ಬೆಂಗಳೂರು: ಜಲಸಂಪನ್ಮೂಲ ಇಲಾಖೆಯಲ್ಲಿನ ಗ್ರೂಪ್ -ಸಿ ವೃಂದದ ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳ ನೇಮಕ ಪ್ರಕ್ರಿಯೆಯನ್ನು ( SDA Recruitment 2022) ಆರಂಭಿಸಲಾಗಿದೆ. ಒಟ್ಟು 155 ಪರಿಶಿಷ್ಟ ಜಾತಿಯ ಬ್ಯಾಕ್‌ಲಾಗ್ ಹುದ್ದೆಗಳಿಗೆ ನೇಮಕ ನಡೆಯಲಿದ್ದು, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಕಳೆದ ಜುಲೈನಲ್ಲಿಯೇ ಈ ನೇಮಕಕ್ಕೆ ಅಧಿಸೂಚನೆ ಹೊರಡಿಸಲಾಗಿತ್ತು. ಜುಲೈ 11 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಸಲಾಗುವುದು ಎಂದು ಪ್ರಕಟಿಸಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ತಾಂತ್ರಿಕ ಕಾರಣಗಳಿಂದ ಅನಿರ್ಧಿಷ್ಟ ಅವಧಿಯವರೆಗೆ ಮುಂದೂಡಲಾಗಿದೆ ಎಂದು ಪ್ರಕಟಿಸಲಾಗಿತ್ತು. ಇದೀಗ ಇದೇ ಅಧಿಸೂಚನೆ ಸಂಬಂಧಿಸಿದಂತೆ ನೇಮಕ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ.
ನವರಾತ್ರಿಯ ಮೊದಲ ದಿನದಿಂದಲೇ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಅರ್ಜಿ ಸಲ್ಲಿಸಲು 25-10-2022 ಕೊನೆ ದಿನವಾಗಿರುತ್ತದೆ. ಅಂದು ಸಂಜೆ 5.30ರ ಒಳಗೆ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಒಟ್ಟು ಹುದ್ದೆಗಳಲ್ಲಿ 47 ಹುದ್ದೆಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.
ಅರ್ಜಿ ಸಲ್ಲಿಸಲು ಲಿಂಕ್ ಇಲ್ಲಿದೆ : http://www.karnemaka.kar.nic.in/WRDO_recruit/
ಈ ಹುದ್ದೆಗೆ ವಿದ್ಯಾರ್ಹತೆ ಏನು?
ದ್ವಿತೀಯ ಪಿಯುಸಿಯಲ್ಲಿ ಅಥವಾ ಸಿಬಿಎಸ್‌ಸಿ/ ಐಎಸ್‌ಸಿ ನಡೆಸುವ ಕ್ಲಾಸ್ 10+2 ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಇದಲ್ಲದೆ, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ ವತಿಯಿಂದ ನಡೆಸುವ ಉನ್ನತ ಪ್ರೌಢ ಶಿಕ್ಷಣ ಕೋರ್ಸ್ ಮಾಡಿರುವವರೂ ಅರ್ಜಿ ಸಲ್ಲಿಸಬಹುದು.
ಮೂರು ವರ್ಷದ ಡಿಪ್ಲೊಮಾ ಅಥವಾ ಎರಡು ವರ್ಷಗಳ ಐಟಿಐ ಕೋರ್ಸ್ ಅಥವಾ ಎರಡು ವರ್ಷಗಳ ವೃತ್ತಿ ಶಿಕ್ಷಣ ಡಿಪ್ಲೊಮಾ (ಜೆಒಸಿ/ಜೆಓಡಿಸಿ) ಅಭ್ಯರ್ಥಿಗಳು ಎನ್‌ಐಒಎಸ್‌ನ ವತಿಯಿಂದ ನಡೆಸುವ ಒಂದು ಭಾಷಾ ಕೋರ್ಸ್ ಮತ್ತು ಒಂದು ಶೈಕ್ಷಣಿಕ ವಿಷಯದಲ್ಲಿ (ದೂರ ಕಲಿಕೆ ಮಾದರಿಯಲ್ಲಿ) ಅಥವಾ ಪದವಿ ಪೂರ್ವ ಮಂಡಳಿಯು ನಡೆಸುವ ಪರೀಕ್ಷೆಯಲ್ಲಿ ಒಂದು ಭಾಷೆ ಮತ್ತು ಒಂದು ವಿಷಯದಲ್ಲಿ ಉತ್ತೀರ್ಣರಾಗಿದ್ದಲ್ಲಿ ಮಾತ್ರ ಪಿಯುಸಿಗೆ ತತ್ಸಮಾನವೆಂದು ಪರಿಗಣಿಸಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ.
ವಯೋಮಿತಿ ಎಷ್ಟು?
ಅಭ್ಯರ್ಥಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಗರಿಷ್ಠ ವಯೋಮಿತಿ 40 ವರ್ಷ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಅಂಕಪಟ್ಟಿಯನ್ನು ನೋಡಿ, ಈ ಕುರಿತು ತೀರ್ಮಾನಿಸಲಾಗುತ್ತದೆ.
ನೇಮಕ ಹೇಗೆ?
ಇದು ಬ್ಯಾಕ್‌ಲಾಗ್ ಹುದ್ದೆಗಳ ವಿಶೇಷ ನೇಮಕಾತಿಯಾಗಿದ್ದು, ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲಾಗುವುದಿಲ್ಲ. ಶೈಕ್ಷಣಿಕ ಅರ್ಹತಾ ಪರೀಕ್ಷೆಯಲ್ಲಿ ಗಳಿಸಿದ ಒಟ್ಟು ಶೇಕಡಾವಾರು ಅಂಕಗಳು ಹಾಗೂ ವಯೋಮಿತಿ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನೂ ಪಾವತಿಸಬೇಕಾಗಿಲ್ಲ.
ನೇಮಕಾತಿಯ ಹೆಚ್ಚಿನ ಮಾಹಿತಿಗೆ ಅಧಿಸೂಚನೆ ಇಲ್ಲಿದೆ;
ವೇತನ ಎಷ್ಟಿರುತ್ತದೆ?
ದ್ವಿತೀಯ ದರ್ಜೆ ಸಹಾಯಕರ ಬ್ಯಾಕ್‌ಲಾಗ್ ಹುದ್ದೆಗಳು ಗ್ರೂಪ್ ಸಿ ಹುದ್ದೆಗಳೆಂದು ಪರಿಗಣಿಸಲ್ಪಟ್ಟಿವೆ. ವೇತನ ಶ್ರೇಣಿ ಇಂತಿದೆ; 21,400-500-24,400-550-24,600-600-27,000-650-29,600-750-32,600-850-36,000-950-39,800-1,100-42,000 ರೂ. ಇದಲ್ಲದೆ ನಿಯಮಾನುಸಾರ ಕಾಲಕಾಲಕ್ಕೆ ಅನ್ವಯವಾಗುವ ಇತರ ಭತ್ಯೆಗಳನ್ನೂ ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗೆ ವೆಬ್| https://waterresources.karnataka.gov.in/
ಇದನ್ನೂ ಓದಿ | KSP Recruitment 2022 | 3,484 ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಾಗ ಈ 15 ವಿಷಯ ಗಮನಿಸಿ