ದೇಶದ ಅತಿದೊಡ್ಡ ರಾಷ್ಟ್ರೀಕೃತ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಪ್ರೊಬೇಷನರಿ ಆಫೀಸರ್ (PO) ಹುದ್ದೆಗಳ ನೇಮಕಕ್ಕೆ (SBI PO Exam) ಡಿಸೆಂಬರ್ 17, 18, 19 ಮತ್ತು 20 ರಂದು ನಡೆಸಿದ್ದ ಪೂರ್ವಭಾವಿ ಪರೀಕ್ಷೆಯ (ಪ್ರಿಲಿಮ್ಸ್) ಫಲಿತಾಂಶ ಪ್ರಕಟಿಸಿದೆ.
ಕಳೆದ ಅಕ್ಟೋಬರ್‌ನಲ್ಲಿ ಈ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ನಿತ್ಯ ನಾಲ್ಕು ಶಿಫ್ಟ್‌ಗಳಲ್ಲಿ ಆನ್‌ಲೈನ್‌ನಲ್ಲಿ ಈ ಪರೀಕ್ಷೆ ನಡೆಸಲಾಗಿತ್ತು. ಅಭ್ಯರ್ಥಿಗಳು ಬ್ಯಾಂಕ್‌ನ ವೆಬ್‌ಸೈಟ್‌ನಲ್ಲಿ ರಿಜಿಸ್ಟೇಷನ್ ನಂಬರ್ ಮತ್ತು ಜನ್ಮದಿನಾಂಕದೊಂದಿಗೆ ಲಾಗಿನ್ ಆಗಿ ತಮ್ಮ ಫಲಿತಾಂಶ ನೋಡಬಹುದಾಗಿದೆ.
ರಾಜ್ಯದ ಬೆಳಗಾವಿ, ಬೆಂಗಳೂರು, ಬೀದರ್, ದಾವಣಗೆರೆ, ಧಾರವಾಡ, ಕಲಬುರಗಿ, ಹಾಸನ, ಹುಬಳ್ಳಿ, ಮಂಡ್ಯ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿಯಲ್ಲಿ ಈ ಪರೀಕ್ಷೆ ನಡೆಸಲಾಗಿತ್ತು. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಜನವರಿ 30 ರಂದು ನಡೆಯಲಿರುವ ಮುಖ್ಯ ಪರೀಕ್ಷೆ ಬರೆಯಬಹುದಾಗಿದೆ. ಇದಕ್ಕೆ ಸದ್ಯವೇ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಲಾಗುವುದು ಎಂದು ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ.
ಪೂರ್ವಭಾವಿ ಪರೀಕ್ಷೆಯ ಫಲಿತಾಂಶ ನೋಡಲು ಇಲ್ಲಿ ಕ್ಲಿಕ್ (Click Here) ಮಾಡಿ.
ಮುಖ್ಯ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದಲ್ಲಿ ಮೂರನೇ ಹಂತದಲ್ಲಿ ನಡೆಯಲಿರುವ ಗುಂಪು ಚರ್ಚೆ ಮತ್ತು ಸಂದರ್ಶನಕ್ಕೆ ಅಭ್ಯರ್ಥಿಗಳನ್ನು ಆಹ್ವಾನಿಸಲಾಗುತ್ತದೆ. ಮುಖ್ಯ ಪರೀಕ್ಷೆ ಮತ್ತು ಗುಂಪು ಚರ್ಚೆ ಮತ್ತು ಸಂದರ್ಶನದಲ್ಲಿ ಪಡೆದ ಅಂಕಗಳ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ.
ಈಗಾಗಲೇ ಬ್ಯಾಂಕ್ ಮುಖ್ಯ ಪರೀಕ್ಷೆ ಹೇಗಿರುತ್ತದೆ? ಎಷ್ಟು ಅಂಕಗಳಿಗೆ ನಡೆಯಲಿದೆ ಎಂಬ ಮಾಹಿತಿ ಒದಗಿಸುವ ಮತ್ತು ಪರೀಕ್ಷೆಗೆ ಸಂಬಂಧಿಸಿದ ಸೂಚನೆಗಳಿರುವ ಬುಕ್ ಲೆಟ್ ಅನ್ನು ವೆಬ್‌ಸೈಟ್‌ನಲ್ಲಿ ಒದಗಿಸಿದ್ದು, ಅಭ್ಯರ್ಥಿಗಳು ಇದನ್ನು ಓದಿಕೊಂಡು ಪರೀಕ್ಷೆಗೆ ಹಾಜರಾಗಬೇಕೆಂದು ಸೂಚಿಸಲಾಗಿದೆ. ಈ ಮಾಹಿತಿಯು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ಲಭ್ಯವಿದೆ.
ಪರೀಕ್ಷಾ ಮಾಹಿತಿಯ ಬುಕ್‌ಲೆಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ | SBI PO Recruitment 2022 | ಪ್ರೊಬೇಷನರಿ ಆಫೀಸರ್ ಹುದ್ದೆಗೆ ಪರೀಕ್ಷೆ; ಬದಲಾವಣೆ ಏನೇನು?
ಈ ಬಾರಿ ಒಟ್ಟು 1,673 ಹುದ್ದೆಗಳಿಗೆ ನೇಮಕ ನಡೆಯಲಿದ್ದು, ಈ ಹುದ್ದೆಗಳಲ್ಲಿ ಎಸ್‌ಸಿ ಅಭ್ಯರ್ಥಿಗಳಿಗೆ 270, ಎಸ್‌ಟಿ ಅಭ್ಯರ್ಥಿಗಳಿಗೆ 131, ಒಬಿಸಿ ಅಭ್ಯರ್ಥಿಗಳಿಗೆ 464 ಹಾಗೂ ಇಡಬ್ಲ್ಯುಎಸ್ ಅಭ್ಯರ್ಥಿಗಳಿಗೆ 160 ಹುದ್ದೆಗಳನ್ನು ಮೀಸಲಿಡಲಾಗಿದೆ. ಉಳಿದ 648 ಹುದ್ದೆಗಳು ಸಾಮಾನ್ಯ ಅಭ್ಯರ್ಥಿಗಳಿಗೆ ದೊರೆಯಲಿವೆ.
ಹೆಚ್ಚಿನ ಮಾಹಿತಿಗೆ ಬ್ಯಾಂಕ್‌ನ ನೇಮಕಾತಿ ವೆಬ್‌ಸೈಟ್ ನೋಡಿ