Site icon Vistara News

ಸಾವರ್ಕರ್‌ ಕುರಿತ ಪುಸ್ತಕದ 2 ಲಕ್ಷ ಪ್ರತಿ ಮಾರಾಟ ಎಂದ ಚಕ್ರವರ್ತಿ ಸೂಲಿಬೆಲೆ

Chakravarty sulibele

ಬೆಳಗಾವಿ: ವಿವಾದದ ರೂಪ ಪಡೆಯುತ್ತಿರುವ ಪಠ್ಯಪುಸ್ತಕ ಪರಿಷ್ಕರಣೆಗೆ ಸರ್ಕಾರದ ‌ಮೇಲೆ ಒತ್ತಡ ಹೇರುವ ಬದಲು, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕ್ರಾಂತಿಕಾರಿಗಳ ಬಗ್ಗೆ ಪ್ರಚಾರ ಮಾಡಲು ನವಮಾಧ್ಯಮವನ್ನು ಬಳಸಿಕೊಳ್ಳಬೇಕು ಎಂದು ಯುವಾ ಬ್ರಿಗೇಡ್‌ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಬೆಳಗಾವಿಯ ಗೋಗಟೆ ಕಾಲೇಜಿನಲ್ಲಿ ಪ್ರಬುದ್ಧ ಭಾರತ ಸಂಸ್ಥೆಯಿಂದ ಆಯೋಜಿಸಲಾಗಿದ್ದ ಐಎನ್ಎ 80ನೇ ಸಂಸ್ಥಾಪನಾ ಕಾರ್ಯಕ್ರಮದಲ್ಲಿ ಮಾತನಾಡುತ್ತ, ಸುಭಾಷ್ ಚಂದ್ರ ಬೋಸ್ ಬಗ್ಗೆ ಪಠ್ಯದಲ್ಲಿ ಬರಬೇಕು ಎಂಬ ನಾಗರಿಕನ ಪ್ರಶ್ನೆಗೆ ಸ್ಪಂದಿಸಿದರು. ಸುಭಾಷ್ ಚಂದ್ರ ಬೋಸ್ ಕನ್ನಡದವರಲ್ಲ ಎಂದು ಕೆಲವರು ವಿವಾದ ಎಬ್ಬಿಸುತ್ತಾರೆ. ಬೋಸರು ತನ್ನ ರಾಜ್ಯಕ್ಕಾಗಿ ಅಲ್ಲ, ದೇಶದ ಸ್ವಾತಂತ್ರ್ಯಕ್ಕೆ ಶ್ರಮಿಸಿದವರು. ಪಠ್ಯಪುಸ್ತಕದಲ್ಲಿ ಸಣ್ಣ ಬದಲಾವಣೆ ತರಲು ಹೊರಟರೆ ದೊಡ್ಡ ಗಲಾಟೆ ಆಗುತ್ತದೆ ಎಂದರು.

ಇದನ್ನೂ ಓದಿ | Crime | 12 ಕೋಟಿ ರೂ. ಮೌಲ್ಯದ ಮೊಬೈಲ್‌ ಕದ್ದ ಪ್ರಕರಣವನ್ನು ಪೊಲೀಸರು 24 ಗಂಟೆಯಲ್ಲಿ ಭೇದಿಸಿದ್ದು ಹೇಗೆ?

“ಪಠ್ಯಪರಿಷ್ಕರಣೆಗೆ ಸರ್ಕಾರವನ್ನು ನೆಚ್ಚಿಕೊಂಡು ಕೂರದೇ ನವಮಾಧ್ಯಮ ಬಳಕೆಗೆ ಯುವ ಸಮೂಹ ಮುಂದಾಗಬೇಕು. ಸಾಮಾಜಿಕ ಜಾಲತಾಣಗಳ ಮೂಲಕ ಕ್ರಾಂತಿಕಾರಿಗಳ ಬಗ್ಗೆ ತಿಳಿಸಿಕೊಡಬಹುದು. ಸಾವರ್ಕರ್ ಬಗ್ಗೆಯೂ ವಿಡಿಯೊ ಮೂಲಕ ಶಾಲೆಗಳಿಗೆ ತಲುಪಿಸಲಾಗಿದೆ. 13 ನಿಮಿಷದ ಸಾವರ್ಕರ್ ವಿಡಿಯೊ ಅನೇಕ ಶಾಲೆಗಳ ಮಕ್ಕಳಿಗೆ ತೋರಿಸಲಾಗಿದೆ. ಶಿಕ್ಷಕರು, ಮಕ್ಕಳಿಂದಲೂ ಉತ್ತಮ ಪ್ರತಿಕ್ರಿಯೆ ಬಂದಿದ್ದು, ಇನ್ನೂ ವಿಡಿಯೋ ಕಳುಹಿಸುವಂತೆ ಕೋರಿದ್ದಾರೆ. ಕ್ರಾಂತಿಕಾರಿಗಳ ಮಾಹಿತಿ ತಲುಪಿಸಲು ಸ್ವಇಚ್ಛೆಯಿಂದ ಜನರು ಮುಂದೆ ಬರಬೇಕು” ಎಂದು ಸಲಹೆ ನೀಡಿದರು.

“ವೀರ ಸಾವರ್ಕರ್‌ ಬಗ್ಗೆ ಕೀಳಾಗಿ ಮಾತನಾಡಿದಾಗ ನಮ್ಮ ಮುಂದೆ ಎರಡು ದಾರಿಗಳಿದ್ದವು. ಸಾವರ್ಕರ್ ಬೈದವರ ಮನೆಗೆ ಕಲ್ಲು ಹೊಡೆಯುವುದು, ಇಲ್ಲವೆಂದರೆ ಮನೆ ಮನೆಗೂ ಸಾವರ್ಕರ್ ಬಗ್ಗೆ ಜಾಗೃತಿ ಮೂಡಿಸುವುದು. ನಾವು ವೀರ ಸಾವರ್ಕರ್‌ ಬಗ್ಗೆ ಮನೆ ಮನೆಗೂ ತೆರಳಿ ಜಾಗೃತಿ ಮೂಡಿಸುತ್ತಿದ್ದೇವೆ. ರಾಜ್ಯದ ಬಹುತೇಕ ಗಣಪತಿ ‌ಮಂಡಳಿಗಳಲ್ಲಿ ಸಾವರ್ಕರ್ ಫೋಟೊ ಇರಲಿದೆ” ಎಂದು ಹೇಳಿದರು.

“ಸಾವರ್ಕರ್‌ಗೆ ಯಾರೋ ಒಬ್ಬ ನಾಯಕ ಬೈದಿದ್ದನ್ನೇ ನಾವು ಅವಕಾಶವಾಗಿ ಸ್ವೀಕರಿಸಿದೆವು, ಅವರಿಗೆ ಧನ್ಯವಾದ ಹೇಳುತ್ತೇನೆ. ಮುಂದಿನ ವರ್ಷ ಮತ್ತೊಬ್ಬ ಕ್ರಾಂತಿಕಾರಿಯನ್ನು ಬಯ್ಯುವಂತೆಯೂ ಕೇಳಿಕೊಳ್ಳುತ್ತೇವೆ. ಸಾವರ್ಕರ್ ಬಗ್ಗೆ ಹೊರತಂದಿರುವ ಪುಸ್ತಕ ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ. ನಮ್ಮ ಗುರಿ 10 ಸಾವಿರ ಪ್ರತಿ ಮಾರಾಟ ಮಾಡುವುದು ಇತ್ತು, ಆದರೆ 2 ಲಕ್ಷ ಪ್ರತಿ ಮಾರಾಟವಾಗಿವೆ” ಎಂದರು.

ನೀವು ಸಿಎಂ ಆಗಬೇಕು ಎಂದು ವ್ಯಕ್ತಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ ಅವರು, “ಯುವ ಸಮೂಹವನ್ನು ರಾಷ್ಟ್ರಭಕ್ತಿಯಿಂದ ಕದಲದಂತೆ ನೋಡಿಕೊಳ್ಳಬೇಕಿದೆ. ಆದರೆ ನಾನು ಸಿಎಂ ಆದರೆ ಇದರಲ್ಲಿ ಕೊರತೆ ಆಗಬಹುದೆಂಬ ಭಯ ನನ್ನದು” ಎಂದರು.

ಇದನ್ನೂ ಓದಿ | ನಕಲಿ ಆಧಾರ್‌ ನೋಂದಣಿ ಕೇಂದ್ರಗಳ ಮೇಲೆ ದಾಳಿ ನಡೆಸಿ ನಾಲ್ವರ ಬಂಧನ, ಉಗ್ರ ನಂಟಿನ ಶಂಕೆ

Exit mobile version