Site icon Vistara News

2nd PU Exam 2023: ಹಾಲ್‌ ಟಿಕೆಟ್‌ ಇದ್ದರೂ 48 ವಿದ್ಯಾರ್ಥಿಗಳಿಗೆ ಪರೀಕ್ಷೆ ನಿರಾಕರಣೆ; ವಿಷ ಸೇವಿಸಿದ ವಿದ್ಯಾರ್ಥಿನಿ

#image_title

ವಿಜಯನಗರ: ರಾಜ್ಯಾದ್ಯಂತ ಗುರುವಾರದಿಂದ ದ್ವಿತೀಯ ಪಿಯುಸಿ ಪರೀಕ್ಷೆ (2nd PU Exam 2023) ಶುರುವಾಗಿದ್ದು, ಪರೀಕ್ಷೆಗೆ ಹಾಜರಾಗಲು ನಿರಾಕರಿಸಿದ್ದಕ್ಕೆ ವಿದ್ಯಾರ್ಥಿನಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ವಿಜಯನಗರದಲ್ಲಿ ನಡೆದಿದೆ. ಹರಪನಹಳ್ಳಿ ತಾಲೂಕಿನ ಅಳ್ಳೀಕೇರೆ ತಾಂಡದ ವಿದ್ಯಾರ್ಥಿನಿ ದೀಪಾ (17) ಆತ್ಮಹತ್ಯೆಗೆ ಯತ್ನಿಸಿದವಳು.

ಹರಪನಹಳ್ಳಿ ಪಟ್ಟಣ ಎಚ್‌ಪಿಎಸ್ ಕಾಲೇಜಿನಲ್ಲಿ ಹಾಲ್ ಟಿಕೆಟ್ ಇಲ್ಲದೆ ಇತ್ತ ಪರೀಕ್ಷೆ ಬರೆಯಲು ಬಿಡದಿದ್ದಕ್ಕೆ 48 ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾದರು. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಹರಪನಹಳ್ಳಿ ಸರ್ಕಾರಿ ಪಿಯು ಕಾಲೇಜಿನ ಪರೀಕ್ಷಾ ಕೇಂದ್ರದ ಮುಂದೆ ಬೆಳಗ್ಗೆ ಪ್ರತಿಭಟನೆ ನಡೆಸಿದರು. ಹಾಜರಾತಿ ಕಡಿಮೆ ಇರುವ ಕಾರಣಕ್ಕೆ ಪರೀಕ್ಷೆ ಬರೆಯಲು ಅನುಮತಿ ‌ಕೊಟ್ಟಿಲ್ಲ ಎಂದು ಕಾಲೇಜು ಸಿಬ್ಬಂದಿ ಹೇಳಿದ್ದರು.

ಈ ವೇಳೆ ಆತ್ಮಹತ್ಯೆಗೆ ಯತ್ನಿಸಿದ ದೀಪಾಳನ್ನು ಕೂಡಲೆ ಆಸ್ಪತ್ರೆಗೆ ಸೇರಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಈ ಸಂಬಂಧ ಮಾತನಾಡಿರುವ ದೀಪಾ, ಕಳೆದ ಎರಡು ತಿಂಗಳಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದೆ, ಆದರೂ ಪರೀಕ್ಷೆಗಾಗಿ ಕಷ್ಟಪಟ್ಟು ಓದಿದ್ದೇನೆ. ಕಾಲೇಜಿನವರು ಪ್ರವೇಶ ಪತ್ರ ಕೊಟ್ಟು ಪರೀಕ್ಷೆಗೆ ಹಾಜರಾಗಬೇಡ ಎಂದಿದ್ದಾರೆ. ಹಾಜರಾತಿ ಕಡಿಮೆ ಎಂದು ಪರೀಕ್ಷೆಗೆ ಅವಕಾಶ ಕೊಟ್ಟಿಲ್ಲ. ಹಾಗಾದರೆ ಪ್ರವೇಶ ಪತ್ರ ಹೇಗೆ ಕೊಟ್ಟರು ಎಂದು ಪ್ರಶ್ನೆ ಮಾಡಿದ್ದಾಳೆ.

ಇದನ್ನೂ ಓದಿ: Murder Case | ಸಹೋದರಿಗೆ ಪದೇಪದೆ ಕಿರುಕುಳ ನೀಡುತ್ತಿದ್ದವನನ್ನು ಛತ್ರಿಯ ರಾಡ್‌ನಿಂದ ಇರಿದು ಕೊಂದ ಯುವಕ

ಸದ್ಯ ಹರಪನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ವಿದ್ಯಾರ್ಥಿನಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆಡಳಿತ ಮಂಡಳಿಯ ನಡೆಗೆ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version