ಬೆಂಗಳೂರು: ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ನೇಮಕಕ್ಕೆ (PU Lecturer Recruitment) ಸಂಬಂಧಿಸಿದಂತೆ ಇತ್ತೀಚೆಗೆ ಪ್ರಕಟಿಸಿದ್ದ ಹೆಚ್ಚುವರಿ ಆಯ್ಕೆ ಪಟ್ಟಿಯನ್ನು ಸರ್ಕಾರ ಹಿಂದಕ್ಕೆ ಪಡೆದಿದೆ.
ಪಿಯು ಉಪನ್ಯಾಸಕರ ಹುದ್ದೆಗಳಿಗೆ ನೇಮಕಾತಿಯ ಹೆಚ್ಚುವರಿ ಪಟ್ಟಿಯಲ್ಲಿನ ಆಯ್ಕೆಯ ಕುರಿತು ಕೆಲವು ಅಭ್ಯರ್ಥಿಗಳು ಆಕ್ಷೇಪ ವ್ಯಕ್ತಪಡಿಸಿ, ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯು ಆಗಸ್ಟ್ 22ರಂದು ಪ್ರಕಟಿಸಿರುವ ಪಟ್ಟಿಯನ್ನು ಹಿಂಪಡೆದಿದ್ದು, ಪರಿಷ್ಕೃತ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಟ್ವೀಟ್ ಮಾಡಿದ್ದಾರೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶೇ. 10ರ ಹೆಚ್ಚುವರಿ ಪಟ್ಟಿಯನ್ನು ಒದಗಿಸಿತ್ತು. ಪಟ್ಟಿಯಲ್ಲಿ ಉಲ್ಲೇಖಿಸಲಾದ ಮೀಸಲಾತಿ ಗುಂಪನ್ನು ಯಥಾವತ್ತಾಗಿ ಪರಿಗಣಿಸಲಾಗಿದ್ದು, ಇದು ನ್ಯೂನ್ಯತೆಗಳಿಗೆ ಕಾರಣವಾಗಿತ್ತು. ಇದನ್ನು ಸರಿಪಡಿಸಲು ಈಗಾಗಲೇ ಪ್ರಕಟವಾಗಿರುವ ಪಟ್ಟಿಯನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರೂ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಹೆಚ್ಚುವರಿ ಪಟ್ಟಿಯನ್ನು ರದ್ದುಪಡಿಸಿರುವುದರಿಂದ ನಿಗದಿಯಾಗಿದ್ದ ದಾಖಲೆ ಪರಿಶೀಲನೆಯೂ ರದ್ದಾಗಿದೆ. ಹೈದೆರಾಬಾದ್ ಕರ್ನಾಟಕದ 16 ಅಭ್ಯರ್ಥಿಗಳು, ಉಳಿಕೆ ಮೂಲ ವೃಂದದ 32 ಅಭ್ಯರ್ಥಿಗಳ ಹೆಸರು ಸೇರಿ ಒಟ್ಟು 48 ಅಭ್ಯರ್ಥಿಗಳ ಹೆಸರು ಈ ಹೆಚ್ಚುವರಿ ಪಟ್ಟಿಯಲ್ಲಿತ್ತು.
ಇದನ್ನೂ ಓದಿ| Teacher Recruitment 2022 | ಸರ್ಕಾರಿ ಶಿಕ್ಷಕರ ನೇಮಕಾತಿ ಮತ್ತೆ ಯಾವಾಗ ನಡೆಯಬಹುದು?