ಮಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ(Amrit Mahotsav) ಹಿನ್ನೆಲೆಯಲ್ಲಿ ಮುಲ್ಕಿ-ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ವತಿಯಿಂದ 100 ಮೀಟರ್ ಉದ್ದದ ಬೃಹತ್ ರಾಷ್ಟ್ರಧ್ವಜದ ಜತೆ ಬರೋಬ್ಬರಿ 28 ಕಿ.ಮೀ ನಡಿಗೆ ಕಾರ್ಯಕ್ರಮ ಭಾನುವಾರ ಆಯೋಜಿಸಲಾಗಿತ್ತು.
ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಬೃಹತ್ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. 100 ಮೀ. ತ್ರಿವರ್ಣ ಧ್ವಜ ಹಿಡಿದು ಬರೋಬ್ಬರಿ 28 ಕಿ.ಮೀ ನಡಿಗೆಯಲ್ಲಿ 5 ಸಾವಿರಕ್ಕೂ ಅಧಿಕ ದೇಶಭಕ್ತರು ಪಾಲ್ಗೊಂಡಿದ್ದರು. ಸ್ವಾತಂತ್ರ್ಯ ಹೋರಾಟಗಾರ ಕಾರ್ನಾಡು ಸದಾಶಿವ ರಾಯರ ಊರಿನಿಂದ ವೀರ ರಾಣಿ ಅಬ್ಬಕ್ಕನ ಊರಾದ ಮೂಡಬಿದ್ರೆಗೆ ಯಾತ್ರೆ ಸಾಗಿತು. ಮುಲ್ಕಿಯ ಬಪ್ಪನಾಡು ದೇವಸ್ಥಾನದಿಂದ ಮೂಡಬಿದ್ರೆಗೆ ತಿರಂಗಾ ಯಾತ್ರೆ ಹಮ್ಮಿಕೊಂಡಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಯಾತ್ರೆಗೆ ಚಾಲನೆ ನೀಡಿದರು.
ಇದನ್ನೂ ಓದಿ | Amrit Mahotsav | ಕೆಂಪು ಕೋಟೆ ಮೇಲೆ ಮೊದಲ ಬಾರಿ ಬುಲೆಟ್‌ಪ್ರೂಫ್ ಶೀಲ್ಡ್‌ನಲ್ಲಿ ಮೋದಿ ಭಾಷಣ?
ಮೂಡಬಿದ್ರೆ ಶಾಸಕ ಉಮಾನಾಥ್ ಕೋಟ್ಯಾನ್ ನೇತೃತ್ವದಲ್ಲಿ ನಡೆದ ಈ ಯಾತ್ರೆಯಲ್ಲಿ 100 ಮೀ. ಉದ್ದದ ಬಾವುಟವನ್ನು ಎರಡೂ ಬದಿಯಲ್ಲಿ ಹಿಡಿದು ಸಾಗಲಾಯಿತು. ಕಿನ್ನಿಗೋಳಿ, ನಿಡ್ಡೋಡಿ, ಕಲ್ಲಮುಂಡ್ಕೂರು, ವಿದ್ಯಾಗಿರಿ ಮೂಲಕ ಯಾತ್ರೆ ಮೂಡಬಿದ್ರೆ ತಲುಪಿದೆ. ಯಾತ್ರೆ ಸಾಗುವ ದಾರಿಯಲ್ಲಿ ತಿರಂಗಾ ಯಾತ್ರೆ ಸ್ವಾಗತಿಸಿ ಸಂಭ್ರಮಿಸಿದ್ದು, ಈ ವೇಳೆ ದೇಶದ ಸಂಸ್ಕೃತಿ ಮತ್ತು ಪರಂಪರೆ ಪರಿಚಯಿಸುವ ಪ್ರದರ್ಶನ ಆಯೋಜಿಸಲಾಗಿತ್ತು. ಯಾತ್ರೆಗೆ ಸ್ತಬ್ಧ ಚಿತ್ರ, ಕಲಾ ತಂಡಗಳು ಮೆರುಗು ನೀಡಿದವು, ನೂರಾರು ಮಹಿಳೆಯರು, ಮಕ್ಕಳು ಭಾಗವಹಿಸಿದ್ದರು.
ಸೂರತ್‌ನಿಂದ ತಂದ 100 ಮೀಟರ್ ಧ್ವಜ
ವಿಭಿನ್ನ ಕಾರ್ಯಕ್ರಮದ ಆಯೋಜನೆಯ ಪರಿಕಲ್ಪನೆ ಹಾಕಿಕೊಂಡು ಇಂಥದ್ದೊಂದು ಬೃಹತ್ ಧ್ವಜ ಸಿದ್ಧಪಡಿಸಲಾಗಿದೆ. ಮೊದಲೇ ಆರ್ಡರ್ ಕೊಟ್ಟು ಸೂರತ್‌ನಲ್ಲಿ ಈ ಬೃಹತ್ ಧ್ವಜ ತಯಾರಿಸಲಾಗಿದೆ. 100 ಮೀ ಉದ್ದ ಮತ್ತು 9.3 ಮೀ ಅಗಲದ ಬೃಹತ್ ರಾಷ್ಟ್ರಧ್ವಜ ಇದಾಗಿದ್ದು, ಮೂಡಬಿದ್ರೆ ಬಿಜೆಪಿ ಮಂಡಲ ಮತ್ತು ಯುವಮೋರ್ಚಾ ಇದರ ಜವಾಬ್ದಾರಿ ಹೊತ್ತಿತ್ತು. ಅಲ್ಲದೇ ಧ್ವಜದ ಗೌರವಕ್ಕೆ ಚ್ಯುತಿ ಬಾರದಂತೆ 28 ಕಿ.ಮೀ ಹಿಡಿದು ಸಾಗಬೇಕಾಗಿತ್ತು. ಹೀಗಾಗಿ ಮೊದಲೇ ಎಲ್ಲರಿಗೂ ಅಗತ್ಯ ಸೂಚನೆಗಳನ್ನು ನೀಡಲಾಗಿತ್ತು. ಅಲ್ಲದೇ ಸಾಗುವ ದಾರಿಯಲ್ಲಿ ಅಲ್ಲಲ್ಲಿ ಜನರು ಪುಷ್ಪಾರ್ಚಣೆ ಮೂಲಕ ಧ್ವಜವನ್ನು ಸ್ವಾಗತಿಸಿದರು. ಇನ್ನು ಇಷ್ಟು ದೂರ, ಇಷ್ಟು ಉದ್ದದ ತಿರಂಗಾ ಯಾತ್ರೆ ರಾಜ್ಯದಲ್ಲೇ ಮೊದಲು ಎನ್ನುತ್ತಾರೆ ತಿರಂಗಾ ಯಾತ್ರೆ ಅಭಿಯಾನ ಸಮಿತಿ ಸಂಚಾಲಕ ಅಭಿಲಾಷ್ ಶೆಟ್ಟಿ ಕಟೀಲು.
ಇದನ್ನೂ ಓದಿ | Amrit Mahotsav | ತಾಯ್ನಾಡನ್ನು ತೆಗಳಿ ಭಾರತವನ್ನು ಹೊಗಳಿದ ಪಾಕ್ ಮಾಜಿ ಪ್ರಧಾನಿ!