Site icon Vistara News

Land Dispute: ಜಮೀನು ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಮಾರಾಮಾರಿ; ಹಲವರಿಗೆ ಗಂಭೀರ ಗಾಯ

2 families get into a fight over land issue, Many seriously injured

ತುಮಕೂರು: ಜಿಲ್ಲೆಯ ತುರುವೇಕೆರೆ ತಾಲೂಕಿನ ಕೋಳಘಟ್ಟ ಕಾವಲ್‌ನಲ್ಲಿ ಜಮೀನು ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿದ್ದು, ಹಲವರಿಗೆ ಗಂಭೀರ ಗಾಯಗಳಾಗಿವೆ. ನಾಯಕನಘಟ್ಟ ಗ್ರಾಮದ ದಾಕ್ಷಾಯಣಿ ಮತ್ತು ಅಜ್ಜೇನಹಳ್ಳಿ ಗ್ರಾಮದ ಕೆಂಚಪ್ಪ ಕುಟುಂಬದ ನಡುವೆ ಜಮೀನು ವಿಚಾರಕ್ಕೆ ಗಲಾಟೆ ನಡೆದಿದ್ದು, ಮಾರಾಮಾರಿಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಎರಡು ಕುಟುಂಬಗಳ ನಡುವೆ ಕೋಳಘಟ್ಟ ಕಾವಲ್‌ನ ಸರ್ವೆ ನಂ.5/2ರ 3 ಎಕರೆ 1 ಗುಂಟೆ ಜಮೀನಿಗೆ ಸಂಬಂಧಿಸಿದಂತೆ ವಿವಾದವಿದೆ. 1977ರಿಂದ ದಾಕ್ಷಾಯಣಿ ಮತ್ತು ಕುಟುಂಬ ಈ ಜಮೀನನ್ನು ಬಳಸುತ್ತಿದ್ದಾರೆ. ಆದರೆ ಈ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ ಕೆಂಚಪ್ಪ ಮಕ್ಕಳಾದ ನಾಗೇಶ್ ಮತ್ತು ಯೋಗಾನಂದ್ ತೆಂಗಿನ ಕಾಯಿ ಕೀಳುತ್ತಿದ್ದರು ಎನ್ನಲಾಗಿದೆ. ಇದನ್ನು ಪ್ರಶ್ನಿಸಿದ್ದಕ್ಕೆ ದಾಕ್ಷಾಯಣಿ ಕುಟುಂಬದವರ ಮೇಲೆ ಹಲ್ಲೆ ಮಾಡಲಾಗಿದೆ.

ಇದನ್ನೂ ಓದಿ | Assault Case: ಯುವಕನಿಗೆ ಕಂಟ್ರಿ ಪಿಸ್ತೂಲ್ ತೋರಿಸಿ ಜೀವ ಬೆದರಿಕೆ ಹಾಕಿದ ರೌಡಿಶೀಟರ್!

ಮೊದಲಿಗೆ ನಾಗೇಶ್ ಮತ್ತು ಯೋಗಾನಂದ್ ಸಹಚರರಿಂದ ದಾಕ್ಷಾಯಣಿ ಪುತ್ರ ವಸಂತ್ ಕುಮಾರ್ ಸೇರಿ ಹಲವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ನಂತರ ಗಲಾಟೆ ತಾರಕಕ್ಕೇರಿ ಎರಡೂ ಕುಟುಂಬದವರು ದೊಣ್ಣೆಗಳಿಂದ ಪೊಲೀಸರ ಎದುರೇ ಹೊಡೆದಾಡಿಕೊಂಡಿದ್ದಾರೆ. ಗಾಯಾಳುಗಳಿಗೆ ತುರುವೇಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದಂಡಿನಶಿವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Theft Case: ಮಾಲೀಕನ ಎದುರೇ ಸ್ಕೂಟರ್ ಎಗರಿಸಿದ ಖತರ್ನಾಕ್‌ ಕಳ್ಳ; ಜ್ಯೂಸ್‌ ಕುಡಿಯಲು ಹೋದಾಗ ಮಾಯ!

10 ಕ್ವಿಂಟಾಲ್ ಕಡಲೆ ಕದ್ದು ಪರಾರಿಯಾಗಿದ್ದ ಕಳ್ಳರ ಬಂಧನ‌

ಧಾರವಾಡ: 10 ಕ್ವಿಂಟಾಲ್‌ ಕಡಲೆ ಕದ್ದು ಪರಾರಿಯಾಗಿದ್ದ ಕಳ್ಳರನ್ನು ಪೊಲೀಸರು ಬಂಧಿಸಿ ಕಡಲೆ ಹಾಗೂ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಹಳ್ಳಿಕೇರಿ ಗ್ರಾಮದಲ್ಲಿ ಗ್ರಾಮದಲ್ಲಿ ಕಳ್ಳರು ಕಡಲೆ ಕದ್ದು ಪರಾರಿಯಾಗಿದ್ದರು. ರಾಜೇಸಾಬ, ಕಿರಣ್, ಬಸವರಾಜ್, ದಾವಲಸಾಬ ಎಂಬುವವರನ್ನು ಪೊಲೀಸರು ಬಂಧಿಸಿ, ಸುಮಾರು 10 ಕ್ವಿಂಟಾಲ್ ಕಡಲೆ ಹಾಗೂ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Bangalore Airport: ಮಲೇಶಿಯಾ ಪ್ರಯಾಣಿಕರ ಒಳಉಡುಪಿನಲ್ಲಿತ್ತು ಫಳ ಫಳ ಹೊಳೆಯುವ ಚಿನ್ನ!

ಬೀದರ್‌ನಲ್ಲಿ 150 ಕೆ.ಜಿ ಗಾಂಜಾ ವಶ

ಬೀದರ್: ಜಿಲ್ಲೆಯ ಎಕಂಬಾ ಚೆಕ್‌ ಪೋಸ್ಟ್‌ನಲ್ಲಿ ಇಬ್ಬರು ಅಂತಾರಾಜ್ಯ ಗಾಂಜಾ ಸಾಗಾಟಗಾರರನ್ನು ಪೊಲೀಸರು ಬಂಧಿಸಿ, 150 ಕೆ.ಜಿ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. ತೆಲಂಗಾಣದಿಂದ ಬೀದರ್ ‌ಮಾರ್ಗವಾಗಿ ಮುಂಬೈಗೆ ಬೊಲೆರೋದಲ್ಲಿ ಗಾಂಜಾ ಸಾಗಿಸುತ್ತಿದ್ದಾಗ ಇಬ್ಬರು ಔರಾದ್ ಪೋಲಿಸರಿಗೆ ಸಿಕ್ಕಿಬಿದ್ದಿದ್ದಾರೆ.

ಬಂಧಿತರಿಂದ 1.5 ಕೋಟಿ ರೂಪಾಯಿ ಮೌಲ್ಯದ 150 ಕೆಜಿಯಷ್ಟು ಗಾಂಜಾ ವಶಕ್ಕೆ ಪಡೆಯಲಾಗಿದೆ. ಕಾರ್ಯಾಚರಣೆ ನಡೆಸಿದ ಔರಾದ್ ಪೋಲಿಸರ ಕಾರ್ಯವೈಖರಿಗೆ ಬೀದರ್ ಎಸ್‌ಪಿ ಮೆಚ್ಚುಗೆ ವ್ಯಕ್ತಪಡಿಸಿ, ಬಹುಮಾನ ಘೋಷಿಸಿದ್ದಾರೆ.

Exit mobile version