Site icon Vistara News

KTET Exam 2022 | ಶಿಕ್ಷಕರ ಅರ್ಹತಾ ಪರೀಕ್ಷೆ ಕುರಿತು ಗೊಂದಲವೇ? ಈ ಪ್ರಶ್ನೋತ್ತರ ಓದಿ

KTET Exam 2022

ಸಾರ್ವಜನಿಕ ಶಿಕ್ಷಣ ಇಲಾಖೆಯು ‘ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ’ಗೆ (ಟಿಇಟಿ) (KTET Exam 2022 ) ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ. ರಾಜ್ಯದಲ್ಲಿನ ಸರ್ಕಾರಿ ಶಾಲೆಗಳ ಶಿಕ್ಷಕರ ಹುದ್ದೆಗಳಿಗೆ ನಡೆಯುವ ನೇಮಕ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕಾದರೆ ಈ ಅರ್ಹತಾ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರಲೇಬೇಕು.

ಈ ಅರ್ಹತಾ ಪರೀಕ್ಷೆಯ ಕುರಿತ ಹೆಚ್ಚಿನ ಮಾಹಿತಿಯನ್ನು ಇಲ್ಲಿ ಪ್ರಶ್ನೋತ್ತರ ಮಾದರಿಯಲ್ಲಿ ನೀಡಲಾಗಿದೆ;

ಟಿಇಟಿ ಯಲ್ಲಿ ತೇರ್ಗಡೆಯಾದರೆ ನೌಕರಿ ಸಿಗುತ್ತದೆಯೇ?
ಇದು ಶಿಕ್ಷಕರ ಅರ್ಹತಾ ಪರೀಕ್ಷೆಯೇ ಹೊರತು ನೇಮಕಾತಿ ಪರೀಕ್ಷೆಯಲ್ಲ. ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ತೆಗೆದುಕೊಂಡ ಮಾತ್ರಕ್ಕೆ ಅಭ್ಯರ್ಥಿಗಳು ಶಿಕ್ಷಕರ ನೇಮಕಾತಿಗಾಗಿ ಯಾವುದೇ ರೀತಿಯ ಹಕ್ಕನ್ನು ಚಲಾಯಿಸುವಂತಿಲ್ಲ.

ಎಷ್ಟು ವರ್ಷಗಳಿಗೊಮ್ಮೆ ಟಿಇಟಿ ನಡೆಯುತ್ತದೆ?
ಪ್ರತಿ ವರ್ಷ ಟಿಇಟಿ ನಡೆಸಬೇಕೆಂದು ಈ ಹಿಂದೆ ತೀರ್ಮಾನಿಸಲಾಗಿತ್ತು. ಇತ್ತೀಚೆಗೆ ಶಿಕ್ಷಣ ಸಚಿವ ಬಿ ಸಿ ನಾಗೇಶ್‌, “ವರ್ಷಕ್ಕೆ ಎರಡು ಟಿಇಟಿ ಪರೀಕ್ಷೆ ನಡೆಸಬೇಕು ಎನ್ನುವ ಗುರಿ ಇದೆ. ಆದರೆ, ಈ ವರ್ಷ 15 ಸಾವಿರ ಶಿಕ್ಷಕರ ನೇಮಕ ಪರೀಕ್ಷೆ ಪ್ರಕ್ರಿಯೆ ನಡೆಯುತ್ತಿರುವ ಕಾರಣ ಈ ವರ್ಷ ಒಂದೇ ಟಿಇಟಿ ನಡೆಯಲಿದೆ. ಇದೇ ನವೆಂಬರ್ 6ರಂದು ಟಿಇಟಿ ಪರೀಕ್ಷೆ ನಡೆಸಲಾಗುತ್ತದೆʼʼ ಎಂದು ತಿಳಿಸಿದ್ದರು.

ಎಲ್ಲೆಲ್ಲಿ ಈ ಮಾದರಿಯಲ್ಲಿ ಅರ್ಹತಾ ಪರೀಕ್ಷೆ ನಡೆಯುತ್ತಿದೆ?
ದೇಶದ ಬಹುತೇಕ ರಾಜ್ಯದಲ್ಲಿ ಈಗ ಟಿಇಟಿ ನಡೆಯುತ್ತಿದೆ. ರಾಜ್ಯದಲ್ಲಿ 2014ರಿಂದ ಈ ಪರೀಕ್ಷೆ ನಡೆಸಿಕೊಂಡು ಬರಲಾಗಿದೆ. 2017ರಲ್ಲಿ ಈ ಪರೀಕ್ಷೆ ನಡೆಸಲಾಗಿರಲಿಲ್ಲ. ಆ ನಂತರ ಕೊರೊನಾ ಕಾಣಿಸಿಕೊಂಡ ವರ್ಷಗಳಲ್ಲಿ ಈ ಪರೀಕ್ಷೆಯನ್ನು ನಡೆಸಲಾಗಿರಲಿಲ್ಲ.

ಪರೀಕ್ಷೆಯ ವೇಳಾಪಟ್ಟಿ

ಟಿಇಟಿಯ ಪ್ರಮಾಣ ಪತ್ರವನ್ನು ಎಷ್ಟು ವರ್ಷ ಚಾಲ್ತಿಯಲ್ಲಿರುತ್ತದೆ?
ಈ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ನೀಡಲಾಗುವ ಪ್ರಮಾಣ ಪತ್ರವು ಜೀವಿತಾವಧಿಯವರೆಗೆ ಮಾನ್ಯತೆಯನ್ನು
ಹೊಂದಿರುತ್ತದೆ. ಈ ಹಿಂದೆ ಏಳು ವರ್ಷಗಳ ಕಾಲ ಮಾನ್ಯತೆ ಇರಲಿದೆ ಎಂದು ಹೇಳಲಾಗಿತ್ತು. ಆದರೆ ಈಗ ಬದಲಾವಣೆ ಮಾಡಲಾಗಿದೆ. ಅರ್ಹತೆ ಪಡೆದವರು ಯಾವುದೇ ಸಂದರ್ಭದಲ್ಲಿ ನಡೆಯುವ ಶಿಕ್ಷಕರ ನೇಮಕಾತಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಹೈದರಾಬಾದ್-ಕರ್ನಾಟಕ ಪ್ರದೇಶದ ಅಭ್ಯರ್ಥಿಗಳಿಗೆ ಈ ಪರೀಕ್ಷೆಯಲ್ಲಿ ರಿಯಾಯಿತಿ ಏನಾದರೂ ಇರುತ್ತದೆಯೇ?
ಖಂಡಿತವಾಗಿಯೂ ಇಲ್ಲ. ರಾಜ್ಯದ ಎಲ್ಲ ಭಾಗದ ಅಭ್ಯರ್ಥಿ ಗಳಿಗೂ ಒಂದೇ ಮಾನದಂಡವನ್ನು ಅನುಸರಿಸಲಾಗುತ್ತದೆ.

ಈ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ಆನ್‌ಲೈನ್ ನಲ್ಲಿ ಬರೆಯಬಹುದೇ?
ಇಲ್ಲ, ಸದ್ಯಕ್ಕೆ ಈ ಅವಕಾಶ ನೀಡಲಾಗಿಲ್ಲ. ಪರೀಕ್ಷೆಯಲ್ಲಿ ಒಎಂಆರ್ ಶೀಟ್‌ನಲ್ಲಿ ಸರಿಯುತ್ತರವನ್ನು ಗುರುತಿಸಬೇಕು. ಅದನ್ನು ಸ್ಕ್ಯಾನ್ ಮಾಡಿ, ಪಡೆದಿರುವ ಅಂಕವನ್ನು ನಿರ್ಧರಿಸಲಾಗುತ್ತದೆ.

ಟಿಇಟಿಯ ಅರ್ಹತಾ ಪತ್ರ ಎಲ್ಲೆಲ್ಲಿ ಬಳಸಬಹುದು?
ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ಕರ್ನಾಟಕ ರಾಜ್ಯ ಸರಕಾರದ ವತಿಯಿಂದ ನಡೆಸಲ್ಪಡುತ್ತಿರುವುದರಿಂದ ಅರ್ಹತಾ ಪ್ರಮಾಣ ಪತ್ರವು ಅನುದಾನರಹಿತ, ಅನುದಾನಿತ ಹಾಗೂ ಸರಕಾರಿ ಶಾಲೆಗಳಿಗೆ ಅನ್ವಯಿಸುತ್ತದೆ.

ಈ ಪರೀಕ್ಷೆ ನಡೆಸುವವರು ಯಾರು?
ಸಾರ್ವಜನಿಕ ಶಿಕ್ಷಣ ಇಲಾಖೆಯ ಕೇಂದ್ರೀಕೃತ ದಾಖಲಾತಿ ಘಟಕದ ವಿಶೇಷಾಕಾರಿಗಳು ಈ ಪರೀಕ್ಷೆ ನಡೆಸಲಿದ್ದಾರೆ. ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

ಒಬ್ಬರು ಎಷ್ಟು ಬಾರಿ ಟಿಇಟಿ ಬರೆಯಬಹುದು?
ಒಬ್ಬರು ಎಷ್ಟು ಬಾರಿ ಬೇಕಾದರೂ ಈ ಅರ್ಹತಾ ಪರೀಕ್ಷೆ ತೆಗೆದುಕೊಳ್ಳಬಹುದು. ಪರೀಕ್ಷೆಯಲ್ಲಿ ನಿಗದಿತ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಸಹ ಹೆಚ್ಚು ಅಂಕಗಳನ್ನು ಗಳಿಸುವ ಸಲುವಾಗಿ ಪರೀಕ್ಷೆಯನ್ನು ತೆಗೆದುಕೊಳ್ಳುತ್ತಲೇ ಇರಬಹುದು. ಈ ಪರೀಕ್ಷೆ ಬರೆಯಲು ವಯೋಮಿತಿ ನಿಗದಿಪಡಿಸಲಾಗಿಲ್ಲ. ಶೈಕ್ಷಣಿಕ ಅರ್ಹತೆ ಹೊಂದಿರುವ ಯಾವುದೇ ವಯಸ್ಸಿನವರು ಈ ಪರೀಕ್ಷೆ ತೆಗೆದುಕೊಳ್ಳಬಹುದು.

ಯಾವೆಲ್ಲಾ ಭಾಷೆಯಲ್ಲಿ ಪರೀಕ್ಷೆ ನಡೆಯಲಿದೆ?
ಭಾಷಾ ವಿಷಯಗಳ ಹೊರತಾಗಿ ಉಳಿದ ಎಲ್ಲಾ ವಿಷಯಗಳ ಪ್ರಶ್ನೆಗಳನ್ನು ಕನ್ನಡ, ಇಂಗ್ಲಿಷ್, ಉರ್ದು, ತಮಿಳು, ತೆಲುಗು, ಹಿಂದಿ ಮತ್ತು ಮರಾಠಿ ಮಾಧ್ಯಮಗಳಲ್ಲಿ ಮುದ್ರಿಸಲಾಗಿರುತ್ತದೆ.

ಪರೀಕ್ಷೆಯ ಅಂಕಪಟ್ಟಿ ಸಿಗುತ್ತದೆಯೇ?
ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಕನಿಷ್ಠ ಅರ್ಹತಾ ಅಂಕಗಳನ್ನು ಗಳಿಸಿದ ಅಭ್ಯರ್ಥಿಗಳಿಗೆ ಆನ್‌ಲೈನ್‌ನಲ್ಲಿ ಅಂಕಪಟ್ಟಿ ವಿತರಿಸಲಾಗುತ್ತದೆ. ಕೇಂದ್ರೀಕೃತ ದಾಖಲಾತಿ ಘಟಕದಿಂದ ಈ ಸಂಬಂಧ ಯಾವುದೇ ಮುದ್ರಿತ ಅಂಕಪಟ್ಟಿಯನ್ನು ವಿತರಿಸಲಾಗುವುದಿಲ್ಲ. ಅಭ್ಯರ್ಥಿಗಳು ವೆಬ್‌ಸೈಟ್‌ನಲ್ಲಿ ನೀಡಲಾದ ಲಿಂಕ್‌ ಮೂಲಕ ಸುರಕ್ಷತಾ ಕೋಡ್ ಹೊಂದಿರುವ ಪ್ರಮಾಣ ಪತ್ರ ಪ್ರತಿಯನ್ನು ಪಡೆದುಕೊಳ್ಳಬಹುದಾಗಿದೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಅರ್ಜಿಯಲ್ಲಿರುವಂತೆ
ನೋಂದಣಿ/ಅರ್ಜಿ ಸಂಖ್ಯೆ ಮತ್ತು ಅಭ್ಯರ್ಥಿಯ ಜನ್ಮದಿನಾಂಕ (ಆನ್‌ಲೈನ್ ಅರ್ಜಿಯಲ್ಲಿರುವಂತೆ) ನಮೂದಿಸಿ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬಹುದು.

ಪ್ರಮಾಣ ಪತ್ರದಲ್ಲಿ ಏನಿರುತ್ತದೆ?
ಶಿಕ್ಷಕರ ಅರ್ಹತಾ ಪರೀಕ್ಷೆ ನೆಡೆಸಿದ ಆಯಾಯ ರಾಜ್ಯ ಸರ್ಕಾರ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದ ಎಲ್ಲಾ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ನೀಡುತ್ತದೆ. ಪ್ರಮಾಣ ಪತ್ರವು ಅಭ್ಯರ್ಥಿಯ ಹೆಸರು ಮತ್ತು ವಿಳಾಸ, ಹುಟ್ಟಿದ ದಿನಾಂಕ, ನೋಂದಣಿ ಸಂಖ್ಯೆ, ಪ್ರಮಾಣಪತ್ರ ನೀಡಿದ ವರ್ಷ /ತಿಂಗಳು, ಪ್ರತಿಯೊಂದು ಪ್ರಶ್ನೆಪತ್ರಿಕೆಯಲ್ಲಿ ಪಡೆದಿರುವ ಅಂಕ, ಯಾವ ಪ್ರಶ್ನೆ ಪತ್ರಿಕೆಯಲ್ಲಿ ಅರ್ಹತೆ ಪಡೆದಿದ್ದಾರೆ ಎಂಬ ವಿವರವನ್ನು ಒಳಗೊಂಡಿರುತ್ತದೆ.

ಅಭ್ಯರ್ಥಿಗಳು ಫಲಿತಾಂಶ ಪ್ರಕಟವಾದ ಎರಡು ವಾರಗಳ ನಂತರ ಇಲಾಖಾ ವೆಬ್‌ಸೈಟ್‌ನಲ್ಲಿ ನೀಡಲಾಗುವ ಲಿಂಕ್ ಮೂಲಕ ತಮ್ಮ ಪ್ರಮಾಣ ಪತ್ರವನ್ನು ಬೇಕಾದಷ್ಟು ಸಂಖ್ಯೆಯಲ್ಲಿ ಪಡೆದುಕೊಳ್ಳಬಹುದಾಗಿರುತ್ತದೆ. ಪ್ರಮಾಣ ಪತ್ರದಲ್ಲಿ ಮುದ್ರಿತವಾಗಿರುವ ಕ್ಯೂಆರ್‌ಕೋಡ್‌ ಅನ್ನು ಸ್ಕ್ಯಾನ್‌ ಮಾಡುವುದರ ಮೂಲಕ ಪ್ರಮಾಣ ಪತ್ರದ ನೈಜತೆಯನ್ನು ದೃಢೀಕರಿಸಿಕೊಳ್ಳಬಹುದಾಗಿದೆ.
ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾದ, ಪ್ರಮಾಣ ಪತ್ರ ಪಡೆದ ಅಭ್ಯರ್ಥಿಯು ನೌಕರಿಯನ್ನು ಹಕ್ಕನ್ನಾಗಿ ಪರಿಗಣಿಸುವಂತಿಲ್ಲ.

ಅರ್ಜಿ ಸಲ್ಲಿಸಲು ಲಿಂಕ್‌ ಇಲ್ಲಿದೆ | https://sts.karnataka.gov.in/TET/

ಅರ್ಜಿ ಸಲ್ಲಿಸುವಾಗ ತಪ್ಪಾದರೆ ಏನಾಗುತ್ತದೆ?
ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಅಭ್ಯರ್ಥಿಯು ಅರ್ಜಿಯಲ್ಲಿ ನಮೂದಿಸುವ ಮೀಸಲಾತಿ, ಜನ್ಮ ದಿನಾಂಕ, ವಿದ್ಯಾರ್ಹತೆ ಹಾಗೂ ವಯೋಮಿತಿ ಸಡಿಲಿಕೆ ಇತ್ಯಾದಿಗಳಿಗೆ ಸಲ್ಲಿಸಿರುವ ಸಂಬಂಧಿತ ವಿವರಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಈ ಮಾಹಿತಿ ಆಧಾರದ ಮೇಲೆ ಅಭ್ಯರ್ಥಿಗೆ ಅರ್ಹತಾ ಪರೀಕ್ಷೆ ಬರೆಯಲು ಪ್ರವೇಶ ಪತ್ರಗಳನ್ನು ನೀಡಲಾಗುತ್ತದೆ. ಆದ್ದರಿಂದ ನಿಗದಿಪಡಿಸಿರುವ ವಿದ್ಯಾರ್ಹತೆ, ನಿಗದಿಪಡಿಸಲಾದ ಶೈಕ್ಷಣಿಕ ಅರ್ಹತೆಯ ಅಂಕಗಳ ಮಾಹಿತಿ, ಮೀಸಲಾತಿ, ಜನ್ಮದಿನಾಂಕ ಇತ್ಯಾದಿಗಳಿಗೆ ಅನುಗುಣವಾಗಿ ಅರ್ಜಿಯಲ್ಲಿ ಸರಿಯಾದ ಮಾಹಿತಿ ನೀಡುವುದು ಅಭ್ಯರ್ಥಿಗಳ ಜವಾಬ್ದಾರಿಯಾಗಿರುತ್ತದೆ. ಪೂರ್ಣ ಮಾಹಿತಿ ನೀಡದ ಅಥವಾ ತಪ್ಪು ಮಾಹಿತಿ ನೀಡಿದ ಸಂದರ್ಭಗಳಲ್ಲಿ ಮುಂದಿನ ಆಗು ಹೋಗುಗಳಿಗೆ ಅಭ್ಯರ್ಥಿಗಳೇ ಜವಾಬ್ದಾರರಾಗಿರುತ್ತಾರೆ.

ಇದನ್ನೂ ಓದಿ| KTET Exam 2022 | ಈ ವರ್ಷ ನವೆಂಬರ್‌ 6 ರಂದು ನಡೆಯಲಿದೆ ಶಿಕ್ಷಕರ ಅರ್ಹತಾ ಪರೀಕ್ಷೆ

Exit mobile version