ಬೆಂಗಳೂರು: ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಸೋಲೂರಿನಲ್ಲಿರುವ ಆರ್.ಎಲ್. ಜಾಲಪ್ಪ ಅಕಾಡೆಮಿಯು (RL Jalappa Academy) ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ನಡೆಸುವ ಕೆಎಎಸ್, ಎಫ್‌ಡಿಎ ಮತ್ತು ಎಸ್‌ಡಿಎ ಹಾಗೂ ಪೊಲೀಸ್ ಇಲಾಖೆಯು ನಡೆಸುವ ಸಬ್‌ಇನ್ಸ್‌ಪೆಕ್ಟರ್ ನೇಮಕಾತಿ ಪರೀಕ್ಷೆಗಳಿಗೆ ಉಚಿತ ತರಬೇತಿಯನ್ನು ನೀಡುತ್ತಿದೆ.
ಗ್ರಾಮೀಣ ಭಾಗದ, ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ ಈ ತರಬೇತಿ ನೀಡಲಾಗುತ್ತಿದ್ದು, ನಾಲ್ಕು ತಿಂಗಳ ಕಾಲ ಈ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಅಗತ್ಯವಾದ ಮಾರ್ಗದರ್ಶನವನ್ನು ಸಂಪೂರ್ಣ ಉಚಿತವಾಗಿ ನೀಡಲಾಗುತ್ತದೆ.
ತರಬೇತಿ ಕೇಂದ್ರವು ನೆಲಮಂಗಲದಿಂದ 15 ಕಿ.ಮೀ ದೂರದಲ್ಲಿರುವ ಸೋಲೂರಿನಲ್ಲಿದೆ. ಆಸಕ್ತ ಅಭ್ಯರ್ಥಿಗಳು ಅಕಾಡೆಮಿಯ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಿರುತ್ತದೆ. ಉಚಿತ ತರಬೇತಿಯು ಏಪ್ರಿಲ್ 2 ರಿಂದ ಆರಂಭವಾಗಲಿದ್ದು, ಆಸಕ್ತರು ಕೂಡಲೇ ಅರ್ಜಿಸಲ್ಲಿಸಬೇಕೆಂದು ಅಕಾಡೆಮಿಯು ಪ್ರಕಟಣೆಯಲ್ಲಿ ಕೋರಿದೆ. ಅರ್ಜಿ ಸಲ್ಲಿಸಲು ವೆಬ್‌ಸೈಟ್ ವಿಳಾಸ ಇಂತಿದೆ: http://www.rljacademy.in/about.html ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9900606042
ಯಾವುದೀ ಅಕಾಡೆಮಿ?
ಸೋಲೂರಿನ ಆರ್ಯ ಈಡಿಗರ ಮಹಾ ಸಂಸ್ಥಾನ, ಕೋಲಾರದ ಶ್ರೀ ದೇವರಾಜ ಅರಸು ಎಜುಕೇಷನಲ್ ಟ್ರಸ್ಟ್ ಫಾರ್ ಬ್ಯಾಕ್‍ವರ್ಡ್ ಕ್ಲಾಸಸ್ ಮತ್ತು ಕರ್ನಾಟಕ ರಾಜ್ಯ ಈಡಿಗ ನೌಕರರ ಕ್ಷೇಮಾಭಿವೃದ್ಧಿ ಸಂಘಗಳ ಸಹಭಾಗಿತ್ವದಲ್ಲಿ `ಆರ್.ಎಲ್.ಜಾಲಪ್ಪ ಅಕಾಡೆಮಿ’ ಅಸ್ತಿತ್ವಕ್ಕೆ ಬಂದಿದೆ.
ಹಿಂದುಳಿದ ವರ್ಗಗಳ ಯುವಕ ಯುವತಿಯರಿಗೆ ವೃತ್ತಿ ನೈಪುಣ್ಯ ಹೆಚ್ಚಿಸುವ ಅನೇಕ ತರಬೇತಿಗಳನ್ನು ಅಕಾಡೆಮಿ ನೀಡುತ್ತಿದೆ. ಐಎಎಸ್/ಕೆಎಎಸ್ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಈ ಅಕಾಡೆಮಿ ತರಬೇತಿ ನಡೆಯುತ್ತಿದೆ. ಯಾವುದೇ ಪದವಿ ಪಡೆದವರು ಈ ಎಲ್ಲ ಪರೀಕ್ಷೆ ತೆಗೆದುಕೊಳ್ಳಬಹುದು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆಯುವ ಅಂಕಗಳೇ ಆಯ್ಕೆಯಲ್ಲಿ ನಿರ್ಣಾಯಕವಾಗಿರುವುದರಿಂದ ಅರ್ಹತಾ ಪದವಿಯಲ್ಲಿ ಕಡಿಮೆ ಅಂಕಗಳನ್ನು ಪಡೆದವರೂ ಈ ಪರೀಕ್ಷೆಯಲ್ಲಿ ಯಶಸ್ಸು ಗಳಿಸಬಹುದಾಗಿದೆ. ಆಡಳಿತ ನಿರ್ವಹಣೆಯಲ್ಲಿ ಅತ್ಯಂತ ಮಹತ್ವದ್ದಾಗಿರುವ ಈ ಹುದ್ದೆಗಳನ್ನು ಹಿಂದುಳಿದ ವರ್ಗಗಳ ಯುವಕ, ಯುವತಿಯರು ಪಡೆದುಕೊಳ್ಳಬೇಕು ಎಂಬುದು ಅಕಾಡೆಮಿಯ ಉದ್ದೇಶವಾಗಿದೆ.
ಅಕಾಡೆಮಿಯಲ್ಲಿ ಯಾವುದೇ ಕಾಲದಲ್ಲಿ ಕನಿಷ್ಠ ಒಂದು ನೂರರಿಂದ ನೂರಿಪ್ಪತ್ತು ಅಭ್ಯರ್ಥಿಗಳು ತರಬೇತಿ ಪಡೆಯುತ್ತಿರುವಂತೆ ಕೋರ್ಸುಗಳನ್ನು ರೂಪಿಸಲಾಗುತ್ತಿದೆ. ಎರಡೂ ವಿದ್ಯಾರ್ಥಿನಿಲಯಗಳಿಗೆ ಪ್ರತ್ಯೇಕ ವಾರ್ಡನ್‍ಗಳು, ಅಡುಗೆ ಸಿಬ್ಬಂದಿ, ಕಚೇರಿ ಸಿಬ್ಬಂದಿ, ಗ್ರಂಥಾಲಯ ನಿರ್ವಹಣೆ ಮತ್ತಿತರ ಕೆಲಸಗಳನ್ನು ನೋಡಿಕೊಳ್ಳಲು ಆಡಳಿತಾಧಿಕಾರಿಯೊಬ್ಬರನ್ನು ನೇಮಕ ಮಾಡಲಾಗಿದೆ. ಅಭ್ಯರ್ಥಿಗಳು ಇಲ್ಲಿಯೇ ಉಳಿದುಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಬಹುದಾಗಿದೆ.
ಇದನ್ನೂ ಓದಿ: KPSC Recruitment 2023 : ಪಿಯುಸಿ ಓದಿದವರಿಗೆ ಕಿರಿಯ ಲೆಕ್ಕ ಸಹಾಯಕರಾಗುವ ಅವಕಾಶ; ಇಂದಿನಿಂದ ಅರ್ಜಿ ಸಲ್ಲಿಕೆ ಶುರು