ದೇಶದ ಅತಿದೊಡ್ಡ ರಾಷ್ಟ್ರೀಕೃತ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಜೂನಿಯರ್ ಅಸೋಸಿಯೇಟ್ಸ್ (ಕಸ್ಟಮರ್ ಸಪೋರ್ಟ್ ಮತ್ತು ಸೇಲ್ಸ್) ಹುದ್ದೆಗಳ ನೇಮಕಕ್ಕೆ (SBI Recruitment 2022) ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ನಾಳೆ (ಸೆಪ್ಟೆಂಬರ್ 27) ಕೊನೆಯ ದಿನವಾಗಿರುತ್ತದೆ. ಇನ್ನೂ ಅರ್ಜಿ ಸಲ್ಲಿಸದೇ ಇರುವ ಆಸಕ್ತ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಬಹುದು.
ಈ ಬಾರಿ ಒಟ್ಟು 5,008 ಹುದ್ದೆಗಳಿಗೆ ನೇಮಕ ನಡೆಯಲಿದ್ದು, ಕರ್ನಾಟಕದಲ್ಲಿಯೇ 316 ಹುದ್ದೆಗಳಿವೆ. ಈ ೩೧೬ ಹುದ್ದೆಗಳನ್ನು ಕನ್ನಡ ಬಲ್ಲವರಿಗೆ ಮಾತ್ರ ಮೀಸಲಿಡಲಾಗಿರುತ್ತದೆ. ಇವುಗಳಲ್ಲಿ ಎಸ್‌ಸಿ ಅಭ್ಯರ್ಥಿಗಳಿಗೆ 51, ಎಸ್‌ಟಿ-22, ಒಬಿಸಿ ಅಭ್ಯರ್ಥಿಗಳಿಗೆ 85 ಮತ್ತು ಇಡಬ್ಲ್ಯುಎಸ್ ಅಭ್ಯರ್ಥಿಗಳಿಗೆ 31 ಮತ್ತು ಸಾಮಾನ್ಯ ಅಭ್ಯರ್ಥಿಗಳಿಗೆ 127 ಹುದ್ದೆಗಳನ್ನು ಹಂಚಲಾಗಿದೆ.
ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಆನ್‌ಲೈನ್‌ನಲ್ಲಿಯೇ ಅರ್ಜಿ ಶುಲ್ಕವನ್ನೂ ಪಾವತಿಸಬಹುದಾಗಿರುತ್ತದೆ.
ಅರ್ಹತೆಗಳೇನು?
ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಪದವಿಯ ಅಂತಿಮ ವರ್ಷದಲ್ಲಿ ಓದುತ್ತಿರುವ ಅಭ್ಯರ್ಥಿಗಳೂ ಅರ್ಜಿ ಸಲ್ಲಿಸಬಹುದಾಗಿದ್ದು, ಅವರು 30-11-2022 ಒಳಗೆ ಪದವಿ ಪಡೆದಿರುವ ದಾಖಲೆಯನ್ನು ಮುಂದೆ ಸಲ್ಲಿಸಬೇಕಿರುತ್ತದೆ.
ವಯೋಮಿತಿ: 20 ರಿಂದ 28 ವರ್ಷದೊಳಗಿನ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ವಯೋಮಿತಿಯನ್ನು ದಿನಾಂಕ 01-08-2022ಕ್ಕೆ ಲೆಕ್ಕ ಹಾಕಲಾಗುತ್ತದೆ. ಗರಿಷ್ಠ ವಯೋಮಿತಿಯಲ್ಲಿ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ನೀಡಲಾಗಿರುತ್ತದೆ.
ಅರ್ಜಿ ಸಲ್ಲಿಸಲು ಲಿಂಕ್ : https://ibpsonline.ibps.in/sbijajul22/
ಅರ್ಜಿ ಶುಲ್ಕ ಎಷ್ಟು?: ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯುಎಸ್ ಅಭ್ಯರ್ಥಿಗಳಿಗೆ 750 ರೂ.ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಆನ್‌ಲೈನ್‌ನಲ್ಲಿಯೇ ಶುಲ್ಕ ಪಾವತಿಸಬಹುದಾಗಿದೆ. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿರುತ್ತದೆ.
ಕನ್ನಡದಲ್ಲಿಯೇ ನಡೆಯಲಿದೆ ಪರೀಕ್ಷೆ
ಜೂನಿಯರ್ ಅಸೋಸಿಯೇಟ್ಸ್ ಹುದ್ದೆಗಳಿಗೆ ಪೂರ್ವಭಾವಿ ಪರೀಕ್ಷೆ (ಪ್ರಿಲಿಮ್ಸ್) ಮತ್ತು ಮುಖ್ಯ ಪರೀಕ್ಷೆ (ಮೇನ್) ನಡೆಸಿ ನೇಮಕ ಮಾಡಿಕೊಳ್ಳಲಾಗುತ್ತದೆ. ಈ ಎರಡೂ ಪರೀಕ್ಷೆಯನ್ನು ಕನ್ನಡದಲ್ಲಿಯೂ ಬರೆಯುವ ಅವಕಾಶ ನೀಡಲಾಗಿದೆ. ರಾಜ್ಯದ ಅಭ್ಯರ್ಥಿಗಳು ಕನ್ನಡ, ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಯಾವುದಾದರೂ ಭಾಷೆಯನ್ನು ಆಯ್ಕೆಮಾಡಿಕೊಂಡು ಈ ಪರೀಕ್ಷೆಗಳನ್ನು ಬರೆಯಬಹುದು. ಇಂಗ್ಲಿಷ್ ಭಾಷಾ ಪರೀಕ್ಷೆಯನ್ನು ಮಾತ್ರ ಇಂಗ್ಲಿಷ್‌ನಲ್ಲಿಯೇ ನಡೆಸಲಾಗುತ್ತದೆ.
ಎಸ್‌ಎಸ್‌ಎಲ್‌ಸಿ ಅಥವಾ ದ್ವಿತೀಯ ಪಿಯುಸಿಯನ್ನು ಕನ್ನಡ ಭಾಷೆಯಲ್ಲಿ ಓದಿರುವ ಅಭ್ಯರ್ಥಿಗಳಿಗೆ ಸ್ಥಳೀಯ ಭಾಷಾ ಪರೀಕ್ಷೆ ನಡೆಸಲಾಗುವುದಿಲ್ಲ. ನೇಮಕಕ್ಕೆ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆ ಅವಶ್ಯವಾಗಿದ್ದಲ್ಲಿ, ಭಾಷಾ ಪರೀಕ್ಷೆಯನ್ನು ನಡೆಸಲಾಗುತ್ತದೆ. ಇದರಲ್ಲಿ ಅರ್ಹತೆ ಪಡೆದವರನ್ನು ಮಾತ್ರ ನೇಮಕಕ್ಕೆ ಪರಿಗಣಿಸಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ರಾಜ್ಯದ ಬಳ್ಳಾರಿ, ಬೆಂಗಳೂರು, ಬೆಳಗಾವಿ, ದಾವಣಗೆರೆ, ಕಲಬುರಗಿ, ಹಾಸನ, ಹುಬಳ್ಳಿ-ಧಾರವಾಡ, ಮಂಡ್ಯ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿಯಲ್ಲಿ ಪರೀಕ್ಷಾ ಕೇಂದ್ರ ಇರಲಿದೆ.
ವೇತನ ಶ್ರೇಣಿ: Rs.17, 900-1000/3-20,900-1,230/3-24,590-1490/4-30,550- 1,730/7-42,600 3,270/1-45,930-1,990/1-47,920
ಹೆಚ್ಚಿನ ಮಾಹಿತಿಗೆ ವೆಬ್ ಸೈಟ್: https://sbi.co.in/web/careers/current-openings
ಇದನ್ನೂ ಓದಿ | SBI Recruitment 2022 | ಸ್ಪೆಷಲಿಸ್ಟ್ ಕೇಡರ್‌ನ 714 ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ