Site icon Vistara News

Guest Teachers Appointment : ಪ್ರಾಥಮಿಕ ಶಾಲೆಗಳ 35000 ಅತಿಥಿ ಶಿಕ್ಷಕರ ನೇಮಕಾತಿಗೆ ಆಹ್ವಾನ

Guest Teachers Appointment teacher teaches to students in class room

ಬೆಂಗಳೂರು: 2023-2024ನೇ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ (Government Primary School) ವರ್ಗಾವಣೆ ನಂತರ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ತಾತ್ಕಾಲಿಕವಾಗಿ 35000 ಅತಿಥಿ ಶಿಕ್ಷಕರ ನೇಮಕಾತಿಗೆ (Guest Teachers Appointment) ಅರ್ಜಿ ಆಹ್ವಾನಿಸಲಾಗಿದ್ದು, ಒಟ್ಟು 2 ಹಂತಗಳಲ್ಲಿ ನೇಮಕ ಮಾಡಿಕೊಳ್ಳಲು ಆದೇಶಿಸಲಾಗಿದೆ.

2023-2024ನೇ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ವರ್ಗಾವಣೆ ಆದ ಬಳಿಕ ಹಲವು ಕಡೆ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಇದು ಶಿಕ್ಷಕರ ಕೊರತೆಗೆ ಕಾರಣವಾಗುವುದಲ್ಲದೆ, ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಹಿನ್ನಡೆಯಾಗಲಿದೆ. ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಮೊದಲ ಹಂತದಲ್ಲಿ ಒಟ್ಟು 27000 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ಮುಂದಾಗಿದೆ.

ಈ ಅತಿಥಿ ಶಿಕ್ಷಕರ ನೇಮಕಾತಿ ಅವಧಿಯು ನೇರ ನೇಮಕಾತಿ/ವರ್ಗಾವಣೆ ಮೂಲಕ ಹುದ್ದೆ ಭರ್ತಿ ಮಾಡುವವರೆಗೆ ಅಥವಾ ಪ್ರಸಕ್ತ ಶೈಕ್ಷಣಿಕ ಸಾಲಿನ ಅಂತ್ಯದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಚಾಲ್ತಿಯಲ್ಲಿರಲಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

2ನೇ ಹಂತದಲ್ಲಿ 8 ಸಾವಿರ ಅತಿಥಿ ಶಿಕ್ಷಕರ ನೇಮಕ

2022-23ನೇ ಸಾಲಿನಲ್ಲಿ ಶಿಕ್ಷಕರ ಕೌನ್ಸೆಲಿಂಗ್ ವರ್ಗಾವಣೆಯಿಂದ (Transfer of Teacher Counselling) ಕೆಲವೊಂದು ಜಿಲ್ಲೆಗಳಲ್ಲಿ ಶಿಕ್ಷಕರ ಕೊರತೆ ಉಂಟಾಗಿದೆ. ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳ ಖಾಲಿ ಹುದ್ದೆಗಳಿಗೆ ಸಂಬಂಧಪಟ್ಟಂತೆ 2ನೇ ಹಂತದಲ್ಲಿ ಒಟ್ಟು 8000 ಅತಿಥಿ ಶಿಕ್ಷಕರನ್ನು ತಾತ್ಕಾಲಿಕವಾಗಿ ನೇಮಕಾತಿ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ. ಈ ನೇಮಕಾತಿಗಳಿಗೆ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ.

ಅತಿಥಿ ಶಿಕ್ಷಕರ ತಾತ್ಕಾಲಿಕ ನೇಮಕಾತಿ ಷರತ್ತುಗಳೇನು? ಯಾವ ಶಾಲೆಗಳ ಖಾಲಿ ಹುದ್ದೆಗಳಿಗೆ ಆದ್ಯತೆ?

  1. ತಾಲೂಕಿನಲ್ಲಿನ ಅತಿ ಹೆಚ್ಚು ವಿದ್ಯಾರ್ಥಿಗಳ ದಾಖಲಾತಿ (ಪಿಟಿಆರ್) ಹೊಂದಿರುವ ಶಾಲೆಗಳಲ್ಲಿನ ಖಾಲಿ ಹುದ್ದೆಗಳು
  2. ತಾಲೂಕಿನಲ್ಲಿನ ಏಕೋಪಾಧ್ಯಾಯ ಶಾಲೆಗಳು
  3. ದ್ವಿಭಾಷಾ ಮಾಧ್ಯಮ (bilingual) ಶಾಲೆಗಳು (ಆಂಗ್ಲ ಮಾಧ್ಯಮ ಶಾಲೆಗಳು)
  4. ಆದರ್ಶ ಶಾಲೆಗಳು
  5. ಚುನಾಯಿತ ಪ್ರತಿನಿಧಿ ಅಥವಾ ಗ್ರಾಮ ಪಂಚಾಯಿತಿ ಸದಸ್ಯರನ್ನು ಅತಿಥಿ ಶಿಕ್ಷಕರನ್ನಾಗಿ ನೇಮಕ ಮಾಡಿಕೊಳ್ಳಲು ಅವಕಾಶ ಇರುವುದಿಲ್ಲ.
  6. ಅತಿ ಕಡಿಮೆ ದಾಖಲಾತಿ ಹೊಂದಿರುವ ಶಾಲೆಗಳ ಖಾಲಿ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡುವಂತಿಲ್ಲ.
  7. ತಾಲೂಕುವಾರು ಹುದ್ದೆಗಳಿಗೆ ಎದುರಾಗಿ ನೇಮಕಾತಿಗಾಗಿ ಮಂಜೂರಾತಿ ನೀಡಿರುವ ಅತಿಥಿ ಶಿಕ್ಷಕರನ್ನು ಸಂಬಂಧಿಸಿದ ತಾಲೂಕಿನ ಒಳಗೆ ಕಡ್ಡಾಯವಾಗಿ ಆದ್ಯತೆ ಮೇರೆಗೆ ಬಳಸಿಕೊಳ್ಳುವುದು.
  8. ಪ್ರಥಮ ಹಂತದಲ್ಲಿ ತಾಲೂಕಿನ ಒಳಗಿನ ಖಾಲಿ ಹುದ್ದೆಗಳಿಗೆ ನೇಮಕ ಮಾಡಿಕೊಂಡಿದ್ದ ಅತಿಥಿ ಶಿಕ್ಷಕರ ಹುದ್ದೆಗಳಿಗೆ ಪ್ರಸ್ತುತ ಶಿಕ್ಷಕರ ವರ್ಗಾವಣೆಯಿಂದ ಭರ್ತಿಯಾಗಿದ್ದಲ್ಲಿ ತಕ್ಷಣ ಅತಿಥಿ ಶಿಕ್ಷಕರನ್ನು ಕರ್ತವ್ಯದಿಂದ ಬಿಡುಗಡೆ ಮಾಡತಕ್ಕದ್ದು.
  9. ತಾಲೂಕಿನ ಒಳಗೆ ಹೆಚ್ಚುವರಿಯಾಗುವ ಅತಿಥಿ ಶಿಕ್ಷಕರ ಹುದ್ದೆಗಳನ್ನು ಅನುಬಂಧದಲ್ಲಿ ಕಾಲಮ್ 8ರಲ್ಲಿ ಹಂಚಿಕೆ ಮಾಡಿ ಮಂಜೂರಾತಿ ನೀಡಿರುವಂತೆ ಕೊರತೆ ಇರುವ ತಾಲೂಕುಗಳಿಗೆ ಮರು ಹೊಂದಾಣಿಕೆ ಮಾಡತಕ್ಕದ್ದು.
  10. ಈಗಾಗಲೇ ಕೆಲವು ಜಿಲ್ಲೆಗಳ ಉಪನಿರ್ದೇಶಕರು ಹೆಚ್ಚುವರಿ ಅತಿಥಿ ಶಿಕ್ಷಕರ ಹುದ್ದೆಗಳನ್ನು ಜಿಲ್ಲೆಗೆ ಅವಶ್ಯಕತೆ ಇಲ್ಲವೆಂದು ಈ ಕಚೇರಿಗೆ ಅದ್ಯರ್ಪಿಸಿರುವ ಹುದ್ದೆಗಳನ್ನು ಯಾವುದೇ ಕಾರಣಕ್ಕೂ ಪುನಃ ಮರು ಹೊಂದಾಣಿಕೆ ಮಾಡಿಕೊಳ್ಳತಕ್ಕದ್ದಲ್ಲ. ಕಾರಣ ಸದರಿ ಹುದ್ದೆಗಳನ್ನು ಬೇರೆ ಅಗತ್ಯವಿರುವ ಜಿಲ್ಲೆಗಳಿಗೆ ಹಂಚಿಕೆ ಮಾಡಲಾಗಿದೆ.

ಈ ಮೇಲ್ಕಂಡಂತೆ ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ ವರ್ಗಾವಣೆಯಿಂದ ಖಾಲಿಯಾಗಿರುವ ಸಹ ಶಿಕ್ಷಕರ ಒಟ್ಟು 43245 ಖಾಲಿ ಹುದ್ದೆಗಳಿಗೆ ಪ್ರತಿಯಾಗಿ ಅತಿಥಿ ಶಿಕ್ಷಕರನ್ನು ಎರಡು ಹಂತಗಳಲ್ಲಿ ನೇಮಕ ಮಾಡಿಕೊಳ್ಳಲಾಗುವುದು. ಮೊದಲ ಹಂತದಲ್ಲಿ 27000 ಹಾಗೂ ಎರಡನೇ ಹಂತದಲ್ಲಿ 8000 ಹುದ್ದೆಗಳಂತೆ ಒಟ್ಟು 35000 ತಾತ್ಕಾಲಿಕ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲು ಮಂಜೂರಾತಿ ನೀಡಲಾಗಿದೆ.

ಈ ಷರತ್ತುಗಳನ್ನೊಳಗೊಂಡು ಖಾಲಿ ಇರುವ ಸಹ ಶಿಕ್ಷಕರ ಹುದ್ದೆಗಳಿಗೆ ಮಾತ್ರ ಒಂದು ವಾರದೊಳಗಾಗಿ ನೇಮಕಾತಿ ಮಾಡಿಕೊಂಡು, ವರ್ಗಾಯಿತ ಶಿಕ್ಷಕರನ್ನು ಬಿಡುಗಡೆಗೊಳಿಸಬೇಕು. ಯಾವುದೇ ಗೊಂದಲ/ದೂರುಗಳಿಗೆ ಅವಕಾಶ ನೀಡದಂತೆ ಎಚ್ಚರಿಕೆಯಿಂದ ನೇಮಕ ಮಾಡಿಕೊಂಡು ಶೈಕ್ಷಣಿಕವಾಗಿ ಹಿನ್ನಡೆಯಾಗದಂತೆ ಕ್ರಮವಹಿಸಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ:Guest Lecturers Appointment : ಅತಿಥಿ ಉಪನ್ಯಾಸಕರ ನೇಮಕಕ್ಕೆ ಗೆಜೆಟ್‌ ಅಧಿಸೂಚನೆ; ಆ. 28ರಿಂದ ಅರ್ಜಿ ಆಹ್ವಾನ

ರಾಜ್ಯದ ಎಲ್ಲೆಲ್ಲಿ, ಎಷ್ಟು ಅತಿಥಿ ಹುದ್ದೆಗಳ ನೇಮಕ ನಡೆಯಲಿದೆ ಎಂಬ ಬಗ್ಗೆ ಈ ಕೆಳಗಿನ ಪಿಡಿಎಫ್‌ ಡಾಕ್ಯುಮೆಂಟ್‌ನಲ್ಲಿ ಮಾಹಿತಿಯನ್ನು ನೀಡಲಾಗಿದ್ದು, ಡೌನ್ಲೋಡ್‌ ಆಯ್ಕೆ ಮೇಲೆ ಕ್ಲಿಕ್‌ ಮಾಡಿ.

ಉದ್ಯೋಗಕ್ಕೆ ಸಂಬಂಧಪಟ್ಟ ಇನ್ನಷ್ಟು ಸುದ್ದಿಗಳಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Exit mobile version