Site icon Vistara News

Teacher Recruitment 2022 | ಅರ್ಹ ಅಭ್ಯರ್ಥಿಗಳ ಕೊರತೆ ಎದುರಾದರೆ ಮತ್ತೊಮ್ಮೆ ಸಿಇಟಿ

ಶಿಕ್ಷಕರ ನೇಮಕ

ಬೆಂಗಳೂರು: 15 ಸಾವಿರ ಪದವೀಧರ ಪ್ರಾಥಮಿಕ ಶಿಕ್ಷಕರ (6 ರಿಂದ 8ನೇ ತರಗತಿ) ನೇಮಕಕ್ಕೆ (Teacher Recruitment 2022) ಸಂಬಂಧಿಸಿದಂತೆ ಈಗಾಗಲೇ ಸಾರ್ವಜನಿಕ ಶಿಕ್ಷಣ ಇಲಾಖೆ ನೇಮಕ ಪ್ರಕ್ರಿಯೆ ಅಂತಿಮಗೊಳಿಸುತ್ತಿದ್ದು, ಒಂದು ವೇಳೆ ಅಗತ್ಯ ಇರುವಷ್ಟು ಅರ್ಹ ಅಭ್ಯರ್ಥಿಗಳು ಲಭ್ಯವಾಗದೇ ಇದ್ದಲ್ಲಿ ಸದ್ಯವೇ ಮತ್ತೊಂದು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸಲಿದೆ.

ಈ ವಿಷಯವನ್ನು ಶಿಕ್ಷಣ ಸಚಿವ ಬಿ. ಸಿ ನಾಗೇಶ್‌ ಅವರೇ ತಿಳಿಸಿದ್ದಾರೆ. ಶಿಕ್ಷಣ ಇಲಾಖೆಯು ತೀವ್ರ ಶಿಕ್ಷಕರ ಕೊರತೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ಬಿದ್ದರೆ ತಕ್ಷಣವೇ ಮತ್ತೊಂದು ಪರೀಕ್ಷೆ ನಡೆಸುವ ತೀರ್ಮಾನವನ್ನು ಇಲಾಖೆ ತೆಗೆದುಕೊಂಡಿದೆ. ಮುಂದಿನ ಡಿಸೆಂಬರ್‌ನ ಒಳಗೆ ಮತ್ತೊಂದು ಪರೀಕ್ಷೆ ನಡೆಯಲಿದೆ ಎಂದು ಅವರು ಹೇಳಿದ್ದಾರೆ.

ಕಳೆದ ಮೇ 21 ಮತ್ತು 22 ರಂದು ಲಿಖಿತ ಪರೀಕ್ಷೆ ನಡೆದಿದ್ದು, ಅಂತಿಮ ಕೀ ಉತ್ತರಗಳನ್ನೂ ಇಲಾಖೆಯ ವೆಬ್‌ನಲ್ಲಿ ಪ್ರಕಟಿಸಲಾಗಿದೆ. ಆದರೆ ಶಿಕ್ಷಣ ಇಲಾಖೆಯ ಲೆಕ್ಕಾಚಾರದ ಪ್ರಕಾರ ೧೫ ಸಾವಿರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳು ಲಭ್ಯವಾಗಿಲ್ಲ. ಈಗ ರಾಜ್ಯದಲ್ಲಿ ಒಬ್ಬರು ಶಿಕ್ಷಕರಿಗೆ ೪೦ ಮಂದಿ ವಿದ್ಯಾರ್ಥಿಗಳಿದ್ದಾರೆ. ಶಿಕ್ಷಕರ ಸಂಖ್ಯೆಯನ್ನು ಕೂಡಲೇ ಹೆಚ್ಚಿಸದಿದ್ದಲ್ಲಿ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಅದು ಪರಿಣಾಮ ಬೀರಲಿದೆ.

೧೫ ಸಾವಿರ ಹುದ್ದೆಗಳ ನೇಮಕಕ್ಕಾಗಿ ಇತ್ತೀಚೆಗೆ ನಡೆದ ಪರೀಕ್ಷೆ ಬರೆಯಲು 1,06,083 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಇವರಲ್ಲಿ ಅರ್ಹ ಅರ್ಜಿಗಳ ಸಂಖ್ಯೆ 74,116 ಮಾತ್ರ. ಆದರೆ ಪರೀಕ್ಷೆಗೆ ಶೇ.7ರಷ್ಟು ಅಭ್ಯರ್ಥಿಗಳು ಗೈರು ಹಾಜರಾಗಿದ್ದರು. ಹೀಗಾಗಿ 69,159 ಅಭ್ಯರ್ಥಿಗಳ ನಡುವೆ ಪೈಪೋಟಿ ನಡೆಯುತ್ತಿದೆ. ಇದರಿಂದ ಪರೀಕ್ಷೆ ಬರೆದ ಐವರಲ್ಲಿ ಒಬ್ಬರಿಗೆ ಈ ಹುದ್ದೆ ದೊರೆಯಬಹುದು ಎಂದು ಲೆಕ್ಕಾಚಾರ ಹಾಕಲಾಗುತ್ತಿತ್ತು. ಆದರೆ ಅಂತಿಮ ಕೀ ಉತ್ತರ ಪ್ರಕಟವಾದ ನಂತರ ಅನೇಕ ಅಭ್ಯರ್ಥಿಗಳಿಗೆ ನಿರಾಶೆಯಾಗಿದೆ. ಅವರೆಲ್ಲರೂ ಪರೀಕ್ಷೆಯಲ್ಲಿ ಅಗತ್ಯವಿರುವಷ್ಟು ಅಂಕ ಪಡೆಯುವಲ್ಲಿ ಯಶಸ್ವಿಯಾಗಿಲ್ಲ.

ಈ ಹಿಂದೆ ಕೂಡ ಖಾಲಿ ಇರುವ ಹುದ್ದೆಗಳಿಗೆ ಅಗತ್ಯವಾಗಿರುವಷ್ಟು ಅರ್ಹ ಅಭ್ಯರ್ಥಿಗಳು ದೊರೆಯುತ್ತಿರಲಿಲ್ಲ. ಆದರೆ ಈಗ ಎರಡು ವರ್ಷಗಳಿಂದ ನೇಮಕಾತಿ ನಡೆಯದೇ ಇರುವುದರಿಂದ ಶಿಕ್ಷಕರ ಕೊರತೆ ಹೆಚ್ಚಿದ್ದು, ಕೂಡಲೇ ಮತ್ತೆ ನೇಮಕಾತಿ ಪ್ರಕ್ರಿಯೆ ಆರಂಭಿಸುವ ಅನಿವಾರ್ಯತೆ ಇದೆ ಎಂದು ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ʼವಿಸ್ತಾರ ನ್ಯೂಸ್‌ʼ ಗೆ ಮಾಹಿತಿ ನೀಡಿದ್ದಾರೆ.

ಶಿಕ್ಷಕರ ನೇಮಕಕ್ಕೆ ಅಂಕಗಳ ಪರಿಗಣನೆ ಹೇಗೆ?
ಶಿಕ್ಷಕರ ಆಯ್ಕೆ ಮಾಡುವಾಗ ಅಭ್ಯರ್ಥಿಯು ಸ್ಪರ್ಧಾತ್ಮಕ ಪರೀಕ್ಷೆ, ಶಿಕ್ಷಕರ ಅರ್ಹತಾ (ಟಿ.ಇ.ಟಿ) ಪರೀಕ್ಷೆ, ಪದವಿ ಶಿಕ್ಷಣ ಮತ್ತು ಶಿಕ್ಷಕರ ಶಿಕ್ಷಣ ಕೋರ್ಸ್‌ ನಲ್ಲಿ ಪಡೆದ ಶೇಕಡವಾರು ಅಂಕಗಳನ್ನು ಲೆಕ್ಕಹಾಕಿ ಮೆರಿಟ್ಟ ಪಟ್ಟಿ ಸಿದ್ಧಪಡಿಸ ಲಾಗುತ್ತದೆ.

ಮೆರಿಟ್‌ಗೆ ಲೆಕ್ಕ ಹಾಕುವಾಗ (Derived percentage) ಅಭ್ಯರ್ಥಿಯು ಡಿಪ್ಲೊಮಾ ಇನ್ ಎಲಿಮೆಂಟರಿ ಎಜುಕೇಶನ್ ಅಥವಾ ಬಿ.ಇಡಿ ಅಥವಾ ಡಿಪ್ಲೊಮಾ ಇನ್ ಸ್ಪೆಷಲ್ ಎಜುಕೇಶನ್ ಅಥವಾ  ಬಿ.ಇಡಿ (ಸ್ಪೆಷಲ್ ಎಜುಕೇಶನ್) ವಿದ್ಯಾರ್ಹತೆ ಹೊಂದಿದ್ದಲ್ಲಿ ಕೆಳಗಿನಂತೆ ವೆಯಿಟೇಜ್ ಪರಿಗಣಿಸಲಾಗುತ್ತದೆ;
೧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿಪಡೆದ ಅಂಕಗಳ ೦.೫೦
೨ ಟಿಇಟಿ ಪರೀಕ್ಷೆಯಲ್ಲಿ ಪಡೆದ ಅಂಕಗಳ ೦.೨೦
೩ ಪದವಿಯಲ್ಲಿ ಪಡೆದ ಅಂಕಗಳ ೦.೨೦
೪ ಶಿಕ್ಷಕರ ಶಿಕ್ಷಣ ಕೋರ್ಸ್‌ನಲ್ಲಿ ಪಡೆದ ಅಂಕಗಳ ೦.೧೦

Derived percentage ಲೆಕ್ಕ ಹಾಕುವಾಗ ಅಭ್ಯರ್ಥಿಯು ನಾಲ್ಕುವರ್ಷಗಳ ಶಿಕ್ಷಕರ ಶಿಕ್ಷಣ ಪದವಿಯನ್ನು ಹೊಂದಿದ್ದಲ್ಲಿ ಶೇಕಡಾವಾರು ಅಂಕಗಳಿಗಾಗಿ ವೆಯಿಟೇಜ್‌ನ್ನು ಈ ಕೆಳಗಿನಂತೆ ಪರಿಗಣಿಸಲಾಗುತ್ತದೆ.
೧. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕಗಳ ೦.೫೦
೨. ಟಿಇಟಿ ಪರೀಕ್ಷೆಯಲ್ಲಿ ಪಡೆದ ಅಂಕಗಳ ೦.೨೦
೩. ನಾಲ್ಕು ವರ್ಷಗಳ ಬಿ.ಎಲ್.ಇಡಿ, ಅಥವಾ ಬಿಎ/ಬಿಎಸ್ಸಿಇಡಿ ಅಥವಾ ಬಿಎಇಡಿ ಅಥವಾ ಬಿಎಸ್ಸಿಇಡಿ. ಪದವಿ ಯಲ್ಲಿಪಡೆದ ಅಂಕಗಳ ೦.೩೦

ನೇಮಕದ ಹೆಚ್ಚಿನ ಮಾಹಿತಿಗೆ ನೋಡಬೇಕಾದ ವೆಬ್‌ಸೈಟ್‌ ವಿಳಾಸ: www.schooleducation.kar.nic.in

ಇದನ್ನೂ ಓದಿ | Teacher Recruitment 2022 : 15 ಸಾವಿರ ಶಿಕ್ಷಕರ ನೇಮಕಾತಿ ಪರೀಕ್ಷೆಯ ಕೀ ಉತ್ತರ ಪ್ರಕಟ

Exit mobile version