ಬೆಂಗಳೂರು: ರಾಜಧಾನಿಯ ಸಮೀಪದಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವ ಸಂಬಂಧವಾಗಿ ಮೂಲಸೌಕರ್ಯ ಅಭಿವೃದ್ಧಿ ಮತ್ತು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ (MB Patil), ವಿಮಾನಯಾನ ವಲಯದ ಪ್ರಮುಖರ ಜತೆ ಮತ್ತೊಂದು ಸುತ್ತಿನ ವಿಸ್ತೃತ ಚರ್ಚೆ ನಡೆಸಿದ್ದಾರೆ.
ವಿಧಾನಸೌಧದ ಸಚಿವರ ಕಚೇರಿಯಲ್ಲಿ ನಡೆದ ಈ ಮಹತ್ವದ ಸಭೆಯಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದ (ಬಿಐಎಎಲ್) ಸಿಇಒ ಹರಿ ಮರಾರ್, ಕ್ಯಾಪ್ಟನ್ ಗೋಪಿನಾಥ್, ಮುಖ್ಯಮಂತ್ರಿಯವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಡಾ.ಎನ್. ಮಂಜುಳಾ, ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ಕರ್ನಾಟಕ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸತೀಶ, ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಉಪ ಕಾರ್ಯದರ್ಶಿ ಹೆಬ್ಸಿಬಾ ಕೋರ್ಲಪಟ್ಟಿ ಉಪಸ್ಥಿತರಿದ್ದರು.
ಇದನ್ನೂ ಓದಿ: Tomato Price: ದಿಢೀರ್ ಕುಸಿದ ಟೊಮೆಟೊ ಬೆಲೆ, ಕೋಲಾರ ಎಪಿಎಂಸಿಯಲ್ಲಿ ತಳಮಳ
ಬಳಿಕ ಮಾತನಾಡಿದ ಸಚಿವರು, ‘ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಮತ್ತು ವಿಮಾನ ಪ್ರಯಾಣಿಕರ ದಟ್ಟಣೆ ಅನುಭವಿಸುತ್ತಿರುವ ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ ಬೇಕೆನ್ನುವುದರಲ್ಲಿ ಅನುಮಾನವಿಲ್ಲ. ಸ್ಥಳದ ಆಯ್ಕೆ ಇತ್ಯಾದಿಗಳನ್ನು ಇನ್ನೂ ಆಖೈರುಗೊಳಿಸಿಲ್ಲ. ಈ ಬಗ್ಗೆ ಮತ್ತಷ್ಟು ಸಮಾಲೋಚನಾ ಸಭೆಗಳನ್ನು ನಡೆಸುವ ಅಗತ್ಯವಿದೆ’ ಎಂದರು.
ಈ ಯೋಜನೆಯನ್ನು ಹೇಗೆ ಮುಂದಕ್ಕೆ ಕೊಂಡೊಯ್ಯಬೇಕು ಎನ್ನುವ ಬಗ್ಗೆ ಉದ್ಯಮಿಗಳು ಮತ್ತು ಸಂಬಂಧಿಸಿದ ಅಧಿಕಾರಿಗಳು ಸಭೆಯಲ್ಲಿ ಸಲಹೆಗಳನ್ನು ನೀಡಿದ್ದಾರೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಸಭೆಗಳು ನಡೆಯಲಿವೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Paris Olympic: ರೋಯಿಂಗ್ನಲ್ಲಿ ಶುಭ ಸುದ್ದಿ; ಶೂಟಿಂಗ್ನಲ್ಲಿ ನಿರಾಸೆ ಮೂಡಿಸಿದ ಮಿಶ್ರ ತಂಡ
ಪ್ರಯಾಣಿಕರ ದಟ್ಟಣೆ ಮತ್ತು ಕೈಗಾರಿಕಾ ಅಗತ್ಯ ಎರಡನ್ನೂ ಯೋಜನೆಯಲ್ಲಿ ಪರಿಗಣಿಸುವ ಚಿಂತನೆ ಇದೆ. ಜತೆಗೆ ಭೂಮಿಯ ಲಭ್ಯತೆ ಇತ್ಯಾದಿ ತಾಂತ್ರಿಕ ಅಂಶಗಳ ಕಡೆಗೂ ಗಮನಹರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.