಾಂಶವನ್ನು ಆಗಸ್ಟ್ ಅಂತ್ಯದೊಳಗೆ ನೀಡುವ ಗುರಿಯನ್ನು ಹೊಂದಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಈ ನೇಮಕಕ್ಕೆ ಸಂಬಂಧಿಸಿದಂತೆ ಕಳೆದ ಮೇ 21ಮತ್ತು 22 ರಂದು ಪರೀಕ್ಷೆ ನಡೆಸಲಾಗಿತ್ತು.
ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿನ ಮಕ್ಕಳಿಗೆ ಸ್ಪೋಕನ್ ಇಂಗ್ಲಿಷ್ ತರಗತಿಗಳನ್ನು ಆರಂಭಿಸುವ ಉದ್ದೇಶವಿದ್ದು, ಮುಂದಿನ ದಿನಗಳಲ್ಲಿ ಮಾದರಿ ಶಾಲೆಗಳಲ್ಲಿ ಹಾಗೂ ಹೊಸ ನೇಮಕಾತಿಯಿಂದ ಲಭ್ಯವಾಗುವ ಇಂಗ್ಲೀಷ್ ಶಿಕ್ಷಕರ ಹುದ್ದೆಗಳ ಸಂಖ್ಯೆ ಆಧಾರದ ಮೇಲೆ ಹಂತ ಹಂತವಾಗಿ ಸ್ಪೋಕನ್ ಇಂಗ್ಲೀಷ್ ತರಗತಿ ಆರಂಭಿಸಲಾಗುತ್ತದೆ. ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಶಾಲೆಗಳಲ್ಲಿ ನೈತಿಕ ವಿಜ್ಞಾನ ತರಗತಿಗಳನ್ನು ಆರಂಭಿಸುವ ಉದ್ದೇಶವಿದೆ ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ| Teacher Recruitment 2022 : 15 ಸಾವಿರ ಶಿಕ್ಷಕರ ನೇಮಕಾತಿ ಪರೀಕ್ಷೆಯ ಕೀ ಉತ್ತರ ಪ್ರಕಟ