Site icon Vistara News

15 ಕೆಜಿ ನಾಯಿ ಬರ್ತ್‌ಡೇಗೆ 1 ಕ್ವಿಂಟಾಲ್‌ ಕೇಕ್‌! ಇದು ಹಾಲಿ-ಮಾಜಿ ಪಂಚಾಯ್ತಿ ಸದಸ್ಯರ ಕಚ್ಚಾಟದ ಎಫೆಕ್ಟ್‌!

ನಾಯಿ ಬರ್ತ್‌ಡೇ

ಬೆಳಗಾವಿ: ಮೂಡಲಗಿ ತಾಲೂಕಿನ ತುಕ್ಕಾನಟ್ಟಿ ಗ್ರಾಮದಲ್ಲಿ‌‌‌ ತಮ್ಮ ನೆಚ್ಚಿನ ನಾಯಿ ‘ಕ್ರಿಶ್’ ಬರ್ತ್‌ಡೇ ಅನ್ನು ಪಂಚಾಯತಿ ಮಾಜಿ ಸದಸ್ಯ ಶಿವಪ್ಪ ಮರ್ದಿ ಆಚರಿಸಿದ್ದಾರೆ. ಇದಕ್ಕಾಗಿ ಒಂದು ಕ್ವಿಂಟಾಲ್‌ ಕೇಕ್‌ ಕಟ್ ಮಾಡಿದ್ದು, ಗ್ರಾಮಸ್ಥರು ಶುಭ ಕೋರಿದ್ದಾರೆ. ಅಷ್ಟಕ್ಕೂ ತಮ್ಮ ನೆಚ್ಚಿನ ನಾಯಿ “ಕ್ರಿಶ್ʼ ಹುಟ್ಟುಹಬ್ಬ ಆಚರಿಸಲು ಕಾರಣ ಗ್ರಾಮ ಪಂಚಾಯತಿ ರಾಜಕಾರಣ!

ಕಳೆದ 20 ವರ್ಷಗಳಿಂದ ಗ್ರಾಮ ಪಂಚಾಯತಿ ಸದಸ್ಯರಾಗಿದ್ದ ಶಿವಪ್ಪ ಮರ್ದಿ ಹಾಗೂ ಇತರ ಸದಸ್ಯರು ಇತ್ತೀಚೆಗೆ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಚುನಾವಣೆ ಗೆದ್ದ ತುಕ್ಕಾನಟ್ಟಿ ಪಂಚಾಯತಿ ಸದಸ್ಯರ ಪೈಕಿ ಒಬ್ಬ ತನ್ನ ಹುಟ್ಟುಹಬ್ಬ ಆಚರಣೆ ದಿನದಂದು ಮಾಜಿ ಗ್ರಾಮ ಪಂಚಾಯತಿ ಸದಸ್ಯರಿಗೆ ನಾಯಿ, ಹಂದಿ ಎಂದು ಕರೆದು ಅವಹೇಳನ ಮಾಡಿದ್ದರಂತೆ. ಇದರಿಂದ ಕುಪಿತಗೊಂಡ ಮಾಜಿ ಗ್ರಾ. ಪಂ ಸದಸ್ಯ ಶಿವಪ್ಪ ಮರ್ದಿ ಒಂದು ಕ್ವಿಂಟಾಲ್ ಕೇಕ್ ಮಾಡಿಸಿ ಅದ್ಧೂರಿಯಾಗಿ ತಮ್ಮ ನೆಚ್ಚಿನ ಶ್ವಾನ ‘ಕ್ರಿಶ್’ ಬರ್ತ್‌ಡೇ ಆಚರಿಸಿದ್ದಾರೆ.

ಇದನ್ನೂ ಓದಿ | ಮಕ್ಕಳ ಕಥೆ: ನಾಯಿಗಳಿಗೆ ನಮ್ಮೊಂದಿಗೆ ಸ್ನೇಹವೇಕೆ?

ನಾಯಿ ‘ಕ್ರಿಶ್’

ಇನ್ನು ನಾಯಿ “ಕ್ರಿಶ್ʼ ಬರ್ತ್‌ಡೇ ಒಂದು ಕ್ವಿಂಟಾಲ್ ಕೇಕ್ ಮಾತ್ರವಲ್ಲ ಮೂರು ಕ್ವಿಂಟಾಲ್ ಚಿಕನ್, ಸಾವಿರಾರು ಮೊಟ್ಟೆಗಳು, 50 ಕೆ.ಜಿ ಕಾಜು ಕರಿ, ರೊಟ್ಟಿ, ಅನ್ನ, ಸಾಂಬಾರ್ ಸೇರಿದಂತೆ ಭರ್ಜರಿ ಬಾಡೂಟ ಮಾಡಿಸಿದ್ದಾರೆ. ತುಕ್ಕಾನಟ್ಟಿ ಅಷ್ಟೇ ಅಲ್ಲದೆ ಸುತ್ತಮುತ್ತಲಿನ ಗ್ರಾಮಸ್ಥರು ಸೇರಿ 3 ಸಾವಿರಕ್ಕೂ ಹೆಚ್ಚು ಜನರಿಗೆ ಭರ್ಜರಿ ಬಾಡೂಟ ಬಡಿಸಿದ್ದಾರೆ. ಗ್ರಾಮದ ಪ್ರಮುಖ ರಸ್ತೆಗಳಲ್ಲಿ ತೆರೆದ ವಾಹನದಲ್ಲಿ ನಾಯಿಯ ಮೆರವಣಿಗೆ ಮಾಡಿ ವೇದಿಕೆಗೆ ತಂದು ಕೇಕ್ ಕಟ್ ಮಾಡಿಸಿ ಸ್ಥಳೀಯ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮವನ್ನೂ ಮಾಡಿಸಿದ್ದಾರೆ‌!

ಹಾಲಿ – ಮಾಜಿ ಗ್ರಾಮ ಪಂಚಾಯಿತಿ ಸದಸ್ಯರ ರಾಜಕೀಯ ತಿಕ್ಕಾಟದ ಮಧ್ಯೆ ಸಾಕು ನಾಯಿ ಕ್ರಿಶ್ ಅದ್ಧೂರಿ ಬರ್ತ್ ಡೇ ನಡೆದಿದೆ. ಸುತ್ತಮುತ್ತಲಿನ ಗ್ರಾಮಗಳಲ್ಲಿ ಸದ್ಯ ಎಲ್ಲಿ ನೋಡಿದ್ದಲ್ಲಿ ‘ಕ್ರಿಶ್’ ಬರ್ತ್‌ಡೇ ಬಗ್ಗೆಯೇ ಚರ್ಚೆ ನಡೆಯುತ್ತಿದೆ‌.

ಇದನ್ನೂ ಓದಿ | ಮುದ್ದಿನ ನಾಯಿಗೆ ಸೀಮಂತ, ಶ್ವಾನ ಪ್ರೀತಿ ಮೆರೆದ ನಾಟಕ‌ ಕಲಾವಿದೆ ಜ್ಯೋತಿ

Exit mobile version