ಕಾರವಾರ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರಣ್ಯ ವಾಸಿಗಳ (ಅರಣ್ಯ ವಾಸಿ) ಅನುಭೋಗದಲ್ಲಿರುವ ಅರಣ್ಯ ಜಮೀನಿನಿಂದ ಒಕ್ಕಲೆಬ್ಬಿಸುವ ಪ್ರಯತ್ನ ಜರುಗಿದಲ್ಲಿ ಅಂತಹ ಅರಣ್ಯ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಭಟ್ಕಳ ತಾಲೂಕಿನ ಅರಣ್ಯ ಅತಿಕ್ರಮಣದಾರ ಹೋರಾಟಗಾರರ ವೇದಿಕೆಯಲ್ಲಿ ಬೆಂಗಳೂರು ಚಲೋ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಸರಕಾರದ ಆದೇಶವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರಣ್ಯ ವಾಸಿಗಳ ಹಕ್ಕನ್ನು ರಕ್ಷಿಸಲು ಸರಕಾರ ನಿರ್ದೇಶನ ನೀಡಿದರೂ ಅರಣ್ಯ ಸಿಬ್ಬಂದಿ ಸರಕಾರದ ನಿರ್ದೇಶನ ನಿರ್ಲಕ್ಷಿಸುತ್ತಿರುವುದಕ್ಕೆ ಅವರು ಖೇದ ವ್ಯಕ್ತಪಡಿಸಿದರು.
ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರಣ್ಯವಾಸಿಗಳ ಅರ್ಜಿ ಪರಿಶೀಲನಾ ಪ್ರಕ್ರಿಯೆ ಪೂರ್ಣವಾಗುವವರೆಗೆ ಅರಣ್ಯವಾಸಿಯನ್ನು ಅದಿಭೋಗದಲ್ಲಿರುವ ಅರಣ್ಯ ಜಮೀನಿನಿಂದ ಒಕ್ಕಲೆಬ್ಬಿಸಬಾರದು. ಹಾಗೂ ಅರಣ್ಯ ಒತ್ತುವರಿ ಮತ್ತು ಅರಣ್ಯವಾಸಿಯ ಪಟ್ಟಾ ಜಮೀನು ಸೇರಿ 3 ಎಕರೆಗಿಂತ ಕಡಿಮೆ ಇರುವ ಅರಣ್ಯ ಒತ್ತುವರಿದಾರರನ್ನು ಒಕ್ಕಲೆಬ್ಬಿಸಲಾಗುವುದಿಲ್ಲ ಎಂಬ ಆದೇಶದಲ್ಲಿನ ಅಂಶವನ್ನು ಸಭೆಯಲ್ಲಿ ಉಲ್ಲೇಖಿಸಿದರು.
ಇದನ್ನೂ ಓದಿ | Jaya Ekadashi 2023 : ನಾಳೆ ಜಯ ಏಕಾದಶಿ; ವಿಷ್ಣು ಸಹಸ್ರನಾಮ ಪಠಿಸಿದರೆ ಇಷ್ಟಾರ್ಥ ಸಿದ್ಧಿ!
ಸಭೆಯಲ್ಲಿ ಜಿಲ್ಲಾ ಸಂಚಾಲಕರಾದ ಪಾಂಡುರಂಗ ನಾಯ್ಕ ಬೆಳಕೆ ಅವರು ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು. ಜಿಲ್ಲಾ ಸಂಚಾಲಕ ದೇವರಾಜ ಗೊಂಡ ವಂದನಾರ್ಪಣೆಯನ್ನು ಮಾಡಿದರು. ಸಭೆಯನ್ನು ಉದ್ದೇಶಿಸಿ ತಂಜೀಮ್ ಅಧ್ಯಕ್ಷ ಇನಾಯತ್ ಉಲ್ಲಾ ಶಾಬಂದ್ರಿ, ರಿಜವಾನ್, ಸೋಮ ಮರಾಠಿ, ಮಂಜುನಾಥ ನಾಗು ಮರಾಠಿ, ರಾಮು ಮರಾಠಿ, ಕಯುಂ ಬಾಯ್ ಮುಂತಾದವರು ಮಾತನಾಡಿದರು.
ಬೆಂಗಳೂರು ಚಲೋಗೆ ಸಹಸ್ರಾರು ಅರಣ್ಯವಾಸಿಗಳು
ಬೆಂಗಳೂರಿನಲ್ಲಿ ಫೆ. 10 ರಂದು ನಡೆಯುವ ಅರಣ್ಯ ವಾಸಿಗಳ ಬೆಂಗಳೂರು ಚಲೋ ಕಾರ್ಯಕ್ರಮಕ್ಕೆ ಭಟ್ಕಳ ತಾಲೂಕಿನಾದ್ಯಂತ ಸಹಸ್ರಾರು ಸಂಖ್ಯೆಯ ಅರಣ್ಯ ವಾಸಿಗಳು ಭಾಗವಹಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಇದನ್ನೂ ಓದಿ | Budget 2023: ಬಜೆಟ್ ಅಧಿವೇಶನ ಉದ್ದೇಶಿಸಿ ಮುರ್ಮು ಭಾಷಣ, ಬಸವಣ್ಣನ ಕಾಯಕವೇ ಕೈಲಾಸ ಉಕ್ತಿ ನೆನೆದ ರಾಷ್ಟ್ರಪತಿ