Site icon Vistara News

CM Basavaraja bommai | ಹೂಡಿಕೆದಾರರ ಸಮಾವೇಶದಲ್ಲಿ ಕರಾವಳಿಗೆ 2 ಲಕ್ಷ ಕೋಟಿ ರೂ. ಬಂಡವಾಳ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳೂರಿನಲ್ಲಿ

ಮಂಗಳೂರು: ಶುಕ್ರವಾರ ಮುಕ್ತಾಯಗೊಂಡ ಬಂಡವಾಳ ಹೂಡಿಕೆದಾರರ ಸಮಾವೇಶ (BTS 2022)ದಲ್ಲಿ ರಾಜ್ಯದಲ್ಲಿ ಹಲವು ಕೋಟಿ ರೂಪಾಯಿಗಳ ಹೂಡಿಕೆ ಹರಿದುಬಂದಿದೆ. ಈ ಪೈಕಿ ಕರಾವಳಿಯಲ್ಲಿ ಒಂದುವರೆಯಿಂದ ಎರಡು ಲಕ್ಷ ಕೋಟಿ ರೂ. ಹೂಡಿಕೆ ಆಗುವ ಸಾಧ್ಯತೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraja Bommai) ಹೇಳಿದ್ದಾರೆ. ಕರಾವಳಿಯಲ್ಲಿ ನವೀಕರಿಸಬಹುದಾದ ಇಂಧನ, ಹೈಡ್ರೋಜನ್ ಇಂಧನ ಮತ್ತು ಕಡಲ ನೀರಿನಿಂದ ಅಮೋನಿಯಾ ಉತ್ಪಾದನೆ ಉದ್ಯಮದಲ್ಲಿ ಹೂಡಿಕೆ ಹರಿದು ಬರುವ ನಿರೀಕ್ಷೆ ಇದೆ ಎಂದು ಅವರು ನುಡಿದರು. ಮಂಗಳೂರಿನಲ್ಲಿ ನಾನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗಮಿಸಿದ ಅವರು ಬಜ್ಪೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಹಸಿರು ಯೋಜನೆ
ಉತ್ಪಾದನೆಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ತಯಾರಿ ನಡೆಸಲಾಗಿದೆ. ಈಗಾಗಲೇ ಮೂರು ನವೀಕರಿಸಬಹುದಾದ ಇಂಧನ ಕಂಪೆನಿಗಳೊಂದಿಗೆ ರಾಜ್ಯ ಉನ್ನತ ಮಟ್ಟದ ಅನುಮೋದನಾ ಸಮಿತಿಯಲ್ಲಿ ಅನುಮೋದನೆ ನೀಡಲಾಗಿದೆ. ಬಹಳ ವೇಗದಲ್ಲಿ ಕೆಲಸಗಳಾಗುತ್ತಿದ್ದು, ಮಾರ್ಚ್-ಏಪ್ರಿಲ್ ವೇಳೆಗೆ ಕೆಲಸ ಪ್ರಾರಂಭ ಮಾಡುವುದಾಗಿ 2-3 ಕಂಪನಿಗಳು ಹೇಳಿವೆ. ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಕರಾವಳಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಮುಖ್ಯ ಪಾತ್ರ ವಹಿಸಿದೆ. ಹೈಡ್ರೋಜನ್ ಹಾಗೂ ಅಮೋನಿಯಾ ಉತ್ಪಾದನೆಯ ಎರಡು ಪ್ರಮುಖ ಯೋಜನೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬರಲಿದ್ದು, ಗಲ್ಫ್ ದೇಶದಲ್ಲಿ ಮತ್ತು ಮಂಗಳೂರಿನಲ್ಲಿ ತಲೆ ಎತ್ತಲಿದೆ. ಮಂಗಳೂರಿನ ಆಸುಪಾಸಿನಲ್ಲಿ ಕಡಲ ನೀರಿನಿಂದ ಅಮೋನಿಯಾ ತಯಾರು ಮಾಡುವ ಪ್ರಮುಖ ಘಟ್ಟ ಬರಲಿದೆ. ನವೀಕರಿಸಬಹುದಾದ ಇಂಧನ ಘಟಕ್ಕೆ ಅಗತ್ಯ ವಿರುವ ಇಂಧನವನ್ನೂ ನವೀಕರಿಸಬಹುದಾದ ಇಂಧನ ಮೂಲಗಳಾದ ಸೋಲಾರ್, ವಿಂಡ್ ಮಿಲ್ ಗಳಿಂದಲೇ ಪಡೆಯಲಾಗುವುದು. ಸಂಪೂರ್ಣವಾಗಿ ಹಸಿರು ಯೋಜನೆಯಾಗಲಿದೆ ಎಂದರು.ನೇರ ಹಾಗೂ ಪರೋಕ್ಷವಾಗಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಜನೆಯಾಗಿ ಈ ಭಾಗದ ಯುವಕರಿಗೆ ಅವಕಾಶಗಳ ಬಾಗಿಲು ತೆರೆಯಲಿದೆ ಎಂದರು.

ಆದ್ಯತೆ ಮೇರೆಗೆ ಮಂಗಳೂರು- ಬೆಂಗಳೂರು ಹೆದ್ದಾರಿ ದುರಸ್ತಿ
ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ದುರಸ್ತಿ ಕಾಮಗಾರಿ ನಿರಂತರವಾಗಿ ಮಳೆ ಬಂದಿದ್ದರಿಂದ ತಡವಾಗಿದೆ. ಮುಂದಿನ ವಾರ ದೆಹಲಿಗೆ ತೆರಳಲಿದ್ದು, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಬೇಕಿದೆ. ಈ ವಾರದಲ್ಲಿ ಅದಕ್ಕೆ ಪೂರಕವಾಗಿ ಇಡೀ ರಾಜ್ಯದ ರಾಷ್ಟ್ರೀಯ ಹೆದ್ದಾರಿಗಳ ಬಗ್ಗೆ ಸಭೆ ಕರೆಯಲಾಗುವುದು. ಆದ್ಯತೆ ಮೇರೆಗೆ ಮಂಗಳೂರು- ಬೆಂಗಳೂರು ಹೆದ್ದಾರಿ ದುರಸ್ತಿ ಕೆಲಸಗಳಾದ ಸುರಂಗ ಮಾರ್ಗ, ವೈಟ್ ಟಾಪಿಂಗ್ ಮುಂತಾದ ಕೆಲಸ ಕೈಗೆತ್ತಿಕೊಳ್ಳಲಾಗುವುದು. ಅಲ್ಪಾವಧಿ ಕಾಮಗಾರಿಯಲ್ಲಿ ರಸ್ತೆಯಲನ್ನು ಬಳಕೆಗೆ ಯೋಗ್ಯವಾಗಿಸುವುದು ಹಾಗೂ ದೀರ್ಘಾವಧಿ ಕಾಮಗಾರಿ ಗಳಲ್ಲಿ ಸುರಂಗ ಮಾರ್ಗ ನಿರ್ಮಾಣ ಕೈಗೊಳ್ಳಲಾಗುವುದು ಎಂದರು.

ತೀವ್ರಗತಿಯಲ್ಲಿ ಪೊಲೀಸ್ ತನಿಖೆ
ವಿರೋಧ ಪಕ್ಷದವರು ನ್ಯಾಯಮೂರ್ತಿಗಳಿಂದ ತನಿಖೆಗೆ ಒತ್ತಾಯಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಅವರು ಎಲ್ಲದ್ದಕ್ಕೂ ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ್ದಾರೆ. ಅವರು ಅಧಿಕಾರದಲ್ಲಿದ್ದಾಗ ಬಿಡಿಎ ವಿಚಾರದಲ್ಲಿ ನ್ಯಾಯಾಂಗ ತನಿಖೆಯಾದಾಗ ಅದರಿಂದ ಪಾರಾಗಲು ಅನುಕೂಲವಾಯಿತು. ಶೀಘ್ರವಾಗಿ ಅಪರಾಧದ ವಿರುದ್ಧ ಪೊಲೀಸ್ ಕೆಲಸ ಮಾಡುತ್ತದೆ. ಈಗಾಗಲೇ ಬಂಧವವೂ ಆಗಿದೆ. ತೀವ್ರಗತಿಯಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಇದನ್ನೂ ಓದಿ | BTS 2022 | ಬೆಂಗಳೂರಿನಿಂದಾಚೆಗೆ ಉದ್ದಿಮೆಗಳ ಬೆಳವಣಿಗೆಗೆ ಆದ್ಯತೆ, ವರದಿ ಬಿಡುಗಡೆ

Exit mobile version