ಬೆಂಗಳೂರು: 15 ಸಾವಿರ ಪದವೀಧರ ಪ್ರಾಥಮಿಕ ಶಿಕ್ಷಕರ (6 ರಿಂದ 8 ನೇ ತರಗತಿ) ನೇಮಕಕ್ಕೆ (Teacher Recruitment 2022) ಸಂಬಂಧಿಸಿದಂತೆ 1:1 ಅನುಪಾತದಲ್ಲಿ ಪ್ರಕಟವಾಗಿದ್ದ ಆಯ್ಕೆಪಟ್ಟಿಗೆ ನೀಡಿದ್ದ ತಡೆಯಾಜ್ಞೆ ಕುರಿತು ಹೈಕೋರ್ಟ್‌ನಿಂದ ಸ್ಪಷ್ಟನೆ ಹೊರಬಿದ್ದಿದ್ದು, ಈ ತಡೆಯಾಜ್ಞೆ ನ್ಯಾಯಾಲಯದ ಮೆಟ್ಟಿಲೇರಿದ ಅಭ್ಯರ್ಥಿಗಳ ಫಲಿತಾಂಶ ಪ್ರಕಟಿಸಲು ಮಾತ್ರ ಅನ್ವಯವಾಗಲಿದೆ ಎಂದು ತಿಳಿಸಿದೆ.
1:1 ಅನುಪಾತದಲ್ಲಿ ಪ್ರಕಟವಾಗಿದ್ದ ಆಯ್ಕೆಪಟ್ಟಿಗೆ ತಡೆಯಾಜ್ಞೆ ನೀಡಿಲ್ಲ. ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಯಾವ ಜಿಲ್ಲೆಗೆ ಸೇರಿದ್ದಾರೆ, ಮೀಸಲಾತಿಗೆ ಅರ್ಹತೆ ಹೊಂದಿದ್ದಾರೆ ಎಂಬುದನ್ನಷ್ಟೇ ಪರಿಗಣಿಸಿ, ಆಯಾ ಹುದ್ದೆಗಳ ಅಂತಿಮ ಪಟ್ಟಿ ಪ್ರಕಟಿಸಲು ತಡೆಯಾಜ್ಞೆ ನೀಡಲಾಗಿದೆ ಎಂದಿದೆ.
ಜಾತಿ ಹಾಗೂ ಆದಾಯ ಪ್ರಮಾಣಪತ್ರ ಸಲ್ಲಿಕೆಯಲ್ಲಿ ಗೊಂದಲ ಉಂಟಾದ ಕಾರಣ ೧:೧ ಅನುಪಾತದ ತಾತ್ಕಾಲಿಕ ಆಯ್ಕೆಪಟ್ಟಿಗೆ ತಡೆಯಾಜ್ಞೆ ನೀಡಬೇಕೆಂದು ಕೆಲ ಅಭ್ಯರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಅವರ ನೇಮಕಕ್ಕೆ ಸಂಬಂಧಿಸಿದಂತೆ ತಡೆಯಾಜ್ಞೆ ನೀಡಿತ್ತು. ಇದನ್ನು 1:1 ಅನುಪಾತದಲ್ಲಿ ಪ್ರಕಟವಾಗಿದ್ದ ಆಯ್ಕೆಪಟ್ಟಿಗೆ ತಡೆಯಾಜ್ಞೆ ನೀಡಲಾಗಿದೆ ಎಂದೇ ಭಾವಿಸಲಾಗಿತ್ತು. ಈ ಕುರಿತು ಡಿಸೆಂಬರ್ 1 ರಂದೇ ನ್ಯಾಯಾಲಯ ಸ್ಪಷ್ಟನೆ ನೀಡಿದೆ. ಈ ಪ್ರಕರಣದ ವಿಚಾರಣೆಯು ಡಿಸೆಂಬರ್ 09ರಂದು ನಡೆಯಲಿದೆ.
1:2ರ ಅನುಪಾತದ ಆಯ್ಕೆಪಟ್ಟಿಯಲ್ಲಿ ಹೆಸರಿದ್ದರೂ, ಮುಂದಿನ ಹಂತದಲ್ಲಿ ಅರ್ಹತೆ ಇದ್ದರೂ ಮೀಸಲಾತಿ ಗೊಂದಲದಿಂದ ೧:೧ ರ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಹೆಸರು ಪ್ರಕಟವಾಗದ ಉಡುಪಿಯ ಯಡತಾಡಿ ಗ್ರಾಮದ ಅನಿತಾ ಸೇರಿ 40ಕ್ಕೂ ಅಧಿಕ ಮಹಿಳಾ ಹುದ್ದೆ ಆಕಾಂಕ್ಷಿಗಳು ಈ ಅರ್ಜಿ ಸಲ್ಲಿಸಿದ್ದಾರೆ. ನ್ಯಾ.ಎಂ.ನಾಗಪ್ರಸನ್ನ ನೇತೃತ್ವದ ನ್ಯಾಯಪೀಠ ಈ ಪ್ರಕರಣದ ವಿಚಾರಣೆ ನಡೆಸಿತ್ತು.
ಈಗಾಗಲೇ ಪ್ರಕಟವಾಗಿರುವ 1:1 ಅನುಪಾತದ ಪಟ್ಟಿಯಲ್ಲಿ ಒಟ್ಟು 13,363 ಅಭ್ಯರ್ಥಿಗಳು ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 1,637 ಹುದ್ದೆಗಳು ನೇಮಕವಾಗದೇ ಖಾಲಿ ಉಳಿದಿವೆ. ಕಲ್ಯಾಣ ಕರ್ನಾಟಕದ 5 ಸಾವಿರ ಹುದ್ದೆಗಳಲ್ಲಿ 4,187ಗಳಿಗೆ ನೇಮಕವಾಗಿದ್ದಾರೆ. ಉಳಿದ 9,176 ಅಭ್ಯರ್ಥಿಗಳು ರಾಜ್ಯದ ಇತರ ಜಿಲ್ಲೆಗಳಿಗೆ ನೇಮಕಗೊಂಡಿದ್ದಾರೆ. ತೃತೀಯ ಲಿಂಗಿಗಳಿಗೆ ಮೀಸಲಾಗಿದ್ದ 10 ಹುದ್ದೆಗಳ ಪೈಕಿ ಮೂರು ಹುದ್ದೆಗಳಿಗೆ ನೇಮಕಗೊಂಡಿದ್ದಾರೆ.
ಇದನ್ನೂ ಓದಿ | Teacher Recruitment 2022 | 15 ಸಾವಿರ ಶಿಕ್ಷಕರ ಹುದ್ದೆಗಳ ಪೈಕಿ 13,363 ಹುದ್ದೆಗಳಿಗಷ್ಟೇ ನೇಮಕ