Site icon Vistara News

KTET Exam 2022 | ಟಿಇಟಿ ಫಲಿತಾಂಶ ಪ್ರಕಟ; ಶಿಕ್ಷಕರ ಹುದ್ದೆಗೆ ಅರ್ಹರಾದ 61,927 ಅಭ್ಯರ್ಥಿಗಳು

KTET Exam 2022

ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆಯು ‘ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ’ಯ (ಟಿಇಟಿ) (KTET Exam 2022) ಫಲಿತಾಂಶವನ್ನು ಪ್ರಕಟಿಸಿದೆ. ಒಟ್ಟು 61,927 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ.

ಪತ್ರಿಕೆ-1ಕ್ಕೆ 140,790 ಅಭ್ಯರ್ಥಿಗಳು ಹಾಜರಾಗಿದ್ದು, 20,070 ಅಭ್ಯರ್ಥಿಗಳು ಅರ್ಹರಾಗಿದ್ದಾರೆ. ಪತ್ರಿಕೆ-2ಕ್ಕೆ 1,92,066 ಅಭ್ಯರ್ಥಿಗಳು ಹಾಜರಾಗಿದ್ದು, 41,857 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ಪತ್ರಿಕೆ-1 ಮತ್ತು ಪತ್ರಿಕೆ-2ರಲ್ಲಿ ಪರೀಕ್ಷೆಗೆ ಹಾಜರಾದ ಒಟ್ಟು 3,32,856 ಅಭ್ಯರ್ಥಿಗಳಲ್ಲಿ 61,927 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ ಎಂದು ಇಲಾಖೆ ಪ್ರಕಟಿಸಿದೆ.

ಫಲಿತಾಂಶ ನೋಡಲು ಇಲ್ಲಿ ಕ್ಲಿಕ್‌ ಮಾಡಿ

ನವೆಂಬರ್‌ 06 ರಂದು ಈ ಅರ್ಹತಾ ಪರೀಕ್ಷೆ ನಡೆಸಲಾಗಿತ್ತು. ನವೆಂಬರ್‌ 09 ರಂದು ಕೀ-ಉತ್ತರಗಳನ್ನು ಪ್ರಕಟಿಸಲಾಗಿತ್ತು. ಅಭ್ಯರ್ಥಿಗಳಿಗೆ ಆನ್‌ಲೈನ್‌ ಮೂಲಕ ಆಕ್ಷೇಪಣೆಗಳನ್ನು ಸಲ್ಲಿಸಲು ನವೆಂಬರ್‌ 10 ರವರೆಗೆ ಕಾಲಾವಕಾಶ ನೀಡಲಾಗಿತ್ತು. ಒಟ್ಟು 1,332 ಆಕ್ಷೇಪಣೆ ಸಲ್ಲಿಸಲಾಗಿದ್ದು ಇವುಗಳನ್ನು ಪರಿಶೀಲಿಸಿ ನವೆಂಬರ್‌ 25 ರಂದು ಅಂತಿಮ ಕೀ-ಉತ್ತರಗಳನ್ನು ಪ್ರಕಟಿಸಲಾಗಿತ್ತು.

ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಸಂಬಂಧಪಟ್ಟ ಪತ್ರಿಕೆಗಳಲ್ಲಿ ಶೇ.60 ರಷ್ಟು ಅರ್ಹತಾ ಅಂಕಗಳು ಹಾಗೂ ಪ.ಜಾತಿ. ಪ.ಪಂಗಡ, ಪ್ರವರ್ಗ-1 ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ ಶೇ.55 ರಷ್ಟು ಅರ್ಹತಾ ಅಂಕಗಳನ್ನು ಫಲಿತಾಂಶಕ್ಕೆ ಪರಿಗಣಿಸಲಾಗಿದೆ.

ಆನ್‌ಲೈನ್‌ನಲ್ಲಿ ಪ್ರಮಾಣ ಪತ್ರ
ಅರ್ಹತಾ ಅಂಕಗಳನ್ನು ಗಳಿಸಿದ ಅಭ್ಯರ್ಥಿಗಳಿಗೆ QR Code ದತ್ತಾಂಶವನ್ನು ಹೊಂದಿರುವ ಗಣಕೀಕೃತ ಅಂಕಪಟ್ಟಿ ವಿತರಿಸಲಾಗುತ್ತದೆ. ಮುದ್ರಿತ ಅಂಕಪಟ್ಟಿ ವಿತರಿಸಲಾಗುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಅಭ್ಯರ್ಥಿಗಳು ವೆಬ್‌ಸೈಟ್‌ನಲ್ಲಿ ನೀಡಲಾದ ಲಿಂಕ್‌ ಮೂಲಕ ಸುರಕ್ಷತಾ ಕೋಡ್‌ (QR Code) ಹೊಂದಿರುವ ಗಣಕೀಕೃತ ಪ್ರಮಾಣಪತ್ರವನ್ನು ಪಡೆದುಕೊಳ್ಳಬಹುದಾಗಿದೆ.

ಅರ್ಜಿಸಂಖ್ಯೆ ಮತ್ತು ಅಭ್ಯರ್ಥಿಯ ಜನ್ಮದಿನಾಂಕ (ಆನ್‌ಲೈನ್‌ ಅರ್ಜಿಯಲ್ಲಿರುವಂತೆ) ನಮೂದಿಸಿ, ಗಣಕೀಕೃತ ಪ್ರಮಾಣಪತ್ರವನ್ನು ಪಡೆದುಕೊಳ್ಳಬಹುದು. ಈ ಪ್ರಮಾಣ ಪತ್ರವು ಜೀವಿತಾವಧಿಯವರೆಗೆ ಮಾನ್ಯತೆ ಹೊಂದಿರುತ್ತದೆ.

ಈ ಪ್ರಮಾಣ ಪತ್ರವು ಸೀಮಿತ ದಿನಗಳವರೆಗೆ ಮಾತ್ರ ವೆಬ್‌ಸೈಟ್‌ನಲ್ಲಿ ಲಭ್ಯವಿರಲಿದ್ದು, ಅಭ್ಯರ್ಥಿಗಳು ಸಾಕಷ್ಟು. ಸಂಖ್ಯೆಯ ಪ್ರತಿಗಳನ್ನು ಡೌನ್‌ಲೋಡ್‌ ಮಾಡಿಕೊಂಡು ತಮ್ಮಲ್ಲಿ ಇಟ್ಟುಕೊಳ್ಳಬಹುದು. ಈ ಸಂಬಂಧ ಕೇಂದ್ರೀಕೃತ ದಾಖಲಾತಿ ಘಟಕವನ್ನು ಪದೇ ಪದೇ ಸಂಪರ್ಕಿಸುವ ಅಗತ್ಯವಿರುವುದಿಲ್ಲ ಎಂದು ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌ ವಿಳಾಸ: http://www.schooleducation.kar.nic.in

ಇದನ್ನೂ ಓದಿ| Teacher Recruitment 2022 | 15 ಸಾವಿರ ಶಿಕ್ಷಕರ ಹುದ್ದೆಗಳಿಗೆ ನೇಮಕ; ತಡೆಯಾಜ್ಞೆ ಪೂರ್ಣ 1:1ಆಯ್ಕೆ ಪಟ್ಟಿಗಲ್ಲ

Exit mobile version