ತುಮಕೂರು: ತುಮಕೂರಿನಲ್ಲಿ 1000 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಟೌನ್ ಷಿಪ್ ಬರಲಿದ್ದು, ಸಾವಿರಾರು ಉದ್ಯೋಗಗಳು ದೊರೆಯಲಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಬುಧವಾರ ತುಮಕೂರಿನ ಗೂಳೂರಿನಲ್ಲಿ ಇರುವ ಬಿಜೆಪಿ ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು.
ತುಮಕೂರು ಜಿಲ್ಲೆ ಬೆಂಗಳೂರು ನಂತರ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿಯಾಗುತ್ತಿದೆ. ಇಲ್ಲಿ 1000 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಟೌನ್ ಷಿಪ್ ಬರಲಿದೆ. ವಿಶೇಷ ಹೂಡಿಕಾ ಪ್ರದೇಶ ವಿಶೇಷ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಧಾರವಾಡ ಮತ್ತು ತುಮಕೂರಿನಲ್ಲಿ ಮಾತ್ರ ವಿಶೇಷ ಯೋಜನೆ ಮಾಡಿದ್ದೇವೆ ತುಮಕೂರಿನಲ್ಲಿ ದೊಡ್ಡ ಪ್ರಮಾಣದ ಔದ್ಯೋಗೀಕರಣ ಆಗಲಿದೆ. ರಕ್ಷಣಾ ಇಲಾಖೆಯ ಉತ್ಪಾದನೆ ಕೂಡ ಈ ಭಾಗದಲ್ಲಿ ಆಗುತ್ತಿದೆ ಎಂದು ಬೊಮ್ಮಾಯಿ ತಿಳಿಸಿದರು.
ಎಸ್ಸಿ-ಎಸ್ಟಿ ಸಮುದಾಯಗಳಿಗೆ ಆದ್ಯತೆ
ʻʻನಮ್ಮ ಸರ್ಕಾರ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ರೈತರ ಮಕ್ಕಳು ಶಾಲೆ ಕಲಿಯಬೇಕೆಂದು ರೈತ ವಿದ್ಯಾನಿಧಿ ಯೋಜನೆ ಜಾರಿಗೆ ತಂದಿದ್ದೇವೆ. 10 ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವಿದ್ಯಾನಿಧಿಯನ್ನು ಪಡೆಯುತ್ತಿದ್ದಾರೆ. ಕಾರ್ಮಿಕರ ಮಕ್ಕಳು, ನೇಕಾರರ ಮಕ್ಕಳು, ಮೀನುಗಾರರ ಮಕ್ಕಳಿಗೂ ವಿದ್ಯಾನಿಧಿ ಯೋಜನೆ ವಿಸ್ತರಣೆ ಮಾಡಿದ್ದೇವೆ. ದುಡಿಯುವ ವರ್ಗವನ್ನು ಸದೃಢಗೊಳಿಸುವ ಕೆಲಸ ಮಾಡಲಾಗುತ್ತಿದೆ. ಎಸ್ಸಿ/ಎಸ್‌ಟಿ ಮೀಸಲಾತಿ ಹೆಚ್ಚಿಸುವ ಮೂಲಕ ಅವರ ವಿದ್ಯಾಭ್ಯಾಸ ಹಾಗೂ ಉದ್ಯೋಗಗಳಿಗೆ ಆದ್ಯತೆಯನ್ನು ನೀಡಲಾಗಿದೆʼʼ ಎಂದರು.
ಸುರೇಶ್ ಗೌಡರ ಕೈ ಬಲ ಪಡಿಸಬೇಕು
ಸುರೇಶ್ ಗೌಡ ಸ್ವಚ್ಛ ಮನಸಿನ್ನ ವ್ಯಕ್ತಿ. ಅವರು ಶಾಸಕರಾಗಿ ಸಾಕಷ್ಡು ಕೆಲಸ ಮಾಡಿದ್ದಾರೆ. ಸರ್ಕಾರದ ಕಾರ್ಯಕ್ರಮದಲ್ಲಿ ಇರುವ ಕೆಲಸವನ್ನು ಹುಡುಕಿ ಜನರಿಗೆ ತಲುಪಿಸುವ ಕೆಲಸ ಮಾಡುತ್ತಾರೆ. ಕೆಲವು ಬಾರಿ ಸತ್ಯ ನಿಷ್ಠುರರಿಗೆ ಕಾಲ ಇರುವುದಿಲ್ಲ. ಅವರಿಗೆ ತಾತ್ಕಾಲಿಕವಾಗಿ ವಿಧಾನಸೌಧದಲ್ಲಿ ಸ್ಥಾನ ಇಲ್ಲದಿರಬಹುದು. ಆದರೆ ಜನರ ಮನಸ್ಸಿನಲ್ಲಿ ಇದಾರೆ. ನಮಗೆ ಜನಪ್ರಿಯ ಶಾಸಕರು ಬೇಡ. ಜನೊಪಯೋಗಿ ಶಾಸಕರು ಬೇಕು. ಸುರೇಶ್ ಗೌಡರು ಈ ಬಾರಿ 25000 ಮತಗಳ ಅಂತರದಿಂದ ಆಯ್ಕೆಯಾಗುವುದು ಖಚಿತ. ಅದನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ ಎಂದರು.
ಈ ಕ್ಷೇತ್ರದಲ್ಲಿ ಗೂಳೂರು ಹೆಬ್ಬೂರು ಏತ ನೀರಾವರಿ ಯೋಜನೆ ಜಾರಿ ಮಾಡುವ ಸಂದರ್ಭದಲ್ಲಿ ಜನರನ್ನು ಮನವೊಲಿಸಿ ಯೋಜನೆಯ ಅನುಷ್ಠಾನಕ್ಕೆ ಅವಕಾಶ ಕಲ್ಪಿಸಿದರು. ಅವರ ಸಹಕಾರದಿಂದ ನಮ್ಮ ಅವಧಿಯಲ್ಲಿಯೇ ನಮ್ಮ ಸರ್ಕಾರದ ಅವಧಿಯಲ್ಲಿಯೇ ಅಡಿಗಲ್ಲು ಹಾಕಿ ನಾವೇ ಉದ್ಘಾಟನೆ ಮಾಡಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಅಬಕಾರಿ ಸಚಿವ ಗೋಪಾಲಯ್ಯ, ಶಾಸಕ ಎನ್. ರವಿಕುಮಾರ್, ಮಾಜಿ ಶಾಸಕ ಸುರೇಶ್ ಗೌಡ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಇದನ್ನೂ ಓದಿ | Government Job | ಕ್ರೀಡಾಪಟುಗಳಿಗೆ ನೇರ ನೇಮಕಾತಿಯಲ್ಲಿ ಸರ್ಕಾರಿ ಉದ್ಯೋಗ: ಸಿಎಂ ಬೊಮ್ಮಾಯಿ