ಬೆಳಗಾವಿ: ನಾಯಿಗಳ ಕಾಟಕ್ಕೆ ಗಡಿ ಜಿಲ್ಲೆಯ ಜನರು ಹೈರಾಣಾಗಿದ್ದಾರೆ. ರಸ್ತೆಗಳಲ್ಲಿ ಎಲ್ಲೆಂದರಲ್ಲಿ ತಿರುಗುವ ನಾಯಿಗಳು ಸಾವಿರಾರು ಜನರ ಮೇಲೆ ದಾಳಿ (Dog bite) ಮಾಡಿವೆ ಎಂಬ ವಿಷಯ ಆತಂಕ ಮೂಡಿಸಿದೆ. ಜಿಲ್ಲೆಯಲ್ಲಿ 6 ತಿಂಗಳಲ್ಲಿ 14,278 ನಾಯಿ ಕಡಿತ ಪ್ರಕರಣಗಳು ದಾಖಲಾಗಿವೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಹೇಶ್ ಕೋಣಿ, “ಕಳೆದ ವರ್ಷ ಇದೇ ಅವಧಿಯಲ್ಲಿ 1360 ನಾಯಿ ಕಡಿತ ಪ್ರಕರಣ ದಾಖಲಾಗಿತ್ತು. ಆಗ ಕೋವಿಡ್ ೧೯ರ ಹಿನ್ನೆಲೆಯಲ್ಲಿ ಲಾಕ್‌ಡೌನ್ ಮಾಡಿ ಸರ್ಕಾರ ಕ್ರಮ ಕೈಗೊಂಡಿತ್ತು. ಈ ಹಿನ್ನೆಲೆಯಲ್ಲಿ ಜನರ ಓಡಾಟ ಸಹ ಕಡಿಮೆ ಇತ್ತು. ಈಗ ಜನ ಸಂಚಾರ ಹೆಚ್ಚಿರುವುದರ ಜತೆಗೆ ನಾಯಿಗಳ ಹಾವಳಿಯೂ ಹೆಚ್ಚಾಗಿದೆ. ನಮ್ಮ ಇಲಾಖೆಯ ಎಲ್ಲ ಸಭೆಗಳಲ್ಲೂ ಈ ಬಗ್ಗೆ ಚರ್ಚೆ ಮಾಡಲಾಗಿದೆ. ಇತ್ತೀಚೆಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬಂದಿದೆ. ನಾಯಿಗಳ ಹಾವಳಿಗೆ ಕಡಿವಾಣ ಹಾಕಲು ಆರೋಗ್ಯ ಇಲಾಖೆ ಜತೆ ಪಶುಸಂಗೋಪನೆ ಇಲಾಖೆ ಸೇರಿ ವಿವಿಧ ಇಲಾಖೆಗಳು ಒಟ್ಟುಗೂಡಿ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಮುಂದಡಿ ಇಡಲಾಗಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ | ದೇಶದ ಸರ್ಕಾರಿ ವೈದ್ಯಕೀಯ ಸಂಸ್ಥೆಗಳಲ್ಲಿ ಬೆಳಗಾವಿ ಬಿಮ್ಸ್‌ಗೆ 12ನೇ ಸ್ಥಾನ; ಕಾರಜೋಳ ಸಂತಸ
ಪಶು ಆಸ್ಪತ್ರೆಗಳಲ್ಲಿ ನಾಯಿಗಳ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಶುವೈದ್ಯರಿಂದ ಶಸ್ತ್ರಚಿಕಿತ್ಸೆ ಮಾಡಿಸಬೇಕು. ಜಿಲ್ಲೆಯಲ್ಲಿ 1548 ವಯಲ್ಸ್ ಆ್ಯಂಟಿ ರೇಬಿಸ್ ವ್ಯಾಕ್ಸಿನ್ ಲಭ್ಯವಿದ್ದು, ಯಾವುದೇ ಕೊರತೆ ಇಲ್ಲ. ನಾಯಿ ಕಡಿತ ಅಷ್ಟೇ ಅಲ್ಲ ಕೆಲವರು ನಾಯಿ ಸ್ಪರ್ಶಿಸಿದರೂ ಬಂದು ಲಸಿಕೆ ಪಡೆಯುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.
ಸಂತಾನೋತ್ಪತ್ತಿ ನಿಯಂತ್ರಣ ಕೇಂದ್ರ
ಬೆಳಗಾವಿ ಮಹಾನಗರ ವ್ಯಾಪ್ತಿಯಲ್ಲಿ ಅತಿಹೆಚ್ಚು ನಾಯಿ ಕಡಿತ ಪ್ರಕರಣ ಕಂಡುಬಂದ ಹಿನ್ನೆಲೆಯಲ್ಲಿ ಪಾಲಿಕೆ ವತಿಯಿಂದ ಪ್ರಾಣಿಗಳ ಸಂತಾನೋತ್ಪತ್ತಿ ನಿಯಂತ್ರಣ ಕೇಂದ್ರ ಸ್ಥಾಪನೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಕೇಂದ್ರದಲ್ಲಿ ಇಬ್ಬರು ಪಶುವೈದ್ಯರು, ಇಬ್ಬರು ಶಸ್ತ್ರಚಿಕಿತ್ಸೆ ಸಹಾಯಕರು ಹಾಗೂ ಬೀದಿ ನಾಯಿಗಳನ್ನು ಸೆರೆ ಹಿಡಿಯಲು ನಾಲ್ವರು ಸಿಬ್ಬಂದಿಯನ್ನು ನೇಮಕ ಮಾಡಲಾಗುತ್ತದೆ. ಜಿಲ್ಲೆಯಲ್ಲಿ 2020ರಲ್ಲಿ 18826 ನಾಯಿ ಕಡಿತ ಪ್ರಕರಣ, 2021ರಲ್ಲಿ 20362 ಪ್ರಕರಣ, 2022ರಲ್ಲಿ 14278 ಪ್ರಕರಣ ದಾಖಲಾಗಿವೆ. ಇತ್ತೀಚೆಗೆ ಮಹಾನಗರ ಪಾಲಿಕೆ ಅಧಿಕಾರಿಗಳ ಸಭೆಯಲ್ಲಿ ಶಾಸಕ ಅಭಯ್ ಪಾಟೀಲ್, ಬೀದಿ ನಾಯಿಗಳ ಹಾವಳಿ ತಡೆಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದರು.
ಇದನ್ನೂ ಓದಿ | ಹೆತ್ತ ತಾಯಿ ಜೀವವನ್ನು ಸಾಕಿದ ನಾಯಿ ತೆಗೆಯಿತು; ಈತ ಮನೆಗೆ ಬಂದಾಗ ಕಂಡಿತ್ತು ಭಯಾನಕ ದೃಶ್ಯ