Site icon Vistara News

UPSC Results 2021: ಖಡಕ್‌ ಅಧಿಕಾರಿಗಳ ಪ್ರೇರಣಿಯಿಂದ ಯುಪಿಎಸ್‌ಸಿ ಬರೆದ ಶಿವಮೊಗ್ಗ ವೈದ್ಯಗೆ 641ನೇ ರ‍್ಯಾಂಕ್‌

UPSC Results 2021

ಶಿವಮೊಗ್ಗ: ದೇಶದ ಮತ್ತು ರಾಜ್ಯದ ಕೆಲ ಖಡಕ್‌ ಐಪಿಎಸ್‌ ಅಧಿಕಾರಿಗಳ ಪ್ರೇರಣೆಯಿಂದ ನಾಗರಿಕ ಸೇವಾ ಪರೀಕ್ಷೆ (UPSC Results 2021) ತೆಗೆದುಕೊಂಡ ಇಲ್ಲಿಯ ವೈದ್ಯ ಡಾ. ಪ್ರಶಾಂತ್‌ ಕುಮಾರ್‌ 641 ನೇ ರ‍್ಯಾಂಕ್‌ ಪಡೆದಿದ್ದಾರೆ.

2020ರಲ್ಲಿ ಶಿವಮೊಗ್ಗದ ಮೆಡಿಕಲ್‌ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದ ಪ್ರಶಾಂತ್‌ ಕುಮಾರ್‌ಗೆ ಆಡಳಿತ, ಜನರ ಸೇವೆಯ ಬಗ್ಗೆ ಎಲ್ಲಿಲ್ಲದ ಆಕರ್ಷಣೆ. ಕೆಲ ಅಧಿಕಾರಿಗಳು ಸಮಾಜದಲ್ಲಿ ಬದಲಾವಣೆಗಳಿಗೆ ಕಾರಣವಾಗುವುದನ್ನು ನೋಡಿ, ತಾವೂ ಇದೇ ರೀತಿಯ ಅಧಿಕಾರಿಯಾಗಬೇಕೆಂದು ಕನಸು ಕಂಡರು. ಇದನ್ನು ಈಡೇರಿಸಿಕೊಳ್ಳಲು ನಾಗರಿಕ ಸೇವಾ ಪರೀಕ್ಷೆ ಬರೆದಿದ್ದರು.

ಎರಡು ವರ್ಷಗಳ ಕಾಲ ಸತತ ಅಭ್ಯಾಸ ನಡೆಸಿದರು. ಏನಿಲ್ಲವೆಂದರೂ ನಿತ್ಯ 8-10 ಗಂಟೆಗಳ ಕಾಲ ಓದಿ, ಮೊದಲ ಪ್ರಯತ್ನದಲ್ಲೇ 641ನೇ ರ‍್ಯಾಂಕ್‌ ಪಡೆದಿದ್ದಾರೆ. ಎಂಬಿಬಿಎಸ್‌ ಪದವಿ ಪಡೆಯುತ್ತಿದ್ದಂತೆಯೇ ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ಆರಂಭಿಸಿದೆ. ʼಇಂಡಿಯಾ 4 ಐಎಎಸ್’ನಲ್ಲಿ ತರಬೇತಿ ಪಡೆದೆ. ‘ಮೆಡಿಕಲ್ ಸೈನ್ಸ್’ ಐಚ್ಛಿಕ ವಿಷಯವಾಗಿರುವುದರಿಂದ ಅದಕ್ಕೆ ಕೋಚಿಂಗ್ ಪಡೆದಿರಲಿಲ್ಲ. ಉಳಿದಂತೆ ಕೋಚಿಂಗ್‌ ಪಡೆದಿದ್ದರಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಅವರು ಹೇಳಿದ್ದಾರೆ.

ಶಿವಮೊಗ್ಗದ ಎಲ್‌ಬಿಎಸ್ ನಗರ ಬಡಾವಣೆಯ ನಿವಾಸಿಯಾಗಿರುವ ಡಾ.ಪ್ರಶಾಂತ್ ಕುಮಾರ್‌ ನಗರದ ಬಿ.ಎಚ್.ರಸ್ತೆಯಲ್ಲಿನ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾಗಿರುವ ಬಿ.ಓಂಕಾರಪ್ಪ ಹಾಗೂ ತಾಯಿ ಜೆ.ರೇಖಾ ಅವರ ಪುತ್ರ.

ಅಭ್ಯರ್ಥಿಗಳಿಗೆ ಪ್ರಶಾಂತ್‌ ನೀಡಿದ ಸಲಹೆ ಏನು?
ಅಭ್ಯರ್ಥಿಗಳು ಮೊದಲು ತಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಪಾಸಿಟಿವ್ ಸ್ಟ್ರೆಂಥ್‌ಗೆ ಹೆಚ್ಚು ಒತ್ತು ನೀಡಬೇಕು. ಸರಿಯಾದ ಯೋಜನೆ, ಓದುವ ವಿಷಯದ ಬಗ್ಗೆ ಸ್ಪಷ್ಟತೆ ಇರಬೇಕು. ಬದ್ಧತೆ, ಸ್ಪಷ್ಟ ಗುರಿ ಇಟ್ಟುಕೊಂಡೇ ಈ ಪರೀಕ್ಷೆಗೆ ಸಿದ್ಧತೆ ನಡೆಸಬೇಕು.

ಓದುತ್ತಾ ಓದುತ್ತಾ ಸ್ಪಷ್ಟತೆ ಪಡೆದೆ
ಯುಪಿಎಸ್‌ಸಿಯ ಈ ಸ್ಪರ್ಧಾತ್ಮಕ ಪರೀಕ್ಷೆಯ ಪಠ್ಯ ಡೈನಾಮಿಕ್ ಆಗಿರುತ್ತದೆ. ಆರಂಭದಲ್ಲಿ ಗೊಂದಲವಿತ್ತು. ಅಭ್ಯಾಸ ಮಾಡುತ್ತಾ ಹೋದಂತೆ ಪಠ್ಯದ ಕುರಿತು ಸಷ್ಟತೆ ಸಿಕ್ಕಿತು. ಮೆಡಿಕಲ್ ಸೈನ್ಸ್‌ನಂತಹ ವಿಷಯಗಳನ್ನು ನಾಲೈದು ಸಲ ಓದಿ, ಬರೆದ ನಂತರ ನೆನಪಿನಲ್ಲಿ ಉಳಿಯಿತು ಎನ್ನುತ್ತಾರೆ ಡಾ.ಪ್ರಶಾಂತ್ ಕುಮಾರ್.

641ನೇ ರ‍್ಯಾಂಕ್‌ ಪಡೆದಿರುವ ಬಗ್ಗೆ ಖುಷಿ ಇದೆ. ಆದರೆ ಸಮಾಧಾನವಿಲ್ಲ ಎಂದಿರುವ ಡಾ. ಪ್ರಶಾಂತ್‌ ಐಎಎಸ್ ಹುದ್ದೆಯನ್ನು ಪಡೆಯಬೇಕೆಂದುಕೊಂಡಿದ್ದಾರೆ. ಮುಂದಿನ ವರ್ಷ ಮತ್ತೆ ಪರೀಕ್ಷೆ ಬರೆಯುವ ಯೋಜನೆ ಹಾಕಿಕೊಂಡಿದ್ದಾರೆ. ಐಎಎಸ್ ತೇರ್ಗಡೆಯಾದ ಬಳಿಕ ಆರೋಗ್ಯ ಕ್ಷೇತ್ರ, ಶಿಕ್ಷಣ ಮತ್ತು ಯೋಜನೆಗಳ ಅನುಷ್ಠಾನದ ಕಡೆಗೆ ಹೆಚ್ಚು ಒತ್ತು ನೀಡಬೇಕು. ಪ್ರಾಮಾಣಿಕವಾಗಿ ಜನರ ಸೇವೆ ಮಾಡಬೇಕೆನುವ ಮಹತಾಕಾಂಕ್ಷೆ ಹೊಂದಿದ್ದಾರೆ.

ಈಶ್ವರಪ್ಪ ಅಭಿನಂದನೆ

ಡಾ. ಪ್ರಶಾಂತ್‌ ಕುಮಾರ್‌ ಮನೆಗೆ ಮಂಗಳವಾರ ಭೇಟಿ ನೀಡಿದ್ದ ಮಾಜಿ ಸಚಿವ, ಸ್ಥಳೀಯ ಶಾಸಕ ಕೆ.ಎಸ್‌. ಈಶ್ವರಪ್ಪ ಅವರಿಗೆ ಶಾಲು ಹೊದಿಸಿ ಸನ್ಮಾಸಿ, ಅಭಿನಂದಿಸಿದ್ದಾರೆ. ಈ ಬಾರಿಯ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಆಯ್ಕೆಯಾಗಿರುವ ಏಕೈಕ ಅಭ್ಯರ್ಥಿ ಇವರಾಗಿದ್ದಾರೆ. ನಮ್ಮ ಜಿಲ್ಲೆಗೆ ಕೀರ್ತಿತಂದಿದ್ದಾರೆ ಎಂದು ಈಶ್ವರಪ್ಪ ಅವರ ಸಾಧನೆಯನ್ನು ಬಣ್ಣಿಸಿದ್ದಾರೆ.

ಇದನ್ನೂ ಓದಿ| UPSC Results 2021: ನಂ.1 ರ‍್ಯಾಂಕ್‌ ಪಡೆದ ಶ್ರುತಿ ಶರ್ಮಾ ಸೋಷಿಯಲ್‌ ಮೀಡಿಯಾದಲ್ಲಿಯೂ ಆ್ಯಕ್ಟಿವ್

ಇದನ್ನೂ ಓದಿ| UPSC result 2021: ರಾಜ್ಯದ ಅಭ್ಯರ್ಥಿಗಳಲ್ಲಿ ಒಬ್ಬೊಬ್ಬರದು ಒಂದೊಂದು ರೀತಿಯ ಸಾಧನೆ!

Exit mobile version