Site icon Vistara News

ಗಾಣಗಾಪುರ ದೇವಾಲಯದಲ್ಲಿ ವಂಚನೆ; ಐವರು ಅರ್ಚಕರಿಗೆ ಜಾಮೀನು ಮಂಜೂರು

ಕಲಬುರಗಿ: ಗಾಣಗಾಪುರ ಶ್ರೀ ದತ್ತ ದೇವಾಲಯದ ಹೆಸರಲ್ಲಿ ನಕಲಿ ವೆಬ್‌ಸೈಟ್ ರಚಿಸಿ ಸುಮಾರು 35 ಕೋಟಿ ರೂಪಾಯಿಯನ್ನು ವಂಚನೆ ಮಾಡಿದ್ದ ಪ್ರಕರಣದ ಆರೋಪ ಎದುರಿಸುತ್ತಿರುವ ಐವರು ಅರ್ಚಕರಿಗೆ ಕಲಬುರಗಿಯ ಸೆಷನ್ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಗಾಣಗಾಪುರದ ಶ್ರೀ ಶ್ರೀ ಗುರು ದತ್ತಾತ್ರೇಯ ದೇವಾಲಯವು ಮುಜರಾಯಿ ಇಲಾಖೆಗೆ ಸೇರಿದ್ದು, ರಾಜ್ಯದ ಅತ್ಯಂತ ಹೆಚ್ಚು ಕಾಣಿಕೆ ಸಂಗ್ರಹವಾಗುವ ದೇಗುಲಗಳಲ್ಲಿ ಒಂದು ಎಂಬ ಖ್ಯಾತಿ ಪಡೆದಿದೆ. ದೇವಸ್ಥಾನವು ಅಧಿಕೃತ ವೆಬ್‌ಸೈಟ್‌ ಒಂದನ್ನು ಹೊಂದಿದೆ. ಆದರೆ, ಇಲ್ಲಿನ ಐವರು ಅರ್ಚಕರು ದೇಗುಲದ ಹೆಸರಿನಲ್ಲಿ ಏಳೆಂಟು ನಕಲಿ ವೆಬ್‌ಸೈಟ್ ಹಾಗೂ ಇಮೇಲ್‌ ಸೃಷ್ಟಿಸಿದ್ದರು. ಈ ಮೂಲಕ ಭಕ್ತಾದಿಗಳಿಗೆ ವಂಚಿಸಿ ಹಣವನ್ನು ಸಂಗ್ರಹಿಸುತ್ತಿದ್ದರು. ಈ ವಿಷಯ ಬಹಿರಂಗವಾಗುತ್ತಿದ್ದಂತೆ ಅರ್ಚಕರಾದ ವಲ್ಲಭ ದಿನಕರ್ ಭಟ್, ಅಂಕೂರ್ ಪೂಜಾರಿ, ಪ್ರತೀಕ್ ಪೂಜಾರಿ, ಗಂಗಾಧರ್ ಪೂಜಾರಿ, ಶರತ್ ಭಟ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಈ ಪ್ರಕರಣ ದಾಖಲಾಗುತ್ತಿದ್ದಂತೆಯೆ ಐವರು ಆರೋಪಿಗಳು ಮಹಾರಾಷ್ಟ್ರದಲ್ಲಿ ತೆಲೆ‌ಮರೆಸಿಕೊಂಡಿದ್ದರು ಎಂದು ತಿಳಿದುಬಂದಿತ್ತು. ಅಲ್ಲದೆ, ಮಹಾರಾಷ್ಟ್ರದಿಂದಲೇ ಜಾಮೀನಿಗೆ ಮನವಿ ಮಾಡಿದ್ದರು. ಇತ್ತೀಚೆಗೆ ಈ ಐವರು ಆರೋಪಿಗಳಿಗೆ ಕಲಬುರಗಿ ಸೆಷನ್‌ ಕೋರ್ಟ್‌ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.

ದೇವಸ್ಥಾನಕ್ಕೆ ಸಲ್ಲಬೇಕಿದ್ದ ಕಾಣಿಕೆಯನ್ನು ತಮ್ಮ ಖಾತೆಗಳಿಗೆ ಹಾಕಿಸಿಕೊಂಡು ಸರ್ಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ರೂಪಾಯಿ ವಂಚಿಸಿದ್ದ ಐವರು ಅರ್ಚಕರಿಗೆ ಕೋರ್ಟ್‌ ಈಗ ಜಾಮೀನು ಮಂಜೂರು ಮಾಡಿದೆ.

ಇದನ್ನೂ ಓದಿ: ಗಾಣಗಾಪುರ ದೇವಾಲಯದಲ್ಲಿ ನಕಲಿ ವೆಬ್‌ಸೈಟ್‌ ರಚಿಸಿ ವಂಚನೆ ಮಾಡಿದ್ದ ಅರ್ಚಕರಿಗೆ ನಿರೀಕ್ಷಣಾ ಜಾಮೀನು

Exit mobile version