ಬೆಂಗಳೂರು: ಇಂದಿನಿಂದ ರಾಜ್ಯಾದ್ಯಂತ ದ್ವಿತೀಯ ಪಿಯುಸಿ (2nd PU Exam 2023) ಪರೀಕ್ಷೆ ಶುರುವಾಗಿದೆ. ಪರೀಕ್ಷೆ ಆರಂಭಕ್ಕೂ ಮುನ್ನ ತಿಪಟೂರಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಸಚಿವ ಬಿ.ಸಿ. ನಾಗೇಶ್ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಪರೀಕ್ಷಾ ಕೊಠಡಿಗಳಿಗೆ ಭೇಟಿ ನೀಡಿ ಪರೀಕ್ಷಾ ಸಿದ್ಧತೆಗಳ ಪರಿಶೀಲನೆ ನಡೆಸಿದ ಸಚಿವರು, ಧೈರ್ಯವಾಗಿ ಪರೀಕ್ಷೆ ಎದುರಿಸುವಂತೆ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬಿದರು. ಇದೇ ವೇಳೆ ವಿದ್ಯಾರ್ಥಿಗಳಿಗೆ ಗುಲಾಬಿ ಹೂವು ನೀಡಿದರು.
ಗುರುವಾರದಿಂದ (ಮಾರ್ಚ್ 9) ದ್ವಿತೀಯ ಪಿಯುಸಿ ಪರೀಕ್ಷೆ (2nd PU Exam 2023) ಆರಂಭವಾಗಿದ್ದು, 1109 ಪರೀಕ್ಷಾ ಕೇಂದ್ರಗಳನ್ನು ಸಜ್ಜುಗೊಳಿಸಲಾಗಿದೆ. ಪರೀಕ್ಷೆಯು ಮಾರ್ಚ್ 29ರವರೆಗೆ ನಡೆಯಲಿದ್ದು, ಈ ಮೊದಲೇ ತಿಳಿಸಿದಂತೆ ಹಿಜಾಬ್ ಧರಿಸಿ ಬಂದವರಿಗೆ ಪರೀಕ್ಷಾ ಕೇಂದ್ರದೊಳಗೆ ಪ್ರವೇಶ ಇರುವುದಿಲ್ಲ.
ಮೇ ಮೊದಲ ವಾರ ಪಿಯುಸಿ ಫಲಿತಾಂಶ
ಈ ಬಾರಿ 1109 ಕೇಂದ್ರಗಳಲ್ಲಿ ಪರೀಕ್ಷೆ ಆರಂಭವಾಗಿದ್ದು, 7 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಈ ವರ್ಷ ತರಗತಿಗಳು ನಿಯಮಿತವಾಗಿ ನಡೆದರೂ ಕೋವಿಡ್ ಪರಿಣಾಮಗಳು ವಿದ್ಯಾರ್ಥಿಗಳಲ್ಲಿ ಇದ್ದೇ ಇರುತ್ತದೆ. ಹಾಗಾಗಿ ವಿದ್ಯಾರ್ಥಿ ಸ್ನೇಹಿ ಪ್ರಶ್ನೆಪತ್ರಿಕೆಯನ್ನು ರೂಪಿಸಲಾಗಿದೆ. ಬಹು ಆಯ್ಕೆ ಪ್ರಶ್ನೆಗಳು (ಎಂಸಿಕ್ಯೂ) ಮೂಲಕ ವಿದ್ಯಾರ್ಥಿಗಳ ಸಮಯ ಹೊಂದಾಣಿಕೆ ಮಾಡಲಾಗಿದೆ. ಪರೀಕ್ಷೆಯ ಎಲ್ಲ ಪ್ರಕ್ರಿಯೆಗಳು ಸಿಸಿಟಿವಿ ಕಣ್ಗಾವಲಿನಲ್ಲಿ ನಡೆಯುತ್ತಿದೆ. ಕಳೆದ ಬಾರಿಯಂತೆ ಈ ಬಾರಿಯೂ ತ್ರಿಮೆನ್ ಕಮಿಟಿ ಮೂಲಕ ಪರೀಕ್ಷೆಯು ಸುಸೂತ್ರವಾಗಿ ನಡೆಯುತ್ತಿದೆ. ಮೇ ತಿಂಗಳ ಮೊದಲ ವಾರದಲ್ಲಿ ಪರೀಕ್ಷೆ ಫಲಿತಾಂಶ ಬರಲಿದೆ ಎಂದು ಸಚಿವ ನಾಗೇಶ್ ತಿಳಿಸಿದರು.
ಶಿಕ್ಷಣ ಕಾಯಿದೆ ಪ್ರಕಾರ ಹಿಜಾಬ್ ಹಾಕಿಕೊಂಡು ಪರೀಕ್ಷೆ ಕೇಂದ್ರದಲ್ಲಿ ಪ್ರವೇಶ ಮಾಡಬಾರದು. ಕಳೆದ ಬಾರಿಯಂತೆ ಈ ಬಾರಿ ಆ ಸಮಸ್ಯೆ ಉದ್ಭವಿಸಲ್ಲ. ಹಿಜಾಬ್ ಸಮಸ್ಯೆ ಒಂದು ರಾಜಕೀಯ ಸಮಸ್ಯೆಯೇ ಹೊರತು ವಿದ್ಯಾರ್ಥಿಗಳಲ್ಲಿ ಆ ಸಮಸ್ಯೆ ಇಲ್ಲ. ಕಳೆದ ವರ್ಷಕ್ಕಿಂತ ಈ ವರ್ಷ ಆ ಸಮುದಾಯದ ಹೆಣ್ಣು ಮಕ್ಕಳು ಹೆಚ್ಚಿಗೆ ಸಂಖ್ಯೆಯಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ. ಆ ಧರ್ಮದ ಹೆಚ್ಚೆಚ್ಚು ಮಕ್ಕಳು ಪರೀಕ್ಷೆ ಬರೆದು ಭವಿಷ್ಯ ರೂಪಿಸಿಕೊಳ್ಳುತ್ತಾರೆ ಎಂಬ ವಿಶ್ವಾಸ ಇದೆ ಎಂದರು.
ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ: ಸಚಿವ ಆರಗ ಜ್ಞಾನೇಂದ್ರ
ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಶುಭ ಕೋರಿದರು. ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಬೇಕು. ಜೀವನದಲ್ಲಿ ಪಿಯುಸಿ ಪರೀಕ್ಷೆ ಒಂದು ದೊಡ್ಡ ಮೈಲುಗಲ್ಲು, ಬದುಕು ಯಾವ ದಿಕ್ಕಿಗೆ ಹೋಗಬೇಕು ಎಂದು ನಿರ್ಧಾರ ಮಾಡುವ ಮಹತ್ವದ ಪರೀಕ್ಷೆ ಇದಾಗಿದೆ. ಹೀಗಾಗಿ ಎಲ್ಲರೂ ಉತ್ತಮವಾಗಿ ಪರೀಕ್ಷೆ ಬರೆಯಿರಿ, ಎಲ್ಲರಿಗೂ ಒಳ್ಳೆಯದಾಗಲಿ ಎಂದರು.
ಇದನ್ನೂ ಓದಿ: PUC Exam 2023: ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ, ಬಿಗಿ ಭದ್ರತೆ,
ಹಿಜಾಬ್ ಧರಿಸಿ ಪರೀಕ್ಷಾ ಕೇಂದ್ರಕ್ಕೆ ಬಂದ ವಿದ್ಯಾರ್ಥಿನಿಯರು
ಬೆಳಗಾವಿಯ ಸರ್ದಾರ್ ಕಾಲೇಜು ಪರೀಕ್ಷಾ ಕೇಂದ್ರಗಳಿಗೆ ಕೆಲವು ವಿದ್ಯಾರ್ಥಿಗಳು ಹಿಜಾಬ್ ಧರಿಸಿಯೇ ಆಗಮಿಸಿದ್ದರು. ಈ ವರ್ಷವೂ ಪರೀಕ್ಷಾ ಕೊಠಡಿಯೊಳಗೆ ಹಿಜಾಬ್ ಧರಿಸಲು ಅವಕಾಶ ಇಲ್ಲ. ಹೀಗಾಗಿ ಹಿಜಾಬ್ ತೆಗೆದಿಟ್ಟು ಪರೀಕ್ಷಾ ಕೊಠಡಿಯೊಳಗೆ ವಿದ್ಯಾರ್ಥಿನಿಯರು ಪ್ರವೇಶಿಸಿದರು.
ರಾಜ್ಯದ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ