| ಅಶೋಕ್, ಬಾಗಲಕೋಟೆ
ಸಾಧನೆ ಮಾಡುವ ಗುರಿ, ಸಾಧಿಸುವ ಛಲ ಇದ್ದರೆ ಯಾವುದೂ ಅಸಾಧ್ಯವಲ್ಲ. ಇದಕ್ಕೆ ಸಾಕ್ಷಿಯಾಗಿ ರೈತನ ಪುತ್ರಿಯೊಬ್ಬಳು ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯದಲ್ಲಿ 16 ಚಿನ್ನದ ಪದಕ ಪಡೆದು ರಾಜ್ಯದ ಗಮನಸೆಳೆದಿದ್ದಾಳೆ.
ತೋಟಗಾರಿಕೆ ವಿವಿಯ ವಿದ್ಯಾರ್ಥಿನಿ ಉಮ್ಮೇಸರಾ ಹಸ್ಮತ್ ಅಲಿ ತೋಟಗಾರಿಕೆ ವಿಜ್ಞಾನಿಗಳ ಬಿಎಸ್ಸಿ ಪದವಿಯಲ್ಲಿ ಬರೊಬ್ಬರಿ 16 ಚಿನ್ನದ ಪದಕ ಪಡೆದು ಗೋಲ್ಡನ್ ಗರ್ಲ್ ಎನಿಸಿದ್ದಾಳೆ. ತೋಟಗಾರಿಕೆ ಮಹಾವಿದ್ಯಾಲಯದ ಶಿರಸಿಯ ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದಲ್ಲಿ ಬಿಎಸ್ಸಿ ಪದವಿ ಪಡೆದ ಉಮ್ಮೇಸರಾಗೆ 16 ಚಿನ್ನದ ಪದಕಗಳು ಅರಸಿ ಬಂದಿವೆ. ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರಿಂದ ವಿದ್ಯಾರ್ಥಿನಿ ಚಿನ್ನದ ಪದಕ ಪಡೆದಿದ್ದಾರೆ.
“ನಾನು ರೈತನ ಮಗಳು, ನನ್ನ ಸಾಧನೆಗೆ ತಂದೆ ತಾಯಿ ಪ್ರೋತ್ಸಾಹ ಕಾರಣ. ಅವರ ಮುಖದಲ್ಲಿ ನನಗಿಂತ ಖುಷಿಯಿದೆ, ಅದು ನನಗೆ ಸಾಕು. ಮುಂದೆ ಇಟಲಿಯಲ್ಲಿ ಎಂಎಸ್ಸಿ ಮಾಡುವ ಕನಸು ಹೊಂದಿದ್ದು, ವಿದ್ಯಾಭ್ಯಾಸ ಮುಗಿಸಿ ಸಂಶೋಧನಾ ವಿಭಾಗದಲ್ಲಿ ಸಾಧನೆ ಮಾಡುತ್ತೇನೆʼʼ ಎಂದು ಉಮ್ಮೇಸರಾ ಹಸ್ಮತ್ ಅಲಿ ತಿಳಿಸಿದ್ದಾರೆ.
ಉಮ್ಮೇಸರಾ ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಗುಲ್ಲಂಪೇಟೆ ಮೂಲದವರು. ಸದ್ಯ ಶಿರಸಿಯಲ್ಲಿ ತೋಟಗಾರಿಕೆ ಬಿಎಸ್ಸಿ ಪದವಿ ಮುಗಿಸಿದ್ದಾರೆ. ಬಿಎಸ್ಸಿಯಲ್ಲಿ 91.1 ಅಂಕ ಪಡೆದು ಉತ್ತಮ ಸಾಧನೆ ಮಾಡಿದ ಹಿನ್ನೆಲೆಯಲ್ಲಿ 16 ಚಿನ್ನದ ಪದಕಗಳು ಅರಸಿ ಬಂದಿವೆ. ಇವರ ತಂದೆ ಹಸ್ಮತ್ ಅಲಿ ರೈತರಾಗಿದ್ದಾರೆ. ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿನಿಯಾಗಿರುವ ಉಮ್ಮೇಸರಾ ಸ್ಕಾಲರ್ಶಿಪ್, ಎಜುಕೇಶನ್ ಲೋನ್ ಪಡೆದು ಓದಿ ಇಂತಹ ಸಾಧನೆ ಮಾಡಿದ್ದಾಳೆ.
ಶೈಕ್ಷಣಿಕ ಸಾಲ ಅಗತ್ಯ
ಮಗಳ ಸಾಧನೆ ಬಗ್ಗೆ ಪ್ರತಿಕ್ರಿಯಿಸಿರುವ ತಂದೆ ಹಸ್ಮತ್ ಅಲಿ, ಮಗಳು ವಿದೇಶದಲ್ಲಿ ಸ್ನಾತಕೋತ್ತರ ಪದವಿ ಮಾಡುವ ಕನಸು ಹೊಂದಿದ್ದಾಳೆ. ಏನು ಮಾಡೋದು 16 ಚಿನ್ನದ ಪದಕ ಪಡೆದು ಇಷ್ಟು ಸಾಧನೆ ಮಾಡಿದರೂ ನಮ್ಮ ಹೊಲದ ಮೇಲೆ 15 ಲಕ್ಷ ರೂ ಸಾಲ ಕೊಡಲು ಯಾವ ಬ್ಯಾಂಕ್ ಒಪ್ಪುತ್ತಿಲ್ಲ. ಸರ್ಕಾರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಾಲಸೌಲಭ್ಯ ನೀಡಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ | ಬಾಗಲಕೋಟೆ ತೋಟಗಾರಿಕೆ ವಿವಿ ಘಟಿಕೋತ್ಸವದಲ್ಲಿ 77 ಚಿನ್ನದ ಪದಕ ಪ್ರದಾನ