ಬೆಂಗಳೂರು: ಕೆಪಿಟಿಸಿಎಲ್‌ನ 1,550 ಹೊಸ ಹುದ್ದೆಗಳಿಗೆ ಜುಲೈ ತಿಂಗಳಿನಲ್ಲಿ ನೇಮಕ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ಅತ್ಯಂತ ಪಾರದರ್ಶಕವಾಗಿ ನೇಮಕಾತಿ ನಡೆಸಲಾಗುತ್ತದೆ. ಯಾವುದೇ ಕಾರಣಕ್ಕೂ ಮಧ್ಯವರ್ತಿಗಳ ಹೇಳಿಕೆಗೆ ಕಿವಿಗೊಡಬೇಡಿ ಎಂದು ಉದ್ಯೋಗಾಕಾಂಕ್ಷಿಗಳಿಗೆ ಇಂಧನ ಹಾಗೂ ಕನ್ನಡ ಸಂಸ್ಕ್ರತಿ ಸಚಿವ ವಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.
ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಕೆಪಿಟಿಸಿಎಲ್ ಹಾಗೂ ವಿವಿಧ ಎಸ್ಕಾಂ ವ್ಯಾಪ್ತಿಯಲ್ಲಿ ಕಿರಿಯ ಪವರ್ ಮ್ಯಾನ್ ಹುದ್ದೆಗಳಿಗೆ ಆಯ್ಕೆಯಾದವರಿಗೆ ನೇಮಕ ಆದೇಶ ನೀಡಿ ಮಾತನಾಡಿದ ಅವರು, ಇಂಧನ ಇಲಾಖೆಯಲ್ಲಿ ನಡೆಯುವ ಯಾವುದೇ ನೇಮಕಗಳು ಪ್ರಭಾವ, ಒತ್ತಡಕ್ಕೆ ಮಣಿಯದೇ ಪಾರದರ್ಶಕವಾಗಿ ನಡೆಸುತ್ತೇವೆ. ಯಾವುದೇ ಕಾರಣಕ್ಕೂ ಮಧ್ಯವರ್ತಿಗಳ ಮಾತಿಗೆ ಕಿವಿಕೊಡಬೇಡಿ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ | ʼನಾನೂ ತಿನ್ನುವೆ, ನಿಮಗೂ ತಿನ್ನಿಸುವೆʼ ಎನ್ನುವ ರಾಜ್ಯ ಸರ್ಕಾರ: ಪ್ರಿಯಾಂಕ್ ಖರ್ಗೆ ಆರೋಪ
ಕೆಪಿಟಿಸಿಎಎಲ್‌ನಿಂದ 1,550 ಸಿಬ್ಬಂದಿ ನೇಮಕಕ್ಕೆ ಪ್ರಕ್ರಿಯೆ ಆರಂಭವಾಗಲಿದೆ. ಸರ್ಕಾರಿ ನೌಕರಿ ಪಡೆಯುವುದು ಎಷ್ಟು ಕಷ್ಟ ಎಂಬುವುದಕ್ಕೆ ಸಲ್ಲಿಕೆಯಾದ ಅರ್ಜಿಗಳ ಸಂಖ್ಯೆಯೇ ಸಾಕ್ಷಿ. ಸುಮಾರು 3.5 ಲಕ್ಷ ಜನರು ಅರ್ಜಿ ಸಲ್ಲಿಸಿದ್ದು, ಜುಲೈ 23 ಮತ್ತು 24 ರಿಂದ ಪ್ರಕ್ರಿಯೆ ಆರಂಭವಾಗುತ್ತದೆ. ಆದಷ್ಟು ಬೇಗ ಪೂರ್ಣಗೊಳಿಸುತ್ತೇವೆ ಎಂದು ಹೇಳಿದರು.
ಈ ಸಭಾಂಗಣದಲ್ಲಿ ಸೇರಿರುವ ಎಲ್ಲ ಯುವಕರು ಇಲ್ಲಿಂದ ಹೊರ ಹೋಗುವಾಗ ನಮ್ಮ ಕುಟುಂಬದ ಭಾಗವಾಗಿರುತ್ತೀರಿ. ಹೀಗಾಗಿ ಇಲಾಖೆಯ ಕೆಲಸವನ್ನು ಅತ್ಯಂತ ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ನಿರ್ವಹಿಸಬೇಕು. ನೇಮಕವಾದ ಎರಡೇ ವರ್ಷಕ್ಕೆ ತಂದೆ-ತಾಯಿಗೆ ಹುಶಾರಿಲ್ಲ ಎಂಬ ಸಬೂಬು ನೀಡಿ ವರ್ಗಾವಣೆ ಬಯಸಬೇಡಿ. ಇಡೀ ರಾಜ್ಯವೇ ಒಂದು ಎಂಬ ಭಾವನೆಯಿಂದ ಕೆಲಸ ಮಾಡಿ ಎಂದು ಕಿವಿ ಮಾತು ಹೇಳಿದರು.
ನಾನು ಇಂಧನ ಸಚಿವನಾಗಿ ಅಧಿಕಾರ ವಹಿಸಿಕೊಂಡ ನಂತರ ಹಲವಾರು ಬದಲಾವಣೆ ತರುವ ಪ್ರಯತ್ನ ನಡೆಸಿದ್ದೇನೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತಿದ್ದೇವೆ. ಗ್ರಾಮ ವಿದ್ಯುತ್ ಪ್ರತಿನಿಧಿಗಳ ಸಮಸ್ಯೆ ಬಗೆಹರಿಸುವುದಕ್ಕೂ ಇಲಾಖೆ ಬದ್ಧವಾಗಿದ್ದು, ಇನ್ನೆರಡು ದಿನಗಳಲ್ಲಿ ಬೆಸ್ಕಾಂ ಎಂಡಿ ನೇತೃತ್ವದ ಸಮಿತಿ ವರದಿ ನೀಡುತ್ತದೆ. ಅದನ್ನು ಆಧರಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ವಿವರಿಸಿದರು.
ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಮಾತನಾಡಿ, ಎಲ್ಲ ಕಡೆ ಭ್ರಷ್ಟಾಚಾರದ ಸುದ್ದಿ ಹೆಚ್ಚಿರುವಾಗ ಸಚಿವ ಸುನೀಲ್ ಕುಮಾರ್ ನೇತೃತ್ವದಲ್ಲಿ ಭ್ರಷ್ಟಾಚಾರ ರಹಿತವಾಗಿ 1375 ಜನರಿಗೆ ನೇಮಕ ಆದೇಶ ನೀಡಿರುವುದು ಸಣ್ಣ ಸಾಧನೆಯಲ್ಲ. ನಿಜಕ್ಕೂ ಇದೊಂದು ಹೃದಯಸ್ಪರ್ಶಿ ಕಾರ್ಯಕ್ರಮ ಎಂದು ಶ್ಲಾಘಿಸಿದರು.
ಸಿಎಂ ಬಸವರಾಜ್ ಬೊಮ್ಮಾಯಿ ಅವರು ಕಿರಿಯರಾದ ಸುನೀಲ್ ಕುಮಾರ್ ಅವರ ಮೇಲೆ ನಂಬಿಕೆ ಇಟ್ಟು ಇಂಧನ ಇಲಾಖೆಯಂತಹ ಮಹತ್ವದ ಖಾತೆ ನೀಡಿದ್ದಾರೆ. ಅದನ್ನು ಅವರ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ರಾಜ್ಯದಲ್ಲಿ ಈಗ ವಿದ್ಯುತ್ ಕೊರತೆ ಇಲ್ಲ, ಹಿಂದೆ ಇಂಧನ ಇಲಾಖೆ ನಿಭಾಯಿಸುವವರ ಮೇಲೆ ಕಲ್ಲಿದ್ದಲಿನ ಮಸಿ ಕಾಣುತ್ತಿತ್ತು. ಆದರೆ ಕೆಂಪಾಗಿರುವ ಸುನೀಲ್ ಕುಮಾರ್ ಯಾವುದೇ ಕಪ್ಪು ಚುಕ್ಕೆ ಇಲ್ಲದೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ಪಿಎಸ್ಐ ನೇಮಕ ಸೇರಿ ವಿವಿಧ ನೇಮಕ ಸಂದರ್ಭದಲ್ಲಿ ನಡೆದ ಘಟನೆಗಳನ್ನು ನಾವು ನೋಡಿದ್ದೇವೆ. ಆದರೆ ಸಚಿವ ಸುನೀಲ್ ಕುಮಾರ್ ಸಾರಥ್ಯದಲ್ಲಿ ಇಂತಹ ಯಾವುದೇ ಅಪವಾದಗಳಿಗೆ ಅವಕಾಶ ನೀಡದೇ ಪಾರದರ್ಶಕವಾಗಿ ನೇಮಕ ನಡೆಸಿದ್ದಾರೆ ಎಂದು ವಸತಿ ಸಚಿವ ವಿ.ಸೋಮಣ್ಣ ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಕೆಪಿಟಿಸಿಎಲ್ ಎಂಡಿ ಡಾ.ಎನ್. ಮಂಜುಳಾ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ | GST rate hike| ಜಿಎಸ್‌ಟಿ ನಷ್ಟಪರಿಹಾರ ವಿತರಣೆ ತೀರ್ಮಾನ ಇನ್ನೂ ಆಗಿಲ್ಲ ಎಂದ ವಿತ್ತ ಸಚಿವೆ ನಿರ್ಮಲಾ